ನಮ್ಮ ಸುಳ್ಯದಲ್ಲಿ 1 ಸಾವಿರ ಚದರ ಅಡಿ ಚಾವಣಿಯ ಮೇಲೆ ವರ್ಷಕ್ಕೆ 4 ಲಕ್ಷ ಲೀ. ನೀರು ಬಿದ್ದು ನೆಲ ಸೇರುತ್ತದೆ. ಆ ಮನೆಯಲ್ಲಿ ವಾಸಿಸುವ ನಾಲ್ಕು ಜನರಿಗೆ ವರ್ಷಕ್ಕೆ ಸುಮಾರು 2 ಲಕ್ಷ ಲೀ. ನೀರು ಸಾಕಾಗುತ್ತದೆ. ಅಂದರೆ ವರ್ಷಕ್ಕೆ ಮನೆಯ ಮಾಡಿನ ಮೇಲೆ ಬಿದ್ದ ನೀರನ್ನು ಪೂರ್ಣ ಉಪಯೋಗಿಸಿದರೂ 2 ಲಕ್ಷ ಲೀ. ನೀರು ಹೆಚ್ಚುವರಿಯಾಗಿ ಉಳಿಯುತ್ತದೆ. ಮಳೆಗಾಲದಲ್ಲಿ ಚಾವಣಿಯ ಮೇಲೆ ಬಿದ್ದ ಶುದ್ಧ ನೀರನ್ನು ಉಪಯೋಗಿಸದೆ ನೆಲಕ್ಕೆ ಹರಿದು ಹೋಗಲು ಬಿಟ್ಟು ಬಾವಿಯಿಂದ, ಬೋರ್ವೆಲ್ ನಿಂದ, ಕೆರೆಯಿಂದ, ಹೊಳೆಯಿಂದ ಅಶುದ್ಧ ನೀರನ್ನು ಪಡೆದು ಕುಡಿಯಲು ಉಪಯೋಗಿಸುತ್ತೇವೆ! ಕುಡಿಯಲು ನೀರಿಲ್ಲವೆಂದು ಕೊರಗುತ್ತೇವೆ!
ಹಾಗೆಯೇ ನಮ್ಮ ಕೃಷಿ ಭೂಮಿಯಲ್ಲಿಯೂ ಇತರ ಭೂಮಿಯಲ್ಲಿಯೂ ನೀರಿಲ್ಲ ಅನ್ನುವವರು ತುಂಬಾ ಜನರಿದ್ದಾರೆ. ನಮ್ಮಲ್ಲಿ ಒಂದು ವರ್ಷಕ್ಕೆ ಒಂದು ಎಕ್ರೆ ಭೂಮಿ ಮೇಲೆ 1 ಕೋಟಿ 60 ಲಕ್ಷ ಲೀ. ನೀರು ಬೀಳುತ್ತದೆ. ಹಾಗಿರುವಾಗ ನಮ್ಮ ಊರಿನಲ್ಲಿ ನೀರಿಗೆ ಬರಗಾಲವೇ ಇರಬಾರದಲ್ಲವೇ? ಆದರೆ ಕಾಂಕ್ರಿಟೀಕರಣ ಮತ್ತು ಡಾಮರೀಕರಣದಿಂದಾಗಿ ಮತ್ತು ವಿವಿಧ ಕೃಷಿ ವಿಧಾನದಿಂದಾಗಿ ನೆಲಕ್ಕೆ ಬಿದ್ದ ನೀರು ಭೂಮಿಗೆ ಇಂಗುವುದು ಕಡಿಮೆ ಆಗಿರುತ್ತದೆ. ಅದರಿಂದಾಗಿ ಕೆರೆ ಮತ್ತು ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಭೂಮಿಗೆ ಅಂತರ್ಜಲ ಮರುಪೂರಣ ವ್ಯವಸ್ಥೆ ಇಲ್ಲದಿರುವುದರಿಂದ ಮತ್ತು ಅಗಾಧ ಪ್ರಮಾಣದಲ್ಲಿ ಬೋರ್ವೆಲ್ ಮೂಲಕ ನೀರನ್ನು ಹೊರತರುವುದರಿಂದಾಗಿ 150 ಅಡಿಯಲ್ಲಿ ದೊರಕುತ್ತಿದ್ದ ನೀರು, 300, 600, 800 ಅಡಿಯಷ್ಟು ಆಳಕ್ಕೆ ಇಳಿದಿದೆ. 1000 ಅಡಿಗೂ ಇಳಿಯಬಹುದು. ನಿಮ್ಮ ಭೂಮಿಯಡಿಯಲ್ಲಿನ ಬೋರ್‌ವೆಲ್ ನೀರು ಸಂಪೂರ್ಣ ಖಾಲಿಯಾಗಬಹುದು. ಆಗ ಏನು ಮಾಡುತ್ತೀರಿ? ಯೋಚಿಸಿ ತಿಳಿಸಿ. ಇದಕ್ಕೆ ಪರಿಹಾರವೇ ಮಳೆಕೊಯ್ಲು, ಬೋರ್‌ವೆಲ್ ಮರುಪೂರ್ಣ, ಅಂತರ್ಜಲವಾಗಿ ಮಳೆನೀರಿನ ಪರಿವರ್ತನೆ.
