ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನವೀಕರಣಗೊಂಡ ಮಹಾಲಿಂಗೇಶ್ವರ ಕಟ್ಟೆಯ ಉದ್ಘಾಟನೆ

0

ಕಟ್ಟೆಯ ಮೂಲಕ ಸಂಸ್ಥೆಯ ಎಲ್ಲಾ ಧರ್ಮದವರಿಗೂ ಸುಖ ಸಂಪತ್ತು ವೃದ್ದಿಯಾಗಲಿದೆ – ಈಶ್ವರ ಭಟ್ ಪಂಜಿಗುಡ್ಡೆ

ಪುತ್ತೂರು: ಪುತ್ತೂರು ಅಂದರೆ ಮಹಾಲಿಂಗೇಶ್ವರ, ಆತ ನಮ್ಮ ಹೃದಯದಲ್ಲಿರುವ ದೇವರು. ಪುತ್ತೂರು ಜಾತ್ರೆಯ ಸಂದರ್ಭ ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದಿಂದ ಹೆಚ್ಚಿನ ಸೇವೆ ಭಕ್ತರಿಗೆ ಸಿಗುತ್ತಿದೆ. ಇದರ ಜೊತೆಗೆ ಹಿರಿಯರು ಮಾಡಿದ ಪುಣ್ಯದ ಪಲದಿಂದ ಕಟ್ಟೆ ನಿರ್ಮಾಣವಾಗಿದೆ. ಕಟ್ಟೆಯನ್ನು ಸ್ವಚ್ಚತೆಯಿಂದ ಕಾಪಾಡಿ, ಪ್ರತಿ ನಿತ್ಯ ಹೂವು ಇಡಿ. ಆ ಮೂಲಕ ಸಂಸ್ಥೆಯ ಎಲ್ಲಾ ಧರ್ಮದವರಿಗೂ ಸುಖ ಸಂಪತ್ತು ವೃದ್ಧಿಯಾಗಲಿದೆ ಎಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.


ಶ್ರೀ ದೇವತಾ ಸಮಿತಿಯಿಂದ ಪುತ್ತೂರು ಕೋಟಿ ಚೆನ್ನಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನವೀಕರಣಗೊಂಡ ಮಹಾಲಿಂಗೇಶ್ವರ ಕಟ್ಟೆಯನ್ನು ಅವರು ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾಲಿಂಗೇಶ್ವರ ದೇವರು ಕಟ್ಟೆ ಪೂಜೆ ಸ್ವೀಕರಿಸುವ ಕಟ್ಟೆಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಇಡಬೇಕೆಂದು ಆರೇಳು ತಿಂಗಳ ಹಿಂದೆ ವ್ಯವಸ್ಥಾಪನಾ ಸಮಿತಿಯಿ ಪತ್ರಿಕಾ ಹೇಳಿಕೆ ನೀಡಿದ್ದೆವು. ನಮ್ಮ ಕರೆಗೆ ತಕ್ಷಣ ಸ್ಪಂಧಿಸಿದ ಕೆ.ಎಸ್.ಆರ್.ಟಿ.ಸಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಎ.11ರಂದು ಸಂಸ್ಥೆಯ ಮೂಲಕ ಅನ್ನಪ್ರಸಾದವೂ ನಡೆಯಲಿದೆ ಎಂದ ಅವರು ವರ್ಷಕ್ಕೆ ಒಮ್ಮೆಯಾದರೂ ಬರುವ ಮಹಾಲಿಂಗೇಶ್ವರ ದೇವರನ್ನು ಭಕ್ತಿಯಿಂದ ಸ್ವಾಗತಿಸುವ ಮೂಲಕ ಕಟ್ಟೆಯಲ್ಲಿ ಪ್ರತಿನಿತ್ಯ ಶುಚಿತ್ವ ಕಾಪಾಡಿಕೊಳ್ಳಿ ಎಂದರು.


