ಕೋರಿಯಾರ್ ಸೇತುವೆಗೆ ಹೆಚ್ಚಿದ ಬೇಡಿಕೆ: ಸಚಿವರಿಂದ ಪೂರಕ ಸ್ಪಂದನೆ

0

ಪುತ್ತೂರು: ಕಡಬ ತಾಲೂಕಿನ 102 ನೇ ನೆಕ್ಕಿಲಾಡಿ ಗ್ರಾಮ ಹಾಗೂ ಸಂಸದರ ಆದರ್ಶ ಗ್ರಾಮ ಬಳ್ಪವನ್ನು ಸಂಪರ್ಕಿಸುವ ಕೋರಿಯಾರ್ ಎಂಬಲ್ಲಿ ಕುಮಾರಧಾರ ನದಿಗೆ ಶೀಘ್ರ ಸೇತುವೆ ನಿರ್ಮಾಣ ಮಾಡಬೇಕೆನ್ನುವ ಬೇಡಿಕೆ ತೀವ್ರವಾಗಿದ್ದು, ಇಲ್ಲಿನ ಸೇತುವೆ ಅನುಷ್ಠಾನ ಸಮಿತಿಯವರು ಜನಪ್ರತಿನಿಧಿಗಳು ಹಾಗೂ ಸರಕಾರಕ್ಕೆ ದುಂಬಾಲು ಬಿದ್ದಿದ್ದಾರೆ.

ಸಂಸದ ನಳಿನ್ ಕುಮರ್ ಕಟೀಲ್ ಅವರ ಶಿಫಾರಸ್ಸಿನ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 9 ಕೋಟಿ ರೂ ಅನುದಾನದಲ್ಲಿ ಸುಮಾರು 9 ಕಿಲೋ ಮೀಟರ್ ಉದ್ದದ ಕೋಡಿಂಬಾಳ- ಕೋರಿಯರ್- ಕರ್ಮಾಯಿ ಪಾದೆ ಮಜಲು – ಬ್ರಾಂತಿಕಟ್ಟೆ ರಸ್ತೆ ಅಭಿವೃದ್ಧಿ ಕಾರ್ಯವಾಗುತ್ತಿದ್ದು, ಕೋರಿಯಾರ್ ಬಳಿ ಕುಮಾರಧಾರ ನದಿ ಬದಿಯಲ್ಲಿ ಸದೃಢ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ತಡೆ ಗೋಡೆ ಬಳಿಯಿಂದ ಬಳ್ಪ ಗ್ರಾಮವನ್ನು ಸಂಪರ್ಕಿಸುವುದಕ್ಕಾಗಿ ಕುಮಾರಧಾರ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣವಾಗಬೇಕೆನ್ನುವ ಹಕ್ಕೊತ್ತಾಯನ್ನು ಬಲವಾಗಿ ಪ್ರತಿಪಾದಿಸಲಾಗುತ್ತಿದೆ.

