ಯುವವಾಹಿನಿ ಉಪ್ಪಿನಂಗಡಿ ಘಟಕದ ಪದ ಪ್ರದಾನ

0

ಯುವ ಆಶಯಗಳ ವೇದಿಕೆ ಯುವವಾಹಿನಿ-ಪದ್ಮರಾಜ್ ಪೂಜಾರಿ

ಪುತ್ತೂರು: ಯುವ ಮನಸ್ಸಿನ ಕನಸುಗಳಿಗೆ ದಿಕ್ಕು ತೋರಿಸಿ, ಆಶಯಗಳನ್ನು ಕಾರ್ಯರೂಪಕ್ಕೆ ತರುವ ಶಕ್ತಿ ತುಂಬುತ್ತಾ, ಸೇವೆಯ ಮೌಲ್ಯಗಳೊಂದಿಗೆ ನಾಯಕತ್ವವನ್ನು ಬೆಳೆಸುತ್ತಾ ಸಮಾಜ ನಿರ್ಮಾಣದ ಪಥದಲ್ಲಿ ಯುವವಾಹಿನಿ ಬೆಳಕು ಹರಡುತ್ತದೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಹೇಳಿದರು.

ಅವರು ಉಪ್ಪಿನಂಗಡಿ ಎಚ್ ಎಮ್ ಅಡಿಟೊರಿಯಂನಲ್ಲಿ ನಡೆದ ಯುವವಾಹಿನಿ ಉಪ್ಪಿನಂಗಡಿ ಘಟಕದ 2025-26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಇನ್ನೊರ್ವ ಮುಖ್ಯ ಅತಿಥಿ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಮಾಜಿ ಕಾರ್ಯನಿರ್ವಹಣಾಧಿಕಾರಿ ಆರ್ ಸಿ ನಾರಾಯಣ ರೆಂಜ  ಮಾತನಾಡಿ, ಸಮಾಜದಲ್ಲಿನ ಅಶಕ್ತರ ಬದುಕಿಗೆ ಸ್ಪಂದಿಸುವ ಸೇವಾ ಕಾರ್ಯಗಳು ನಮ್ಮ ಸಂವೇದನೆಯ ಪ್ರತಿಬಿಂಬವಾಗಿವೆ. ಅವರ ನೋವಿಗೆ ಆಸರೆಯಾಗುವ ಪ್ರತಿಯೊಂದು ಪ್ರಯತ್ನವೂ ಮಾನವೀಯತೆಯ ಸಾರ್ಥಕತೆ. ಸೇವೆಯ ಮೂಲಕ ಭರವಸೆ, ಧೈರ್ಯ ಮತ್ತು ಬದುಕಿನ ಬೆಳಕನ್ನು ನೀಡುವ ಜವಾಬ್ದಾರಿ ನಮ್ಮದು. ಅಂತಹ ಸಮಾಜಮುಖಿ ಕಾರ್ಯಗಳು ಯುವವಾಹಿನಿಯಿಂದ ನಿರಂತರವಾಗಿ ಸಾಗಲಿ ಎಂಬುದೇ ನಮ್ಮ ಸಂಕಲ್ಪವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ವರದರಾಜ್ ಎಮ್ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ವರದಿ ವರ್ಷದಲ್ಲಿ ಸಹಕಾರ ನೀಡಿದ ಎಲ್ಲರಿಗೂ ವಂದಿಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಕೂಳೂರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಬಿಲ್ಲವ ಬ್ರಿಗೇಡ್ ಮಂಗಳೂರು ಇದರ ಅಧ್ಯಕ್ಷರಾದ ಸದಾನಂದ ಪೂಜಾರಿ, ನಿಯೋಜಿತ ಅಧ್ಯಕ್ಷರಾದ ಮನೋಜ್ ಎನ್ ಸಾಲ್ಯಾನ್, ನಿಯೋಜಿತ ಕಾರ್ಯದರ್ಶಿ ರಮೇಶ್ ಸಾಂತ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಅಕ್ಷಯ ಕಾಲೇಜಿನ ಚೇರ್ಮನ್ ಜಯಂತ ನಡುಬೈಲು, ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಉದ್ಯಮಿಗಳಾದ ಯೋಗೀಶ್ ಪೂಜಾರಿ ಮಡಂತ್ಯಾರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಘಟಕದ ಮಾಜಿ ಅಧ್ಯಕ್ಷರುಗಳು, ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರುಗಳು ಮತ್ತಿತರರು ಉಪಸ್ಥಿತರಿದ್ದರು.