ದೇವಳದ ಜೀರ್ಣೋದ್ಧಾರ ಹಿನ್ನಲೆ ಭಕ್ತರ ಸಹಕಾರಕ್ಕೆ ಮನವಿ
ಪುತ್ತೂರು ಮಹಾಲಿಂಗೇಶ್ವರ ದೇವರಲ್ಲಿ ಬಹಳ ವಿಶೇಷತೆ ಇದೆ. ಪುತ್ತೂರು ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಸೇರುತ್ತಾರೆ. ಅದಕ್ಕಾಗಿ ಈ ಭಾರಿ ಜಾತ್ರೆ ಗದ್ದೆಯಲ್ಲಿ ಸ್ಥಳ ಖರೀದಿಸುವ ಮೂಲಕ ಇನ್ನೂ 2 ಎಕ್ರೆ ವಿಸ್ತರಿಸಲಾಗಿದೆ. ಜಾತ್ರೆಯ ಸಂದರ್ಭ ಲಕ್ಷಾಂತರ ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಅದಕ್ಕಾಗಿ ಐತಿಹ್ಯ ಇರುವ ಅನ್ನದ ಅಗಳು ಮುತ್ತಾದ ಕೆರೆಯ ಬಳಿಯೇ ಅನ್ನಪ್ರಸಾದವನ್ನು ನೀಡುವ ಕಾರ್ಯಕ್ಕೆ ಕಳೆದ ವರ್ಷವೇ ಚಾಲನೆ ನೀಡಿದ್ದೇವೆ. ಈ ಭಾರಿ ಮತ್ತೆ ಅದೇ ಸ್ಥಳದಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಜಾತ್ರೆಯಲ್ಲಿ ಭಕ್ತರಿಗೆ ಮತ್ತು ವ್ಯಾಪಾರಸ್ಥರಿಗೆ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಿದ್ದೇವೆ. ದೇವಳದಲ್ಲಿ ಶುದ್ದ ಎಳ್ಳೆಣ್ಣೆ ಸಮರ್ಪಣೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ತಲೆಗೆ ಮೂರು ಸುತ್ತು ತಂದು ಎಳ್ಳೆಣ್ಣೆ ಸಮರ್ಪಣೆ ಮಾಡಿದರೆ ಅದನ್ನು ಆರ್ದ್ರಾ ನಕ್ಷತ್ರದಂದು ದೇವರಿಗೆ ಅಭಿಷೇಕ ಮಾಡುತ್ತೇವೆ. ಅಭಿಷೇಕ ಎಣ್ಣೆಯನ್ನು ಭಕ್ತರಿಗೆ ನೀಡುತ್ತೇವೆ. ಆ ಎಣ್ಣೆಯಿಂದ ಬಹಳಷ್ಟು ಭಕ್ತರಿಗೆ ಪ್ರಯೋಜನವಾಗಿರುವ ಉದಾಹರಣೆಗಳಿವೆ. ಅದೇ ರೀತಿ ತುಪ್ಪ ದೀಪ ಹಚ್ಚು ಕಾರ್ಯವನ್ನು ಕಲ್ಪಿಸಿದ್ದೆವು. ಇವತ್ತು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ತುಪ್ಪದ ದೀಪ ಬೆಳಗಿಸಿ ತಮ್ಮ ಸಂಕಲ್ಪ ಈಡೇರಿಸಿಕೊಂಡಿದ್ದಾರೆ. ಮುಂದೆ ದೇವಳದ ಜೀರ್ಣೋದ್ದಾರ ಮತ್ತು ಅಭಿವೃದ್ದಿ ಕಾರ್ಯಗಳಿಗೆ ಭಕ್ತರು ತಮ್ಮ ಸಹಕಾರ ನೀಡುವಂತೆ ಈಶ್ವರ ಭಟ್ ಪಂಜಿಗುಡ್ಡೆಯವರು ಮನವಿ ಮಾಡಿದರು.