ಈಗ ನಮ್ಮ ಚಾವಣಿಯ ಮೇಲೆ ಬೀಳುವ ನೀರು ಶುದ್ಧವಾಗಿದ್ದರೂ ಅದು ನೆಲಕ್ಕೆ ಬಿದ್ದಾಗ ಕಲುಷಿತಗೊಳ್ಳುತ್ತದೆ. ಅದು ನೇರವಾಗಿ ಕುಡಿಯಲು ಉಪಯೋಗಕ್ಕೆ ಬರುವುದಿಲ್ಲ. ಒಮ್ಮೆ ಭೂಮಿ ಮೇಲೆ ಬಿದ್ದ ನೀರು ಸಹಜವಾಗಿ ಕಲುಷಿತಗೊಂಡಿರುತ್ತದೆ. ಮಳೆಗಾಲದಲ್ಲಿ ಚಾವಣಿ ಮತ್ತು ನೆಲದ ಮೇಲೆ ಬಿದ್ದ ಈ ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಂಡು ಶುದ್ದೀಕರಿಸಿ ಮನೆಯ ಉಪಯೋಗಕ್ಕೆ ಬೇಕಾಗುವಂತೆ ಮಾಡುವುದು, ಸಂಗ್ರಹಿಸಿ ಇಡುವುದು, ಬಾವಿ ಮತ್ತು ಬೋರ್ವೆಲ್ ರಿಚಾರ್ಜ್ ಮಾಡುವುದು, ಅಂತರ್ಜಲವನ್ನಾಗಿ ಪರಿವರ್ತಿಸುವುದು ಮಳೆಕೊಯ್ಲಿನ ವಿವಿಧ ಆವಿಷ್ಕಾರಗಳಾಗಿವೆ.
ಒಂದು ಕಂಪೌಂಡ್ ನ ನೆಲದ ಮೇಲೆ ಬಿದ್ದ ಒಂದು ಹನಿ ನೀರೂ ಹೊರಗೆ ಹರಿದು ಹೋಗದಂತೆ ಅದನ್ನು ಪೂರ್ಣ ಉಪಯೋಗ ಆಗುವಂತೆ ಮಾಡುವ, ಅಂತರ್ಜಲವನ್ನಾಗಿ ಪರಿವರ್ತಿಸುವ ವಾಟರ್ ಮ್ಯಾನೇಜ್ಮೆಂಟ್ ವ್ಯವಸ್ಥೆಗಳು ಇದೀಗ ಕಾರ್ಯ ರೂಪಕ್ಕೆ ಬಂದಿದೆ. ಪ್ರಸಿದ್ಧ ’ರೈನಿ’ ಎಂಬ ಸಂಸ್ಥೆಯು ಇನೋಸಿಸ್ ಸಂಸ್ಥೆ, ರೈಲ್ವೆ ಸ್ಟೇಷನ್ ಗಳಲ್ಲಿ, ಶಿಕ್ಷಣಸಂಸ್ಥೆಗಳಲ್ಲಿ ಕಾರ್ಯರೂಪಕ್ಕೆ ತಂದಿದೆ. ಚಾವಣಿ ನೀರಿನ ಮಳೆಕೊಯ್ಲು, ಟ್ಯಾಂಕಿನಲ್ಲಿ ನೀರು ಸಂಗ್ರಹ, ಬಾವಿ ಬೋರ್ವೆಲ್ ರಿಚಾರ್ಜ್, ಮಳೆ ನೀರನ್ನು ಅಂತರ್ಜಲವನ್ನಾಗಿ ಭೂಮಿ ಅಡಿಯಲ್ಲಿ ಪರಿವರ್ತಿಸುವುದು ಇವೆಲ್ಲವುಗಳ ಸಂಪೂರ್ಣ ವಿವರಗಳನ್ನು ಸುದ್ದಿಯ ಅರಿವು ಕೃಷಿ ಮಾಹಿತಿ ಕೇಂದ್ರದಲ್ಲಿ ಪಡೆಯಬಹುದು.
ಅರಿವು ಕೃಷಿ ಕ್ಲಿನಿಕ್ (ಸೇವಾ ಕೇಂದ್ರ) (ಸುದ್ದಿ ಸೆಂಟರ್)
ಮುಖ್ಯ ಕಛೇರಿ: ಕ್ರಿಸ್ಟೋಫರ್ ಕಾಂಪ್ಲೆಕ್ಸ್, ಎಪಿಎಂಸಿ ರಸ್ತೆ, ಪುತ್ತೂರು
M: 8050293990 | 6364570738, Email: arivukrushi@gmail.com
ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ, ಪುತ್ತೂರು, ಸುಳ್ಯ, ಬೆಳ್ತಂಗಡಿ