ಕು.ಅಭಿಜ್ಞಾ ಪ್ರಾರ್ಥಿಸಿದರು.ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಸ್ವಾಗತಿಸಿ, ನಿಯೋಜಿತ ಕಾರ್ಯದರ್ಶಿ ರಮೇಶ್ ಸಾಂತ್ಯ ವಂದಿಸಿದರು. ನಿರ್ದೇಶಕಿ ಶ್ರೀಮತಿ ಅನಿತಾ ಸತೀಶ್ ವರದಿ ಮಂಡಿಸಿದರು.ಲೋಕೇಶ್ ಬೆತ್ತೋಡಿ ಕಾರ್ಯಕ್ರಮ  ನಿರೂಪಿಸಿದರು.

ಸನ್ಮಾನ.. ಅಭಿನಂದನೆ..

ಸಮಾರಂಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಟ್ರಸ್ಟಿ ಅಜಿತ್ ಕುಮಾರ್ ಪಾಲೇರಿ, ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಲಯದ ಸರ್ಕಾರಿ ಅಪರ ವಕೀಲರಾದ ಮನೋಹರ್ ಕುಮಾರ್, ಉಪ್ಪಿನಂಗಡಿ ಸಿ ಎ  ಬ್ಯಾಂಕಿನ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ನೆಲ್ಯಾಡಿ ಸಿ ಎ ಬ್ಯಾಂಕಿನ ಅಧ್ಯಕ್ಷ ಬಾಲಕೃಷ್ಣ  ಬಾಣಜಾಲು, ತಣ್ಣೀರುಪಂಥ  ಸಿ ಎ ಬ್ಯಾಂಕಿನ ಅಧ್ಯಕ್ಷ ಜಯಾನಂದ ಕಲ್ಲಾಪು,  ಬಾರ್ಯ ಸಿ ಎ ಬ್ಯಾಂಕಿನ ಅಧ್ಯಕ್ಷ ಸೇಸಪ್ಪ ಪೂಜಾರಿ ಹಾಗೂ ವಿವಿಧ ದೇವಸ್ಥಾನಗಳಿಗೆ  ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಆಯ್ಕೆಯಾದ ಡಾ.ರಮ್ಯಾ ರಾಜರಾಮ್, ವೆಂಕಪ್ಪ ಪೂಜಾರಿ, ಜಯವಿಕ್ರಮ್ ಕಲ್ಲಾಪು, ಹರೀಶ್ ಉದ್ಯಂಗಳ, ಶಿವಗಿರಿ ಯಾತ್ರೆಯ ಸಂಚಾಲಕರಾಗಿ ಸಹಕಾರ ನೀಡಿದ ಹರೀಶ್ ಪೂಜಾರಿ ಕೊಣಾಜೆ, ಮತ್ತು ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನ ಪ್ರಾಂಶುಪಾಲರಾದ ಲೋಕೇಶ್ ಬೆತ್ತೋಡಿ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಕ್ರೀಡೆ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಲಾಯಿತು. ವರದಿ ಸಾಲಿನಲ್ಲಿ ಯುವವಾಹಿನಿ ಸರ್ವ ಸದಸ್ಯರ ಮೆಚ್ಚುಗೆಗೆ ಪಾತ್ರರಾದ ನಾಣ್ಯಪ್ಪ ಕೋಟ್ಯಾನ್ ಇವರನ್ನು ಘಟಕದ ವತಿಯಿಂದ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here