




ಕ್ರೀಡಾ ಸಾಧಕಿಯ ಉಜ್ವಲ ಭವಿಷ್ಯಕ್ಕೆ ಯು.ಆರ್. ಪ್ರಾಪರ್ಟೀಸ್ನ ಉಜ್ವಲ್ ಪ್ರಭು ಸಾಥ್



ಪುತ್ತೂರು: ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ 2025-2026ರ ಹರ್ಡಲ್ಸ್ ಹಾಗೂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಜೆ.ಎಂ. ಕೀರ್ತಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.





ಕೀರ್ತಿ ಅವರ ಕ್ರೀಡಾ ಸಾಧನೆಗೆ ಪುತ್ತೂರಿನ ಯು.ಆರ್. ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಅವರು ಪ್ರತಿ ಹಂತದಲ್ಲೂ ಪ್ರೋತಾಹಿಸುತ್ತಾ ಬಂದಿದ್ದಾರೆ. ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಿನ್ನಲೆಯಲ್ಲಿ ಪುತ್ತೂರಿನ ಯು.ಆರ್. ಪ್ರಾಪರ್ಟೀಸ್ ಕಛೇರಿಯಲ್ಲಿ ಕೀರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿಸಿದ ಬಳಿಕ ಮಾತನಾಡಿದ ಉಜ್ವಲ್ ಪ್ರಭು ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ವಾರ್ಷಿಕ ವರದಿ ಓದುವಾಗ ಶಾಲೆಯ ನೂತನ ಯೋಜನೆಗೆ ದಾನ ನೀಡಿದವರ ಹೆಸರು ಘೋಷಿಸಲಾಗುತ್ತಿತ್ತು. ಈ ಯೋಜನೆಗೆ ಪ್ರಥಮ ದಾನವಾಗಿ 2000 ರೂ ಕೊಟ್ಟವರು ಕೀರ್ತಿಯವರ ತಾಯಿ. ಈ ಬಗ್ಗೆ ವಿಚಾರಿಸಿದಾಗ ಕೀರ್ತಿಯವರ ಕ್ರೀಡಾ ಸಾಧನೆ ಬಗ್ಗೆ ತಿಳಿಯಿತು. ಹೀಗಾಗಿ ಆಕೆಗೆ ಪ್ರೋತಾಹ, ಸಹಕಾರ ನೀಡುತ್ತಾ ಬಂದಿದ್ದೇನೆ. ನಾವು ಬಲ ಕೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಎಂದು ಬದುಕುವವರು. ಎಲ್ಲರಿಗೂ ಗೊತ್ತಾಗುವಂತೆ ಕೊಟ್ಟರೆ ಅದರ ಫಲ ಹೋಗುತ್ತದೆ. ಕೀರ್ತಿಯವರಿಗೆ ಮುಂದೆಯೂ ಸಹಕಾರ ನೀಡುತ್ತೇವೆ. ಆಕೆ ಉನ್ನತ ಸ್ಧಾನಕ್ಕೆ ಹೋಗುವಂತಾಗಬೇಕು ಎಂದು ಶುಭ ಹಾರೈಸಿದರು.
ನ್ಯಾಷನಲ್ ಲೆವೆಲ್ಗೆ ಆಯ್ಕೆಯಾಗಿರುವ ಕ್ರೀಡಾ ಸಾಧಕಿ ಕೀರ್ತಿ ಮಾತನಾಡಿ, ನನ್ನ ಸಾಧನೆಗೆ ಪ್ರೋತಾಹಿಸಿದ ಎಲ್ಲರಿಗೂ ಧನ್ಯವಾದ. ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ತುಂಬಾ ಪ್ರಾಕ್ಟಿಸ್ ಮಾಡಿದ್ದೆ. ಹಾಗಾಗಿ ವಿನ್ ಆಗುತ್ತೇನೆ ಎಂದು ನಂಬಿಕೆ ಇತ್ತು. ನನ್ನ ಸಾಧನೆಗೆ ಉಜ್ವಲ್ ಪ್ರಭು ಅವರು ಆರ್ಥಿಕವಾಗಿ ತುಂಬಾ ಸಹಕಾರ ಮಾಡಿದ್ದಾರೆ. ಅವರಿಗೆ ಯಾವಾಗಲೂ ಕೃತಜ್ಞಳಾಗಿರುತ್ತೇನೆ. ಉತ್ತಮ ಕ್ರೀಡಾಪಟುವಾಗಿ ಉದ್ಯೋಗ ಪಡೆದುಕೊಳ್ಳಬೇಕು ಎನ್ನುವುದು ನನ್ನ ಗುರಿ. ಶಾಲಾ ಮಾತಾಜಿ, ಕೋಚ್ ಹಾಗೂ ಶಿಕ್ಷಕರು, ಹೆತ್ತವರು ತುಂಬಾ ಸಫೋರ್ಟ್ ಮಾಡಿದ್ದಾರೆ ಎಲ್ಲರಿಗೂ ಧನ್ಯವಾದ ಎಂದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಆಶಾ ಬೆಳ್ಳಾರೆ ಮಾತನಾಡಿ ಎರಡು ವರ್ಷಗಳ ಹಿಂದೆ ರಾಷ್ಟ್ರ ಮಟ್ಟದ ಎತ್ತರ ಜಿಗಿತದಲ್ಲಿ ರಾಜ್ಯಕ್ಕೆ ಚಿನ್ನದ ಪದಕ ವಿಜೇತೆಯಾಗಿ ನಮ್ಮ ರಾಜ್ಯಕ್ಕೆ ಕೀರ್ತಿ ತಂದವರು. ಈ ವರ್ಷ ರಾಜ್ಯ ಮಟ್ಟದ ಎತ್ತರ ಜಿಗಿತ ಹಾಗೂ ಹರ್ಡಲ್ಸ್ ನಲ್ಲಿ ಚಿನ್ನದ ಪದಕದೊಂದಿಗೆ ಕೂಟ ದಾಖಲೆ ಮಾಡಿದ್ದಾಳೆ. ಇದೆಲ್ಲವೂ ನಮಗೆ ಸಂತಸ ತಂದ ವಿಚಾರ. ಆಕೆಯ ಶ್ರಮ ಬದ್ಧತೆ ಹಾಗೂ ಎಲ್ಲರೊಂದಿಗೆ ಬೆರೆಯುವ ಪ್ರೀತಿ ಈ ಸಾಧನೆಗೆ ಪೂರಕವಾಗಿದೆ. ಬಬ್ಬ ವಿದ್ಯಾರ್ಥಿನಿಯಲ್ಲಿ ಇರುವ ಸಾಧನೆ ಬೆಳಕಿಗೆ ಬರುವ ಹೊತ್ತಿಗೆ ಆಕೆಯ ಮನೆಯ ಆರ್ಥಿಕ ಪರಿಸ್ಧಿತಿ ಹಾಗೂ ಉಳಿದ ಸವಲತ್ತುಗಳ ಜೋಡೀಕರಣಕ್ಕೆ ನಮಗೆ ಸಹಕಾರ ನೀಡಿ ಬೆಂಬಲವಾಗಿ ನಿಂತವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು ಇದೀಗ ಪುತ್ತೂರು ಹಾಗೂ ಹತ್ತೂರಿನಲ್ಲೂ ಹೆಸರುವಾಸಿಯಾಗಿರುವ ಯು.ಆರ್. ಪ್ರಾಪರ್ಟೀಸ್ ಮಾಲಕರಾದ ಉಜ್ವಲ್ ಪ್ರಭು ಅವರು. ಉಜ್ವಲ್ ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಕೀರ್ತಿಯವರಿಗೆ ತರಬೇತಿ ನೀಡುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು ಅವರು ಮಾತನಾಡಿ ಎರಡು ವರ್ಷದ ಹಿಂದೆ ವಿವೇಕಾನಂದ ಶಾಲೆಯ ಮಕ್ಕಳಿಗೆ ಟ್ರೈನಿಂಗ್ ಕೊಡುವುದಕ್ಕಾಗಿ ಹೋದಾಗ ಕೀರ್ತಿಯವರನ್ನು ನೋಡಿ ಈಕೆಯಲ್ಲಿ ಏನೋ ಒಂದು ಅದ್ಬುತ ಟ್ಯಾಲೆಂಟ್ ಇದೆ ಎಂದು ಅನಿಸಿತ್ತು. 1-2 ತಿಂಗಳಲ್ಲಿ ಕಲಿಸಿದ ಹೈ ಜಂಪ್ ಅನ್ನು ಉತ್ತಮವಾಗಿ ಕಲಿತಳು. 8 ನೇ ತರಗತಿಯಲ್ಲಿಯೇ ಸ್ಟೇಟ್ ಲೆವೆಲ್ ಮೆಡಲ್, ನ್ಯಾಷನಲ್ ಲೆವೆಲ್ ಗೋಲ್ಡ್ ಮೆಡಲ್ ಮಾಡಿದಳು. 9ನೇ ತರಗತಿಯಲ್ಲಿ ಇರುವಾಗ ಪ್ರಾಕ್ಟಿಸ್ಗೆ ಸಮಸ್ಯೆಯಾಗಿತ್ತು, ಹೀಗಾಗಿ ಸ್ಟೇಟ್ ಲೆವೆಲ್ನಲ್ಲಿ ಸೋಲಾಯಿತು. ಆ ಸೋಲು ಯಶಸ್ಸಿಗೆ ಹಾದಿಯಾಗಿ ನಿರಂತರ ಅಭ್ಯಾಸದ ಮೂಲಕ ಇಂದು ನ್ಯಾಷನಲ್ ಲೆವೆಲ್ಗೆ ಆಯ್ಕೆಯಾಗಿದ್ದಾಳೆ. ನ್ಯಾಷನಲ್ ಲೆವೆಲ್ನಲ್ಲಿ ಚಿನ್ನದ ಪದಕ ಗೆದ್ದೇ ಗೆಲ್ಲುತ್ತಾಳೆ. ಈ ಮೂಲಕ ಈಕೆ ಪುತ್ತೂರಿಗೆ ಕ್ರೀಡಾ ಕ್ಷೇತ್ರದ ಅಧ್ಬುತ ಪ್ರತಿಭೆಯಾಗಿ ಮೂಡಿ ಬರುತ್ತಾಳೆ ಎಂದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ್ ಮಾತನಾಡಿ ರಾಷ್ಟ್ರಮಟ್ಟದ ಪದಕ ಗೆದ್ದು ಉತ್ತಮ ಉದ್ಯೋಗ ಸಿಗಲಿ ಎಂದು ಶುಭ ಹಾರೈಸಿದರು.









