ಇರ್ದೆ-ಪಳ್ಳಿತ್ತಡ್ಕ ದರ್ಗಾಶರೀಫ್ 46 ನೇ ಉರೂಸ್ ಮುಬಾರಕ್

0
  • ಅಲ್ಲಾಹನ ಇಚ್ಚೆಯಂತೆ ಜಗತ್ತಿನಲ್ಲಿ ಪ್ರತೀಯೊಂದು ಕಾರ್ಯ ನಡೆಯುತ್ತಿದೆ: ಪುಲ್ಲಾರ ಸಖಾಫಿ

 

ಪುತ್ತೂರು: ಇಂದು ಜಗತ್ತಿನಲ್ಲಿ ನಡೆಯುವ ಪ್ರತೀಯೊಂದು ಕಾರ್ಯವೂ ಅಲ್ಲಾಹನ ಇಚ್ಚೆಯಂತೆ ನಡೆಯುತ್ತಿದ್ದು, ಅಲ್ಲಾಹನ ಅಜ್ಞೆಯಿಲ್ಲದೆ ಭೂಮಿಯಲ್ಲಿ ಒಂದು ಎಲೆಯೂ ಮಿಸುಕಾಡದು ಎಂದು ಖ್ಯಾತ ಸುನ್ನಿ ವಿದ್ವಾಂಸ ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಹೇಳಿದರು.

ಅವರು ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 46 ನೇ ಉರೂಸ್ ಕಾರ್ಯಕ್ರಮದ 5 ನೇ ದಿನದ ಧಾರ್ಮಿಕ ಪ್ರವಚನದಲ್ಲಿ ಮುಖ್ಯ ಭಾಷಣ ಮಾಡಿದರು. ಇಂದು ವಿಜ್ಞಾನ ಎಷ್ಟೇ ಮುಂದುವರಿದಿದೆ ಎಂದರೆ ಮಾನವ ಚಂದ್ರ ಲೋಕಕ್ಕೆ ತೆರಳಿ ಮನೆ ನಿರ್ಮಾಣ ಮಾಡುತ್ತಿದ್ದಾನೆ. ಉಳಿದ ಕೆಲವು ಗ್ರಹಗಳಲ್ಲಿ ವಾಸ್ತವ್ಯಮಾಡಲು ಸಾಧ್ಯವೇ ಎಂದು ಪರಿಶೀಲನೆಯಲ್ಲಿದ್ದಾನೆ , ಜಗತ್ತು ಇಷ್ಟೆಲ್ಲಾ ಮುಂದುವರೆದಿದ್ದರೆ ಇದಕ್ಕೆ ಕಾರಣ ಅಲ್ಲಾಹನ ಇಚ್ಚೆಯಾಗಿದೆ. ಅಲ್ಲಾಹನು ತಾನಿಚ್ಚಿಸಿದ್ದನ್ನು ನಿರ್ಮಿಸಲು ಮಾನವನಿಗೆ ಬುದ್ದಿ ಶಕ್ತಿಯನ್ನು ನೀಡುತ್ತಾನೆ. ಜಗತ್ತು ಸೃಷ್ಟಿಸಿದ ಅಲ್ಲಾಹನನ್ನು ಮರೆತು ನಾವು ಜೀವಿಸಿದರೆ ಅಲ್ಲಾಹನು ನಮ್ಮನ್ನು ಸುಮ್ಮನೇ ಬಿಡುವನೇ ಎಂಬುದನ್ನು ನಾವು ಆಲೋಚಿಸಬೇಕಿದೆ. ಪ್ರತೀಯೊಬ್ಬ ಮುಸ್ಲಿಮನೂ ದಿನದಲ್ಲಿ ಐದು ಹೊತ್ತು ನಮಾಝ್ ಮಾಡಬೇಕು, ರಂಝಾನ್ ತಿಂಗಳಲ್ಲಿ ಉಪವಾಸ ವೃತ ಕೈಗೊಳ್ಳಬೇಕು, ತನ್ನ ಸಂಪತ್ತಿಗೆ ಝಕಾತ್ ಕೊಡಬೇಕು, ಆರ್ಥಿಕವಾಗಿ, ಆರೋಗ್ಯವಾಗಿ ಶಕ್ತನಾದವ ಹಜ್‌ಕರ್ಮವನ್ನು ಕೈಗೊಳ್ಳಬೇಕು ಇದೆಲ್ಲವೂ ಅಲ್ಲಾಹನ ಆಜ್ಞೆಯಾಗಿದೆ. ಅಲ್ಲಾಹನ ಆಜ್ಞೆಯನ್ನು ನಾವು ಚಾಚೂ ತಪ್ಪದೆ ಪಾಲಿಸಬೇಕು ಹಾಗಿದ್ದಲ್ಲಿ ಮಾತ್ರ ನೈಜ ಮುಸ್ಲಿಮರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಲ್ಲಾಹನ ಮೇಲೆ ವಿಶ್ವಾಸ ಇಲ್ಲದವರು ನಮಾಜ್ ಮಾಡಬೇಕೆಂದಿಲ್ಲ

ಓರ್ವ ಮುಸ್ಲಿಮನಾದವನು ಅಲ್ಲಾಹನ ಮೇಲೆ ವಿಶ್ವಾಸ ಇರಬೇಕು, ಪ್ರವಾದಿಯವರ ಮೇಲೆ ವಿಶ್ವಾಸ ಇರಿಸಬೇಕು, ಎರಡನ್ನೂ ಯಾವ ಮುಸ್ಲಿಮರೂ ನೋಡಿಲ್ಲ. ಕಾಣದ ಅಲ್ಲಾಹನು ಮತ್ತು ಕಾಣದ ಪ್ರವಾದಿಯವರ ಮೇಲೆ ವಿಶ್ವಾಸ ಇರಿಸಬೇಕಾಗಿರುವುದು ಮುಸ್ಲಿಮನ ಕರ್ತವ್ಯವಾಗಿದೆ. ಅಲ್ಲಾಹನು ಆದೇಶವನ್ನು ಧಿಕ್ಕಿರಿಸುವವರು ಮತ್ತು ಪ್ರವಾದಿ ಮೇಲೆ ನಂಬಿಕೆ ಇಲ್ಲದವರು ನಮಾಜ್ ಮಾಡಬೇಕಾದ ಅವಶ್ಯಕತೆಯಿಲ್ಲ. ವಿಶ್ವಾಸ ಇಲ್ಲದವರು ನಮಾಜ್ ಮಾಡಿ ಏನನ್ನೂ ಗಳಿಸಲು ಸಾಧ್ಯವಿಲ್ಲ. ಇಸ್ಲಾಂ ನಂಬಿಕೆ ಮೇಲೆ ನಡೆಯುವ ಧರ್ಮವಾಗಿದೆ. ಪವಿತ್ರ ಕುರ್‌ಆನ್ ನಲ್ಲಿ ಬರುವ ವಚನಗಳು ಅಲ್ಲಾಹನ ವಚನಗಳಾಗಿದೆ, ಹದೀಸ್ ಪ್ರವಾದಿಯವರ ವಚನಗಳಾಗಿವೆ ಇವೆರಡರ ಮೇಲೆ ವಿಶ್ವಾಸ ಅತೀ ಮುಖ್ಯವಾಗಿದೆ. ಅಲ್ಲಾಹನ ಇಷ್ಟದಾಸರನ್ನು ನಾವು ಗೌರವಿಸಬೇಕು, ಅವರ ಚರ್ಯೆಯನ್ನು ನಾವು ಪಾಲಿಸಬೇಕು ಇದು ಕಡ್ಡಾಯವಾಗಿದೆ ಎಂದು ಹೇಳಿದರು. ಸಜ್ಜನರಾಗಿ ಬಾಳಿದವರಿಗೆ ಸ್ವರ್ಗ ಲಭಿಸುತ್ತದೆ, ಧಿಕ್ಕಾರಿಯಾಗಿ ಜೀವಿಸಿದರೆ ಆತನಿಗೆ ನರಕ ಪ್ರಾಪ್ತಿಯಾಗುತ್ತದೆ ಮತ್ತು ಆತ ತನ್ನ ಜೀವಿತಾವಧಿಯಲ್ಲಿಯೂ ಅನೇಕ ಕಷ್ಟ ನಷ್ಟಗಳಿಗೂ ಒಳಗಾಗುತ್ತಾನೆ. ಭೂಮಿಯಲ್ಲಿ ನಡೆಯುವ ಸಕಲ ಪ್ರಕ್ರಿಯೆಗಳು ಅಲ್ಲಾಹನ ಅನುಮತಿಯಿಲ್ಲದೆ ನಡೆಯಲು ಸಾಧ್ಯವಿಲ್ಲ. ನಾವು ಒಳ್ಳೆಯವರಾದರೆ ಅದು ನಮಗೆ ಪುಣ್ಯದಾಯಕವಾಗಿ ಮಾರ್ಪಡುತ್ತದೆ ಎಂದು ಹೇಳಿದರು.

ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ದುವಾ ನೆರವೇರಿಸಿದರು. ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊರಿಂಗಿಲ ಇಮಾಂ ಜಿ ಎಚ್ ಅಯ್ಯೂಬ್ ವಹಬಿ ಗಡಿಯಾರ್, ಕೊರಿಂಗಿಲ ಜಮಾತ್ ಕಾರ್ಯದರ್ಶಿ ಕಾಸಿಂ ಕೇಕನಾಜೆ, ಉರೂಸ್ ಕಮಿಟಿ ಅಧ್ಯಕ್ಷರಾದ ಮುಸಕುಂಞಿ ಬೆಟ್ಟಂಪಾಡಿ, ಕಾರ್ಯದರ್ಶಿ ಅನ್ವರ್ ಕೊರಿಂಗಿಲ, ಇಂಜನಿಯರ್ ಆಲಿಕುಂಞಿ ಕೊರಿಂಗಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here