ಹಿರಿಯರ, ಕಿರಿಯರ ನಡುವೆ `ಕೈ’ ಕಲಹ-ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ತಡೆ ನೀಡಿದ ಬ್ಲಾಕ್ ಕಾಂಗ್ರೆಸ್

0
  • ಶ್ರೀಪ್ರಸಾದ್ ಪಾಣಾಜೆಗೆ ನೊಟೀಸ್ ಜಾರಿ ಮಾಡಿದ ಎಂ.ಬಿ. ವಿಶ್ವನಾಥ ರೈ
  • ಹಸ್ತಲಾಘವ ಕಾರ್ಯಕ್ರಮದಲ್ಲಿನ ಶೀತಲ ಸಮರ ಹೈಕಮಾಂಡ್ ಅಂಗಳಕ್ಕೆ

 

ಪುತ್ತೂರು: ಪುತ್ತೂರು ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಕಲಹ ಕಾಣಿಸಿಕೊಂಡಿದೆ. ಈ ಬಾರಿ ಹಿರಿಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಬಹಿರಂಗವಾಗಿದೆ. ಸದಾ ಬಣ ರಾಜಕೀಯದಿಂದಲೇ ಸುದ್ದಿಯಾಗುತ್ತಿರುವ ಪುತ್ತೂರು ಬ್ಲಾಕ್ ಕಾಂಗ್ರೆಸ್ ಇತ್ತೀಚೆಗೆ ಸಂಘಟನಾತ್ಮಕ ಚಟುವಟಿಕೆಗೆ ಆದ್ಯತೆ ನೀಡುತ್ತಿದೆ. ಪಟ್ಟಣ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಪಕ್ಷ ಚಟುವಟಿಕೆ ಚುರುಕುಗೊಳಿಸಲಾಗುತ್ತಿದೆ. ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರ ನೇತೃತ್ವದಲ್ಲಿ ಮಹಿಳಾ ಘಟಕ, ಕಾರ್ಮಿಕ ಘಟಕ, ನಗರ ಘಟಕ, ಹಿಂದುಳಿದ ವರ್ಗಗಳ ಘಟಕ ಸಹಿತ ವಿವಿಧ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಭಟನೆ, ಪತ್ರಿಕಾಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಪುತ್ತೂರು ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯುತ್ತಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ. ಜತೆಗೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಜತೆ ಗುರುತಿಸಿಕೊಂಡಿರುವ ಶ್ರೀಪ್ರಸಾದ್ ಪಾಣಾಜೆ ಸಾರಥ್ಯದ ಯುವಕ ಕಾಂಗ್ರೆಸ್ ತನ್ನ ಚಟುವಟಿಕೆಗಳ ಮೂಲಕ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇ  ಆದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಷ್ಟ ಏನಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ಈಗಾಗಲೇ ಚುನಾವಣೆಗೆ ಅಭ್ಯರ್ಥಿಯ ಆಯ್ಕೆಗೆ ಸಿದ್ಧತೆ ನಡೆಸುತ್ತಿದೆ. ಯಾರು ಅಭ್ಯರ್ಥಿ ಆಗಬಹುದು, ಅವರ ವಯಸ್ಸು, ಸಾಮರ್ಥ್ಯ ಏನು, ಮುಖಂಡರನ್ನು, ಕಾರ್ಯಕರ್ತರನ್ನು ಜತೆಯಾಗಿ ಕೊಂಡೊಯ್ಯಬಲ್ಲವರು ಯಾರು, ಜಾತಿ ಬಲ, ಹಣ ಬಲ ಹೊಂದಿರುವವರು ಯಾರು ಎಂಬ ಮಾಹಿತಿಯನ್ನು ಹೈಕಮಾಂಡ್ ಸಂಗ್ರಹಿಸುತ್ತಿದೆ. ಅಲ್ಲದೆ, ಬಿಜೆಪಿಯೊಳಗಿನ ಅಸಮಾಧಾನಿತರಿಗೆ ಬಲೆ ಬೀಸುತ್ತಿದೆ. ರಾಜ್ಯದ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ ಮಾಹಿತಿ ಸಂಗ್ರಹ ನಡೆಸುತ್ತಿರುವ ಹೈಕಮಾಂಡ್ ಪುತ್ತೂರಿನ ಅಭ್ಯರ್ಥಿ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದೆ. ಹಲವರ ಹೆಸರು ಈಗಾಗಲೇ ವರಿಷ್ಠರ ಮಟ್ಟದಲ್ಲಿ ಚರ್ಚೆಯಲ್ಲಿದೆ. ಈ ಮಧ್ಯೆ, ಪುತ್ತೂರಿನಲ್ಲಿ ಹಿರಿಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಡುವೆ ಶೀತಲ ಸಮರ ನಡೆಯುತ್ತಿರುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಬೇಸರ ತಂದಿದೆ. ಅಲ್ಲದೆ, ಹಿರಿಯ, ಕಿರಿಯ ಕಾಂಗ್ರೆಸ್ಸಿಗರ ನಡುವಿನ ಭಿನ್ನಾಭಿಪ್ರಾಯ ವರಿಷ್ಠರವರೆಗೂ ತಲುಪಿದೆ.

