ಎ.18: ಪುತ್ತೂರಿನಲ್ಲಿ ತಾಲೂಕು ಮಟ್ಟದ ಆರೋಗ್ಯ ಮೇಳ

0
  • ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ

ಪುತ್ತೂರು: ಕರ್ನಾಟಕ ಸರ್ಕಾರದ ದ.ಕ.ಜಿ.ಪಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ತಾಲೂಕು ಮಟ್ಟದ ಆರೋಗ್ಯ ಮೇಳವು ಎ. 18ರಂದು ಪುತ್ತೂರಿನ ನೆಹರೂನಗರ ಸುದಾನ ವಸತಿ ಶಾಲೆಯಲ್ಲಿ ಪೂವಾಹ್ನ 9 ಗಂಟೆಯಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮತ್ತು ತಾಲೂಕು ನೋಡೆಲ್ ಅಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದ್ದಾರೆ.

ಆರೋಗ್ಯ ಮೇಳವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ಸಹಾಯಕ ಕಮೀಷನರ್ ಗಿರೀಶ್ ನಂದನ್, ತಹಸೀಲ್ದಾರ್ ಟಿ. ರಮೇಶ್ ಬಾಬು, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ, ಡಿವೈಎಸ್‌ಪಿ ಗಾನ ಪಿ ಕುಮಾರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಉದ್ಘಾಟನೆಗೆ ಮೊದಲು ಬೊಳುವಾರು ವೃತ್ತದಿಂದ ಸುದಾನ ಶಾಲಾ ವಠಾರಕ್ಕೆ ಆರೋಗ್ಯ ಜಾಗೃತಿ ಜಾಥಾ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಉಚಿತ ತಪಾಸಣೆ, ಔಷಧಿ ವಿತರಣೆ:

ಆರೋಗ್ಯ ಮೇಳದಲ್ಲಿ ಎಲ್ಲಾ ಕಾಯಿಲೆಗಳಿಗೆ ಉಚಿತವಾಗಿ ವೈದ್ಯಕೀಯ ತಪಾಸಣೆ ಮತ್ತು ಔಷಧಿ ವಿತರಣೆ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವಿಕೆ, ಪ್ರಚಾರ ಹಾಗೂ ಆರೋಗ್ಯ ಮಾಹಿತಿ ಮತ್ತು ಶಿಕ್ಷಣ, ಅಗತ್ಯವಿರುವವರಿಗೆ ಪ್ರಯೋಗಾಲಯ ತಪಾಸಣೆ ನಡೆಯಲಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಕೊಡಲಾಗುವುದು. ಇದಕ್ಕಾಗಿ ಸಾರ್ವಜನಿಕರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಡಾ. ದೀಪಕ್ ರೈ ತಿಳಿಸಿದ್ದಾರೆ.

ಲಭ್ಯವಿರುವ ವೈದ್ಯರು, ಸೇವಾ ಸೌಲಭ್ಯ:

ವೈದ್ಯಕೀಯ ತಜ್ಞರು, ಶಸ್ತ್ರ ಚಿಕಿತ್ಸಕರು, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಎಲುಬು -ಕೀಲು ತಜ್ಞರು, ಚರ್ಮ ಲೈಂಗಿಕ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಕಣ್ಣಿನ ಪರೀಕ್ಷಾ ಕೇಂದ್ರ, ದಂತ ಚಿಕಿತ್ಸಾ ಕೇಂದ್ರ, ಉಚಿತ ಔಷಧಿ ಮತ್ತು ಪ್ರಯೋಗಾಲಯ ಸೇವೆ, ಹೆಚ್.ಐ.ವಿ ಆಪ್ತ ಸಮಾಲೊಚನೆ ಮತ್ತು ಪರೀಕ್ಷೆ, ಆಯುಷ್ ಕ್ಲಿನಿಕ್ ಆಯುರ್ವೇದಿಕ್ ಸಿದ್ಧ, ಹೋಮಿಯೋಪತಿ, ಅಸಾಂಕ್ರಾಮಿಕ ರೋಗ ತಪಾಸಣೆ (ಎನ್.ಸಿ.ಡಿ ಕ್ಲಿನಿಕ್), ಯುನಾನಿ ಔಷಧಿ ಕ್ಲಿನಿಕ್ ಆಪ್ತ ಸಮಾಲೋಚನೆ(ಹದಿಹರೆಯದ ಮಕ್ಕಳಿಗೆ), ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷಿಕತೆ, ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸುವಿಕೆ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಸೌಲಭ್ಯಗಳ ಮಾಹಿತಿ, ಕೋವಿಡ್ -19 ಲಸಿಕಾಕರಣ, ಕ್ಷಯರೋಗ, ಮಲೇರಿಯಾ, ಹೀಮೋಗ್ಲೋಬಿನ್ ಪರೀಕ್ಷೆ ಸೌಲಭ್ಯಗಳು ಆರೋಗ್ಯ ಮೇಳದಲ್ಲಿ ಇದೆ.
ಡಾ. ದೀಪಕ್ ರೈ ತಾಲೂಕು ಆರೋಗ್ಯಾಧಿಕಾರಿ

LEAVE A REPLY

Please enter your comment!
Please enter your name here