ಬೆಳೆ ವಿಮೆ, ಕಡಿಮೆ ಮೊತ್ತ ಪಾವತಿ – ಮತ್ತೊಮ್ಮೆ ಮ್ಯಾನ್ಯುವೆಲ್ ಸಮೀಕ್ಷೆಯಾಗಲಿ- ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಆಗ್ರಹ

0

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಈಗಾಗಲೇ ಕೃಷಿಕರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದ್ದು ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತ್ಯಂತ ಕಡಿಮೆ ಮೊತ್ತ ಪಾವತಿಯಾಗುತ್ತಿದ್ದು ಇದು ರೈತರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಏಕೆಂದರೆ ಈ ವರ್ಷ ಎಪ್ರೀಲ್ ತಿಂಗಳಿನಿಂದಲೇ ಮಳೆ ಆರಂಭವಾಗಿದ್ದು ನವೆಂಬರ್ ಅಂತ್ಯದವರೆಗೂ ನಿರಂತರ ಮಳೆ ಸುರಿಯುತ್ತಲೇ ಇತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಹೆಚ್ಚು ಮಳೆ ಸುರಿದಿದ್ದು ಇದು ಕೃಷಿಯ ಮೇಲೆ ಬಹಳಷ್ಟು ಹೊಡೆತ ಕೊಟ್ಟಿದ್ದು ಹೀಗಿದ್ದರೂ ಬೆಳೆ ವಿಮೆ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಮೊತ್ತ ಪಾವತಿಯಾಗಿರುವುದು ಸರಿಯಲ್ಲ ಆದ್ದರಿಂದ ರಾಜ್ಯ ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಮತ್ತು ಮತ್ತೊಮ್ಮೆ ಬೆಳೆ ವಿಮೆ ಸಮೀಕ್ಷೆಯನ್ನು ಮಾಡಬೇಕು ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್‌ರವರು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಯೊಂದಿಗೆ ಮಾತನಾಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಸಂಬಂಧಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗಳಿಗೆ ಜಮೆಯಾಗುತ್ತಿದ್ದು ಆದರೆ ಬೆಳೆ ವಿಮಾ ಪರಿಹಾರ ಮೊತ್ತ ಬಹಳಷ್ಟು ಕಡಿಮೆ ಪಾವತಿಯಾಗಿರುವುದು ಕೃಷಿಕರನ್ನು ನಿರಾಶೆಗೊಳಿಸಿದೆ. ವಿಪರೀತ ಮಳೆ, ಕೊಳೆ ರೋಗ, ಎಲೆ ಚುಕ್ಕಿ ರೋಗ ಇತ್ಯಾದಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ರೈತರು ಬಹಳಷ್ಟು ನಷ್ಟವನ್ನು ಅನಭವಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಡಿಕೆ ಗಿಡಕ್ಕೆ ಬಾಧಿಸಿದ ವಿಚಿತ್ರ ಹುಳದ ಬಾಧೆಯಿಂದಾಗಿ ಅಡಿಕೆ ಮರವೇ ಸಾಯುತ್ತಿದೆ. ಹೀಗಿದ್ದರೂ ಬೆಳೆ ವಿಮೆ ಮೊತ್ತ ಅತ್ಯಂತ ಕಡಿಮೆ ಪಾವತಿಯಾಗಿರುವುದು ರೈತರನ್ನು ಚಿಂತೆಗೆ ಈಡು ಮಾಡಿದೆ ಎಂದ ಅವರು ಈ ಬಗ್ಗೆ ರಾಜ್ಯ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.


ಅರಿಯಡ್ಕ ಗ್ರಾಮಕ್ಕೂ ಹೊಡೆತ…!
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅರ್ಧದಷ್ಟು ಮಾತ್ರ ಬೆಳೆ ವಿಮೆ ಪರಿಹಾರ ಮೊತ್ತ ಪಾವತಿಯಾಗಿದೆ. ಅರಿಯಡ್ಕ ಗ್ರಾಮದ ರೈತರಿಗೂ ತೊಂದರೆಯಾಗಿದೆ ಎಂದ ಇಕ್ಬಾಲ್ ಹುಸೇನ್‌ರವರು ಬೆಳೆ ವಿಮೆ ಸಮೀಕ್ಷೆಗೆ ಗ್ರಾಮವಾರು ಮಳೆ ಮಾಪನ ವರದಿಯನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳುತ್ತಿರುವುದರಿಂದ ಅರಿಯಡ್ಕ ಗ್ರಾಮದಲ್ಲಿ ಅಳವಡಿಸಿದ ಮಳೆ ಮಾಪನವನ್ನು ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ ಈ ಬಗ್ಗೆ ತೋಟಗಾರಿಕಾ ಇಲಾಖೆಯವರು ಗಮನಹರಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.


ಶಾಸಕರ ಗಮನಕ್ಕೆ ತರಲಾಗಿದೆ

ಬೆಳೆ ವಿಮೆ ಪರಿಹಾರ ಮೊತ್ತದಲ್ಲಿ ರೈತರಿಗೆ ತೊಂದರೆಯಾಗಿರುವ ಬಗ್ಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈಯವರ ಗಮನಕ್ಕೂ ತರಲಾಗಿದ್ದು ಈಗಾಗಲೇ ಶಾಸಕರು ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ ಎಂದಿದ್ದು ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸುತ್ತೇನೆ ಎಂದಿದ್ದಾರೆ. ರೈತರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿರುವ ಶಾಸಕರು ಈ ಬಗ್ಗೆಯೂ ರೈತರ ಜೊತೆ ನಿಲ್ಲುತ್ತಾರೆ, ರೈತರಿಗೆ ನ್ಯಾಯ ದೊರೆಕಿಸಿಕೊಡುತ್ತಾರೆ ಎಂಬ ಭರವಸೆ ನಮಗಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here