ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷರ ಹೆಸರು ಘೋಷಣಾ ಕಾರ್ಯಕ್ರಮ

0
  • ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಯುವಕರು ಮುಂದೆ ಬರಬೇಕು-ಬೂಡಿಯಾರ್
ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡುತ್ತಿರುವುದು

ಪುತ್ತೂರು: ಜಯಕರ್ನಾಟಕ ಜನಪರ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಹೆಸರು ಘೋಷಣಾ ಕಾರ್ಯಕ್ರಮ ಮಾ.20ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಉದ್ಯಮಿ ಪ್ರವೀಣ್ ಶೆಟ್ಟಿ ತಿಂಗಳಾಡಿರವರ ಹೆಸರನ್ನು ಘೋಷಣೆ ಮಾಡಲಾಯಿತು.

ಪ್ರವೀಣ್ ಶೆಟ್ಟಿ ತಿಂಗಳಾಡಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿಜೆಪಿ ಹಿರಿಯ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು. ಉದ್ಯಮಿಯಾಗಿದ್ದ ಎನ್. ಮುತ್ತಪ್ಪ ರೈಯವರ ಸಾರಥ್ಯದಲ್ಲಿ ಜಯಕರ್ನಾಟಕ ಸಂಘಟನೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದೆ. ಇದೀಗ ಯುವ ನಾಯಕ, ಪುತ್ತೂರಿನವರೇ ಆಗಿರುವ ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಹಲವು ಜನಪರ ಕಾರ್ಯಕ್ರಮಗಳನ್ನು ನಡೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ, ಪುತ್ತೂರಿನಲ್ಲಿಯೂ ಈ ಸಂಘಟನೆ ಜಾತಿ, ಧರ್ಮ, ಪಕ್ಷ ಭೇದ ಮಾಡದೆ ಜನ ಸೇವೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಹಿರಿಯರಾದ ವಿಶ್ವಹಿಂದೂ ಪರಿಷದ್ ಮಾಜಿ ಜಿಲ್ಲಾಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ನನ್ನ ಬಾಲ್ಯ ಸ್ನೇಹಿತರೂ, ಸಹಪಾಠಿಯೂ ಆಗಿದ್ದ ಮುತ್ತಪ್ಪ ರೈಯವರ ನೇತೃತ್ವದಲ್ಲಿ ಜಯಕರ್ನಾಟಕ ಸಂಘಟನೆ ಹಲವು ಕಾರ್ಯಗಳನ್ನು ನಡೆಸಿದೆ. ಯುವನಾಯಕ ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆ ಕೂಡ ಬಹಳಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ರಾಜ್ಯದ ಹಲವೆಡೆ ನಡೆಸುತ್ತಿದೆ, ಈ ಸಂಘಟನೆಯ ಮೂಲಕ ಪುತ್ತೂರಿನಲ್ಲಿಯೂ ಬಹಳಷ್ಟು ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಹಾರೈಸಿದರು.
ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕರಾದ ವಿಟಿವಿ ಮುಖ್ಯಸ್ಥ ರಾಮದಾಸ್ ಶೆಟ್ಟಿ ವಿಟ್ಲರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ನೂತನ ಜಿಲ್ಲಾಧ್ಯಕ್ಷರಾಗಿ ಪ್ರವೀಣ್ ಶೆಟ್ಟಿ ತಿಂಗಳಾಡಿರವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ ರಾಮದಾಸ್ ಶೆಟ್ಟಿಯವರು ಬೆಳ್ಳಿಪ್ಪಾಡಿ ಉರಮಾಲುನವರಾಗಿದ್ದು ಉದ್ಯಮಿಯಾಗಿರುವ ಬಿ. ಗುಣರಂಜನ್ ಶೆಟ್ಟಿಯವರ ನೇತೃತ್ವದ ಜಯಕರ್ನಾಟಕ ಜನಪರ ವೇದಿಕೆಯು ಜಿಲ್ಲೆಯಾದ್ಯಂತ ಬಲಿಷ್ಠವಾಗಿ ಬೆಳೆಯಲಿದೆ. ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ ಎಂದರು. ನೂತನ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ತಿಂಗಳಾಡಿ ಮಾತನಾಡಿ ಎಲ್ಲರ ಸಹಕಾರ ಕೋರಿದರು. ನವೀನ್ ಕುಮಾರ್ ರೈ ಕೈಕಾರ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಟಿ.ವಿ. ನಿರೂಪಕಿ ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಪುರುಷೋತ್ತಮ ಶೆಟ್ಟಿ ನುಳಿಯಾಲು, ಕಾವ್ಯ ಶೆಟ್ಟಿ ನುಳಿಯಾಲು, ಸತೀಶ್ ರೈ ನಡುಬೈಲು, ಸಮರ್ಥ ಭಂಡಾರಿ, ಕಾರ್ತಿಕ್ ರೈ ಸುಳ್ಯ, ಜಗನ್ನಾಥ ರೈ ಬಿ.ಸಿ.ರೋಡ್ ಮತ್ತಿತರರು ಉಪಸ್ಥಿತರಿದ್ದರು.

ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬ ಆಚರಣೆ

ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿಯವರ ಹುಟ್ಟುಹಬ್ಬವನ್ನು ಬೀರಮಲೆಯಲ್ಲಿರುವ ಪ್ರಜ್ಞಾ ಆಶ್ರಮದಲ್ಲಿ ಆಚರಿಸಲಾಯಿತು. ವೇದಿಕೆಯ ರಾಜ್ಯ ಸಂಚಾಲಕ ರಾಮದಾಸ್ ಶೆಟ್ಟಿ ವಿಟ್ಲ, ನೂತನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಂಗಳಾಡಿ ಸಹಿತ ಹಲವರು ಉಪಸ್ಥಿತರಿದ್ದರು.

ಸುದ್ದಿ ಜನಾಂದೋಲನ ವೇದಿಕೆಗೆ ಬೆಂಬಲ: ಫಲಕ ಸ್ವೀಕಾರ

ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಭಿಯಾನಕ್ಕೆ ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕ್ರಮದಲ್ಲಿ ಬೆಂಬಲ ಘೋಷಿಸಲಾಯಿತು. `ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಉತ್ತಮ ಸೇವೆಗೆ ಪುರಸ್ಕಾರ’ ಫಲಕ ಸ್ವೀಕರಿಸಿದ ಬಿಜೆಪಿಯ ಹಿರಿಯ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ, ವಿಶ್ವಹಿಂದೂಪರಿಷದ್ ಮಾಜಿ ಜಿಲ್ಲಾಧ್ಯಕ್ಷ ದಂಬೆಕಾನ ಸದಾಶಿವ ರೈ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮದಾಸ್ ಶೆಟ್ಟಿ ವಿಟ್ಲ, ಪುರುಷೋತ್ತಮ ಶೆಟ್ಟಿ ನುಳಿಯಾಲು, ನೂತನ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಿಂಗಳಾಡಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಕಾವ್ಯ ಶೆಟ್ಟಿ ನುಳಿಯಾಲು ಮತ್ತಿತರರು ಬೆಂಬಲ ವ್ಯಕ್ತಪಡಿಸಿದರು. ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರರವರು ಸುದ್ದಿ ಜನಾಂದೋಲನದ ಕುರಿತು ಮಾಹಿತಿ ನೀಡಿದರು. ಸುದ್ದಿ ಬಳಗದ ಮೋಹನ್ ಶೆಟ್ಟಿ ಉರುವಾಲು ಮತ್ತು ವಸಂತ ಸಾಮೆತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here