







ಪುತ್ತೂರು: ಪುತ್ತೂರು ತಾಲೂಕಿನ ವಿವಿಧೋದ್ದೇಶ / ಗ್ರಾಮೀಣ / ನಗರ ಪುನರ್ವಸತಿ ಕಾರ್ಯಕರ್ತರು ಪುತ್ತೂರು ಶಾಸಕರ ಕಚೇರಿಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.


ಕಾರ್ಮಿಕ ಇಲಾಖೆಯಿಂದ ಅನುಮೋದನೆಗೊಂಡು ಆರ್ಥಿಕ ಇಲಾಖೆಯಲ್ಲಿ ಸ್ಥಬ್ಧವಾಗಿರುವ ರಾಜ್ಯದ ಪುನರ್ವಸತಿ ಕಾರ್ಯಕರ್ತರ ಕನಿಷ್ಠ ವೇತನದ ಕಡತವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ ಇತ್ಯರ್ಥಗೊಳಿಸಬೇಕೆಂದು ಅವರು ಒತ್ತಾಯಿಸಿದರು. ವರ್ಷಗಳಿಂದ ಬಾಕಿ ಉಳಿದಿರುವ ಈ ಕಡತದಿಂದಾಗಿ ರಾಜ್ಯದ ಸಾವಿರಾರು ಕಾರ್ಯಕರ್ತರ ಭವಿಷ್ಯ ಅತಂತ್ರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.



ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ, ಪುನರ್ವಸತಿ ಕಾರ್ಯಕರ್ತರ ಬೇಡಿಕೆಯನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಮುಂಬರುವ ಅಧಿವೇಶನದಲ್ಲಿ ರಾಜ್ಯದ ಎಲ್ಲಾ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಎಂಡೋಸಲ್ಪಾನ್ ಸಂತ್ರಸ್ತರ ಮಾಸಿಕ ಪಿಂಚಣಿಯನ್ನು ಹೆಚ್ಚಳ ಮಾಡುವ ವಿಷಯವನ್ನೂ ಸದನದಲ್ಲಿ ಪ್ರಸ್ತಾಪಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು. ಮನವಿ ಸಲ್ಲಿಸುವ ವೇಳೆ ಪುತ್ತೂರು ತಾಲೂಕಿನ MRW, VRW ಮತ್ತು URW ಕಾರ್ಯಕರ್ತರು ಉಪಸ್ಥಿತರಿದ್ದರು.