 

ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬ್ಲಾಕ್ ಕಾಂಗ್ರೆಸ್ ತಡೆ: ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ವತಿಯಿಂದ ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ‘ಹಸ್ತಲಾಘವ….ಇದು ಕೈ ಕಾರ್ಯಕರ್ತರ ಸ್ನೇಹ ಸಮಾಗಮ’ ಎಂಬ ಕಾರ್ಯಕ್ರಮವನ್ನು ಆರ್ಯಾಪು ಗ್ರಾಮದ ಸಂಪ್ಯದಲ್ಲಿರುವ ಅಕ್ಷಯ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜೂನ್ ೨೬ರಂದು ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ.ರವರ ಗಮನಕ್ಕೆ ತಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆರವರು ಕಾರ್ಯಕ್ರಮ ನಿಗದಿ ಪಡಿಸಿದ್ದರು. ಇದೀಗ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿ ಅತಿಥಿ, ಅಭ್ಯಾಗತರನ್ನು ಅಂತಿಮಗೊಳಿಸಿ ಬ್ಯಾನರ್ ಇತ್ಯಾದಿಗಳನ್ನು ಸಿದ್ಧಪಡಿಸುವ ವೇಳೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆರವರಿಗೆ ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ನೊಟೀಸ್ ಜಾರಿಗೊಳಿಸಿ ಕಾರ್ಯಕ್ರಮವನ್ನು ರದ್ದು ಪಡಿಸುವಂತೆ ಸೂಚಿಸಿದ್ದಾರೆ. ಜೂನ್ ೧೨ರಂದು ಜಾರಿಗೊಳಿಸಲಾಗಿರುವ ನೊಟೀಸಿನಲ್ಲಿ ಎಂ.ಬಿ.ವಿಶ್ವನಾಥ ರೈಯವರು ‘ತಾವು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಯುವಕರನ್ನು ಸಂಘಟಿಸಿ ಪಕ್ಷವನ್ನು ಬೆಳೆಸುವ ಗುರುತರ ಜವಾಬ್ದಾರಿಯನ್ನು ಹೊಂದಿರುತ್ತೀರಿ. ಆದರೆ, ದಿನಾಂಕ ೨೬-೦೬-೨೦೨೨ರಂದು ತಾವು ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರದ ಜನಪ್ರತಿನಿಧಿಗಳ, ನಾಯಕರ ಹಾಗೂ ಕಾರ್ಯಕರ್ತರ ಸಭೆಯನ್ನು ‘ಹಸ್ತಲಾಘವ’ ಎಂಬ ಹೆಸರಿನಲ್ಲಿ ಕರೆದಿರುತ್ತೀರಿ. ಪಕ್ಷದ ಕಾರ್ಯಕರ್ತರ, ಜನಪ್ರತಿನಿಧಿಗಳ ಹಾಗೂ ನಾಯಕರ ಸಭೆ ಕರೆಯುವರೇ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಅದರ ಉನ್ನತ ಸಮಿತಿಗಳಿಗೆ ಮಾತ್ರ ಅವಕಾಶವಿದ್ದು ಯುವ ಕಾಂಗ್ರೆಸ್ ಈ ಸಭೆಯನ್ನು ಕರೆದಿರುವುದು ತಮ್ಮ ವ್ಯಾಪ್ತಿಯನ್ನು ಮೀರಿ ಕಾರ್ಯ ನಿರ್ವಹಿಸುವುದಾಗಿದೆ. ಮತ್ತು ಇದು ಪಕ್ಷದ ನಡವಳಿಕೆ ಮತ್ತು ನಿಯಮಗಳ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ತಾವು ‘ಹಸ್ತಲಾಘವ ಸಭೆ’ಯನ್ನು ತಕ್ಷಣ ರದ್ದುಪಡಿಸಬೇಕೆಂದು ಈ ಮೂಲಕ ಸೂಚಿಸುತ್ತೇನೆ. ಯುವ ಕಾಂಗ್ರೆಸ್ ಪರಿಧಿಯಲ್ಲಿ ಬರುವ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರುವಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಲು ಬದ್ಧರಾಗಿರುತ್ತೇವೆ’ ಎಂದು ಶ್ರೀಪ್ರಸಾದ್ ಪಾಣಾಜೆರವರಿಗೆ ನೊಟೀಸಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಿಗೆ, ಕಾರ್ಯಾಧ್ಯಕ್ಷರಿಗೆ, ಡಿಸಿಸಿ ಅಧ್ಯಕ್ಷರಿಗೆ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಿಗೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಅವರಿಗೆ ನೊಟೀಸಿನ ಯಥಾ ಪ್ರತಿಯನ್ನು ವಿಶ್ವನಾಥ ರೈ ರವಾನಿಸಿದ್ದಾರೆ.

