







ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪ್ರತಿಮನೆಯವರು ಕೈಜೋಡಿಸಬೇಕು-ಪಂಜಿಗುಡ್ಡೆಈಶ್ವರ ಭಟ್


ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾನಪನಾ ಪತ್ರಗಳು ಪ್ರತಿ ಮನೆಗಳಿಗೆ ತಲುಪಿಸಬೇಕು. ಆ ಮೂಲಕ ಪ್ರತಿ ಮನೆಯವರು ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಕೈಜೋಡಿಸಿ, ಸಹಕರಿಸಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ವಿನಂತಿಸಿದರು.




ಪಾಂಗಳಾಯಿ ಶ್ರೀ ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜು.೫ರಂದು ದೇವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ವಿತರಿಸಿ ಅವರು ಮಾತನಾಡಿದರು. ದೈವಜ್ಞರ ಸೂಚನೆಯಂತೆ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಅಯ್ಯಪ್ಪ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ನಾಗನ ಸನ್ನಿಧಿಯನ್ನು ಮೂಲ ನಾಗನ ಕಟ್ಟೆಗೆ ಹಾಗೂ ನವಗ್ರಹ ಗುಡಿಯನ್ನು ದೇವಸ್ಥಾನದ ಒಳಭಾಗಕ್ಕೆ ಸ್ಥಳಾಂತರಿಸಿ ಪ್ರತಿಷ್ಠಾಪಿಸಲಾಗಿದೆ. ಇನ್ನು ನೂತನ ಸಭಾ ಭವನ ನಿರ್ಮಾಣ, ಕೆರೆ ಅಭಿವೃದ್ಧಿ ಸೇರಿದಂತೆ ದೇವಸ್ಥಾನದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದು 2028ರಲ್ಲಿ ದೇವರ ಸಂಭ್ರಮದ ಬ್ರಹ್ಮಕಲಶೋತ್ಸವನ್ನು ಕಣ್ತುಂಬಿಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಸೀಮೆಯ ಪ್ರತಿ ಮನೆಗಳಿಗೂ ವಿಜ್ಞಾಪನಾ ಪತ್ರ ತಲುಪಬೇಕು. ಜೀರ್ಣೋದ್ಧಾರದಲ್ಲಿ ಪ್ರತಿಮನೆಯವರು ಅವರವರ ಶಕ್ತಿಯಾನುಸಾರ ದೇನಿಗೆ ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ವಿಜ್ಞಾಪನಾ ಪತ್ರವನ್ನು ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ನಾಯ್ಕ್, ಕಾರ್ಯದರ್ಶಿ ಸರೋಜಿನಿ ಅಬಿಕಾರ್, ಉಪಾಧ್ಯಕ್ಷ ವೀಕ್ಷಿತ್ ಕಲ್ಲಿಮಾರ್, ಜತೆ ಕಾರ್ಯದರ್ಶಿ ಕರುಣಾಕರ ಆಲೆಟ್ಟಿ, ಕೋಶಾಧಿಕಾರಿ ಜಯಶಂಕರ ರೈ ಹಾಗೂ ಆಡಳಿತ ಮಂಡಳಿ ಸದಸ್ಯರು ಸ್ವೀಕರಿಸಿದರು. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.