ಪುತ್ತೂರು ದ್ವೇಶ ಅಸೂಯೆ ಇಲ್ಲದ ಊರು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್ ಅವರು ಮಾತನಾಡಿ ಒಗ್ಗಟ್ಟಿನಲ್ಲಿ ಮುಂದುವರಿದಾಗ ಎಲ್ಲ ಕಾರ್ಯ ಸುಗಮವಾಗುತ್ತದೆ. ಇಲ್ಲಿ ಧರ್ಮ, ಜಾತಿ ಬೇಧವಿಲ್ಲದೆ ಕೆಲಸ ಮಾಡುತ್ತೇವೆ. ಸೇವೆಯ ಉದ್ದೇಶವಿಟ್ಟು ಕೆಲಸ ಮಾಡಿದಾಗ ಎಲ್ಲವು ಯಶಸ್ವಿಯಾಗಿ ನಡೆಯುತ್ತದೆ. ಪುತ್ತೂರು ದ್ವೇಶ ಅಸೂಯೆ ಇಲ್ಲದೆ ಊರಾಗಿದೆ.
ಸ್ವಾರ್ಥವಿಲ್ಲದೆ ಕೆಲಸ ಮಾಡಿದಾಗ ದೇವರ ದಯೆ ಇರುತ್ತದೆ ಎಂದರು. ಭದ್ರತಾ ಅಧಿಕಾರಿ ಪ್ರಸನ್ನ, ಯಾಂತ್ರಿಕ ಅಧಿಕಾರಿ ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ದೇವಸ್ಥಾನದ ಅಭಿವೃದ್ಧಿಯಲ್ಲಿ ಪಾರದರ್ಶಕವಾಗಿ ಸೇವೆ ಮಾಡುತ್ತಿರುವ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಕಟ್ಟೆ ನಿರ್ಮಾಣ ವೇಳೆ ಉತ್ತಮ ಮಾರ್ಗದರ್ಶನ ನೀಡಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರನ್ನು ಕೆಎಸ್‌ಆರ್‌ಟಿಸಿ ದೇವತಾ ಸಮಿತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭ ಕಟ್ಟೆ ನಿರ್ಮಾಣ ಕಾರ್ಯ ಕೈಗೊಂಡ ಇಂಜಿನಿಯರ್ ಗುಣಕರ ಶೆಟ್ಟಿ , ಪದ್ಮನಾಭ ಪೂಜಾರಿ ಬೆದ್ರಾಳ, ರವಿ ಮುಕ್ವೆ ಮತ್ತು ಕಟ್ಟೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ದೇವತಾ ಸಮತಿ ಅಧ್ಯಕ್ಷರಾಗಿರುವ ವೀಭಾಗೀಯ ಕಾರ್ಯಾಧೀಕ್ಷಕ ಲೋಕೇಶ್ವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಿಬ್ಬಂದಿಗಳ ಸಂಕಲ್ಪದಿಂದ ಹೊಸ ಬಸ್ ನಿಲ್ದಾಣದಲ್ಲಿ ಮಹಾಲಿಂಗೇಶ್ವರ ಕಟ್ಟೆ ಒದಗಿ ಬಂತು. ಇದೀಗ 10 ವರ್ಷ ಪೂರೈಸಿದಾಗ ಕಟ್ಟೆಗೆ ಮೇಲ್ಛಾವಣಿ ಮಾಡಲಾಗಿದೆ ಎಂದರು. ಸಂಸ್ಥೆಯ ರತನ್, ರಾಜೇಶ್, ಪುರೋಷತಮ್, ದಾಮೋದರ್, ಸತೀಶ್, ನಿತಿಶ್ ಅತಿಥಿಗಳನ್ನು ಗೌರವಿಸಿದರು. ಶ್ರೀಶೈಲಾ ಪ್ರಾರ್ಥಿಸಿದರು. ಕಟ್ಟೆ ಪುನರ್ ನವೀಕರಣದ ಅಧ್ಯಕ್ಷರಾದ ಪುತ್ತೂರು ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ವಂದಿಸಿದರು.

LEAVE A REPLY

Please enter your comment!
Please enter your name here