ಸೇತುವೆ ನಿರ್ಮಾಣಕ್ಕಾಗಿ ಈಗಾಗಲೇ ಸಚಿವ ಎಸ್.ಅಂಗಾರ ಮುಖಾಂತರ ಮನವಿ ಸಲ್ಲಿಸಲಾಗಿದ್ದು. ಸಚಿವರಿಂದ ಪೂರಕ ಸ್ಪಂದನೆ ದೊರೆತಿದೆ. ಮುಖ್ಯವಾಗಿ ನೂತನ ತಾಲೂಕು ಕೇಂದ್ರವಾಗಿ ಅನುಷ್ಠಾನಗೊಳ್ಳುತ್ತಿರುವ ಕಡಬ ತಾಲೂಕಿಗೆ ಒಳಪಡುವ ಗ್ರಾಮಗಳ ಸಂಪರ್ಕಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣವಾದಲ್ಲಿ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ.  ಮಡಿಕೇರಿ, ಸಂಪಾಜೆ, ಮರ್ಕಂಜ, ಎಳಿಮಲೆ, ಗುತ್ತಿಗಾರು, ಬಳ್ಪ, ಕೋರಿಯಾರ್, ಮರ್ಧಾಳ, ಪೆರಿಯಶಾಂತಿಮುಖಾಂತರ ಧರ್ಮಸ್ಥಳಕ್ಕೆ ಸಂಪರ್ಕಿಸಲು ಯಾತ್ರಾರ್ಥಿಗಳಿಗೆ ಸುಮಾರು 45 ಕಿಲೋ ಮಿಟರ್ ಉಳಿಕೆಯಾಗಲಿದೆ. ಕೇನ್ಯ, ಬಳ್ಪ, ಏನೆಕಲ್ಲು, ಗುತ್ತಿಗಾರು, ದೊಡ್ಡ ತೋಟ, ಮರ್ಕಂಜ, ಸಂಪಾಜೆ, ಮಡಿಕೇರಿ, 102 ನೇ ನೆಕ್ಕಿಲಾಡಿ, ಐತ್ತೂರು, ಕುಟ್ರುಪ್ಪಾಡಿ, ಬಂಟ್ರ, ರೆಂಜಿಲಡಿ, ನೂಜಿಬಾಳ್ತಿಲ, ಕೊಣಾಜೆ ಹಾಗೂ ಇಚ್ಲಂಪಾಡಿ ಗ್ರಾಮಗಳ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಈ ಭಾಗದ ಬಡ ರೈತರಿಗೆ, ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ಉದ್ಯೋಗದಾತರಿಗೆ ಹೀಗೆ ಹತ್ತು ಹಲವು ಸ್ತರದ ನಾಗರೀಕ ಬಂಧುಗಳಿಗೆ ಅತ್ಯಗತ್ಯವಾಗಿರುವ ಕೋರಿಯಾರ್ ಸೇತುವೆ ನಿರ್ಮಾಣವಾಗಬೇಕಿದೆ ಎನ್ನುವ ಅಗ್ರಹ ಕೇಳಿ ಬರುತ್ತಿದೆ. ಈ ಭಾಗದ ಜನರ ಅಗ್ರಹದ ಹಿನ್ನೆಯಲ್ಲಿ ಸಚಿವ ಅಂಗಾರ ಅವರು ದೂರದೃಷ್ಠಿಯ ಯೋಜನೆಯೊಂದನ್ನು ರೂಪಿಸಲು ನಿರ್ಧರಿಸಿದ್ದಾರೆ. ಬಹುಕೋಟಿ ರೂ ವೆಚ್ಚದಲ್ಲಿ ನೀರಾವರಿಗಾಗಿ ಅಣೆಕಟ್ಟು ಯೋಜನೆಯೊಂದಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸರ್ವಋತು ಸೇತುವೆ ನಿರ್ಮಾಣಕ್ಕೆ ನೀಲ ನಕಾಶೆಯನ್ನು ಸಿದ್ದಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೋರಿಯಾರ್‌ನಲ್ಲಿ ಕುಮಾರಧಾರ ನದಿಗೆ ಸೇತುವೆ ನಿರ್ಮಸಿ ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಅಗ್ರಹಿಸುತ್ತಲೇ ಬರಲಾಗಿದೆ. ನಮ್ಮ ಭಾಗಕ್ಕೆ ಈಗಾಗಲೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 9 ಕೋಟಿ ರೂ ವೆಚ್ಚದಲ್ಲಿ ಸದೃಢ ರಸ್ತೆ ನಿರ್ಮಾಣವಾಗುತ್ತಿದೆ. ಈ ರಸ್ತೆಯ ಅಭಿವೃದ್ಧಿಯ ಭಾಗವಾಗಿ ಕೋರಿಯಾರ್‌ನಲ್ಲಿ ಕುಮಾರಧಾರ ನದಿಗೆ ಸರ್ವ ಋತು ಸೇತುವ ನಿರ್ಮಾಣ ಮಾಡಬೆಕಾಗಿದೆ. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ ಅವರಿಗೆ ಮನವಿ ಸಲ್ಲಿಸಲಾಗಿದೆ. ನಮಗೆ ಸೇತುವ ನಿರ್ಮಾಣದ ಪೂರಕ ಸ್ಪಂದನೆ ದೊರೆತಿದ್ದು ಈ ಭಾಗದ ಪ್ರಮುಖರು ಸೇತುವೆಗೆ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದ್ದಾರೆ. ಸರ್ವೋತ್ತಮ ಗೌಡ ಪಂಜೋಡಿ ಉಪಾಧ್ಯಕ್ಷರು, ಕೋರಿಯಾರ್ ಸೇತುವೆ ಅನುಷ್ಠಾನ ಸಮಿತಿ

ಕೋರಿಯಾರ್‌ನಲ್ಲಿ ಕುಮಾರಾಧಾರ ನದಿಗ ಸೇತುವೆ ನಿರ್ಮಿಸಬೇಕೆನ್ನುವ ಅಲ್ಲಿನ ಜನರ ಬೇಡಿಕೆಯನ್ನು ಸರಕಾರದ ಮಟ್ಟದಲ್ಲಿ ತಿಳಿಸಲಾಗಿದೆ. ಇಲ್ಲಿ ಬೃಹತ್ ಕಿಂಡಿ ಅಣೆಕಟ್ಟಿನೊಂದಿಗೆ ರಸ್ತೆಗೆ ಅನುಕೂಲವಾಗುವ ಸೇತುವೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ಈ ಬಗ್ಗೆ ಈಗಾಗಲೇ ಜಲ ಸಂಪನ್ಮೂಲ ಸಚಿವ ಮಾಧು ಸ್ವಾಮಿ ಅವರಿಗೆ ಮನವಿ ಮಾಡಲಾಗಿದ್ದು, ಅನುದಾನ ಮಂಜೂರಾತಿಗಾಗಿ ಎಲ್ಲ ರೀತಿಯ ಪ್ರಯತ್ನ ನಡೆಯುತ್ತಿದೆ. – ಎಸ್.ಅಂಗಾರ, ಬಂದರು, ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವರು

LEAVE A REPLY

Please enter your comment!
Please enter your name here