ಹಿರಿಯ ಸಾಹಿತಿ ಟಿ.ಜಿ.ಮುಡೂರು ಇನ್ನಿಲ್ಲ

0

ಪುತ್ತೂರು:ಹಿರಿಯ ಸಾಹಿತಿ ವಿದ್ವಾನ್ ಟಿ.ಜಿ.ಮುಡೂರು(95ವ.)ರವರು ವಯೋಸಹಜ ಅಸೌಖ್ಯದಿಂದಾಗಿ ಏ.೨೦ರಂದು ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಎ.19ರಂದು ಪುತ್ತೂರಿನಲ್ಲಿರುವ ಪುತ್ರಿ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರ ಪತ್ನಿ ಶೋಭಾಶಿವಾನಂದ್ ಅವರ ಮನೆಗೆ ಬಂದಿದ್ದ ಟಿ.ಜಿ.ಮುಡೂರು ಅವರು ಆರೋಗ್ಯವಾಗಿದ್ದರು.ಏ.20ರಂದು ಮಧ್ಯಾಹ್ನ ದಿಢೀರ್ ಅಸ್ವಸ್ಥರಾದ ಅವರನ್ನು ಕೂಡಲೇ ಚೇತನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು.ಆದರೂ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ವೇಳೆಗೆ ಅವರು ನಿಧನರಾದರು.ನಾಡಿನ ಅಗ್ರಮಾನ್ಯ ಸಾಹಿತಿಯಾಗಿದ್ದ ತಮ್ಮಯ್ಯ ಗೌಡ ಮುಡೂರು ಇಳಿ ವಯಸ್ಸಿನವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದರು.ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಪ್ರಥಮಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.ಸುದೀರ್ಘ ಕಾಲ ಅಧ್ಯಾಪನ ವೃತ್ತಿ ನಡೆಸಿದ್ದ ಮುಡೂರು ಸಾಹಿತ್ಯ ಸಂಘಟಕರಾಗಿಯೂ ಮುಂಚೂಣಿಯಲ್ಲಿದ್ದರು.ಮೃತರು ಪತ್ನಿ ಕಮಲ,ಪುತ್ರಿಯರಾದ ಶೋಭಾಶಿವಾನಂದ್, ಪ್ರಾಧ್ಯಾಪಕಿ ಗೀತಾಪುಂಡರೀಕ, ಡಾ.ಮಮತಾಕಿರಣ್, ಪುತ್ರ ಸವಿತಾರ ಮುಡೂರು ಹಾಗೂ ಅಳಿಯಂದಿರಾದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ್, ನಿವೃತ್ತ ಪ್ರೊಫೆಸರ್ ಪುಂಡರೀಕ ಅಡ್ಪಂಗಾಯ, ಇಂಜಿನಿಯರ್ ಕಿರಣ್, ಸೊಸೆ ಲತಾ ಸವಿತಾರ, ಮೊಮ್ಮಕ್ಕಳನ್ನು ಹಾಗೂ ಅನೇಕ ಅಭಿಮಾನಿಗಳನ್ನು ಅಗಲಿದ್ದಾರೆ.
ಎ.೨೧ರಂದು ಅಂತ್ಯ ಸಂಸ್ಕಾರ: ಸಾಹಿತಿ ಟಿ.ಜಿ.ಮುಡೂರುರವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಎ.೨೧ರಂದು ಅಪರಾಹ್ನ ಪಂಜದ ಅವರ ಮನೆಯಲ್ಲಿ ನಡೆಯಲಿದೆ. ಅವರ ಪಾರ್ಥೀವ ಶರೀರವನ್ನು ಪುತ್ತೂರಿನಿಂದ ಪಂಜಕ್ಕೆ ಕೊಂಡೊಯ್ಯಲಾಗಿದ್ದು ಪೂರ್ವಾಹ್ನ ಅಂತಿಮ ದರ್ಶನದ ಬಳಿಕ ಅಪರಾಹ್ನ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here