 

ಯುವ ಕಾಂಗ್ರೆಸ್ ಸಭೆಯಲ್ಲಿ ಚರ್ಚಿಸುತ್ತೇವೆ- ಶ್ರೀಪ್ರಸಾದ್ ಪಾಣಾಜೆ

ಪಕ್ಷ ಸಂಘಟನೆಯ ಉದ್ದೇಶದಿಂದ ವಿವಿಧ ಸ್ಥಳಗಳಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಆರ್ಯಾಪು ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಕಾರ್ಯಕ್ರಮ ನಡೆಸಲು ಸ್ಥಳ, ದಿನಾಂಕ ನಿಗದಿ ಪಡಿಸಿದ್ದೆವು. ಬ್ಲಾಕ್ ಅಧ್ಯಕ್ಷ ವಿಶ್ವನಾಥ ರೈಯವರಿಗೆ ಮಾಹಿತಿ ನೀಡಿದ್ದೆವು. ಅವರು ಒಪ್ಪಿಗೆ ನೀಡಿದ್ದರು. ಬಳಿಕ ಮಾಜಿ ಶಾಸಕಿ ಶಕು ಅಕ್ಕನವರಿಗೆ ತಿಳಿಸಿದ್ದೆವು. ಅಧ್ಯಕ್ಷರು ಏನು ಹೇಳಿದ್ದಾರೆ ಅಂತ ಅಕ್ಕ ಕೇಳಿದ್ದರು. ಅವರು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದೆ. ಹಾಗಾದರೆ ಕಾರ್ಯಕ್ರಮ ಮಾಡಿ ಎಂದು ಹೇಳಿದ್ದರು. ಕಾರ್ಯಕ್ರಮ ನಡೆಯುವ ಕೆಲವು ಗ್ರಾಮಗಳು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಬರುವುದರಿಂದ ಅಧ್ಯಕ್ಷರಾದ ಡಾ. ರಾಜಾರಾಮ್ ಅವರಿಗೂ ತಿಳಿಸಿದ್ದೆವು. ನಂತರವೇ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದ್ದೆವು. ಆದರೆ, ಇದೀಗ ಬ್ಲಾಕ್ ಅಧ್ಯಕ್ಷರು ನೊಟೀಸ್ ಜಾರಿ ಮಾಡಿ ಕಾರ್ಯಕ್ರಮ ರದ್ದು ಪಡಿಸುವಂತೆ ಹೇಳಿದ್ದಾರೆ. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಲೀ, ಜಿಲ್ಲಾಧ್ಯಕ್ಷರಾಗಲೀ ಏನೂ ಹೇಳಿಲ್ಲ. ಆದ್ದರಿಂದ ಈ ಬಗ್ಗೆ ನಮ್ಮ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ತಿಳಿಸಿದ್ದಾರೆ.

 

ಯುವಕರ ಕಾರ್ಯಕ್ರಮ ನಡೆಸಲು ಬೆಂಬಲ ನೀಡುತ್ತೇವೆ-ಎಂ.ಬಿ.ವಿಶ್ವನಾಥ ರೈ

ಯುವ ಕಾಂಗ್ರೆಸ್ ಘಟಕದವರು ಯುವಕರ ಕಾರ್ಯಕ್ರಮ ನಡೆಸಲು ನಮ್ಮ ಸಂಪೂರ್ಣ ಬೆಂಬಲ, ಪ್ರೋತ್ಸಾಹ ಇದೆ. ಅದನ್ನು ನೊಟೀಸಿನಲ್ಲಿಯೂ ತಿಳಿಸಿದ್ದೇನೆ. ಜನಪ್ರತಿನಿಧಿಗಳು, ಹಿರಿಯ ನಾಯಕರನ್ನು ಕರೆದು ಸಭೆ ಮಾಡಲು ಅವರಿಗೆ ಅವಕಾಶ ಇಲ್ಲ. ಹಾಗಾಗಿ ಕಾರ್ಯಕ್ರಮ ರದ್ದು ಪಡಿಸಲು ಹೇಳಿದ್ದೇನೆ. ಯುವ ಕಾಂಗ್ರೆಸ್ ಕಾರ್ಯಕ್ರಮ ನಡೆಸುತ್ತೇವೆ ಎಂದು ಹೇಳಿದ್ದರು. ಅದಕ್ಕೆ ಒಪ್ಪಿಗೆ ಎಂದು ಹೇಳಿದ್ದೆ. ಆದರೆ, ಅವರ ಪರಿಧಿಯನ್ನು ಮೀರಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ತಡೆ ನೀಡಿದ್ದೇನೆ. ಪುತ್ತೂರಿನಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಮೂಲಕ ಸಕ್ರಿಯ ಚಟುವಟಿಕೆಯಲ್ಲಿದೆ. ಯುವ ಕಾಂಗ್ರೆಸ್ ಕೂಡ ಮಾಡುವ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತೇವೆ. ನಿಗದಿ ಪಡಿಸಿರುವ ಈ ಕಾರ್ಯಕ್ರಮದ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷರಿಗೆ ತಿಳಿಸಿದ್ದನೆ. ಅವರ ಸೂಚನೆಯಂತೆ ನೊಟೀಸ್ ಜಾರಿ ಮಾಡಿದ್ದೇನೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here