ಯುವ ಕಾಂಗ್ರೆಸ್ `ಹಸ್ತಲಾಘವ’ ವಿವಾದ ಜಿಲ್ಲಾಧ್ಯಕ್ಷರಿಂದ ಬ್ಲಾಕ್, ಯುವ ಅಧ್ಯಕ್ಷರೊಂದಿಗೆ ಚರ್ಚೆ

0
  • `ಹಸ್ತಲಾಘವ’ ಬದಲು `ಯುವ ಹಸ್ತಲಾಘವ’ ಕಾರ್ಯಕ್ರಮ ಮಾಡಲು ಸೂಚನೆ
  •  ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಯುವ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆಯವರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕರೆಸಿ ಚರ್ಚಿಸಿದ ಹರೀಶ್ ಕುಮಾರ್
  • ಯುವ ಹಸ್ತಲಾಘವ ಕಾರ್ಯಕ್ರಮವಾಗಿ ನಡೆಸಲು ಇಬ್ಬರಿಂದಲೂ ಒಪ್ಪಿಗೆ -ಗೊಂದಲಕ್ಕೆ ತೆರೆ

ಪುತ್ತೂರು:ಪುತ್ತೂರು ಯುವ ಕಾಂಗ್ರೆಸ್ ವತಿಯಿಂದ ನಡೆಸಲು ಉದ್ಧೇಶಿಸಿರುವ `ಹಸ್ತಲಾಘವ’ ಕಾರ್ಯಕ್ರಮದ ಬದಲು `ಯುವ ಹಸ್ತಲಾಘವ’ ಹೆಸರಿನಲ್ಲಿ ಕಾರ್ಯಕ್ರಮ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸೂಚಿಸಿ, ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷರು ಇದಕ್ಕೆ ಒಪ್ಪಿಗೆ ಸೂಚಿಸುವ ಮೂಲಕ, ಕಳೆದ ಕೆಲವು ದಿನಗಳಿಂದ ಹಸ್ತಲಾಘವ ಕಾರ್ಯಕ್ರಮದ ಕುರಿತು ಬ್ಲಾಕ್ ಮತ್ತು ಯುವ ಕಾಂಗ್ರೆಸ್ ನಡುವೆ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ನಾಯಕರೊಂದಿಗೆ ಎಂ.ಬಿ. ವಿಶ್ವನಾಥ ರೈ ಮತ್ತು ಶ್ರೀಪ್ರಸಾದ್ ಪಾಣಾಜೆ

ಪುತ್ತೂರು ಯುವ ಕಾಂಗ್ರೆಸ್ ಆಶ್ರಯದಲ್ಲಿ ಆರ್ಯಾಪು ಜಿಲ್ಲಾ ಪಂಚಾಯತ್ ಮಟ್ಟದ ಹಸ್ತಲಾಘವ ಕಾರ್ಯಕ್ರಮ ನಡೆಸಲು ನಿರ್ಧರಿಸಿ ಇದಕ್ಕಾಗಿ ಸಿದ್ಧತೆ ನಡೆಸಲಾಗಿತ್ತು.ಆದರೆ ಈ ಕಾರ್ಯಕ್ರಮ ಯುವಕಾಂಗ್ರೆಸ್ ವ್ಯಾಪ್ತಿಗೆ ಮೀರಿದ ಕಾರ್ಯಕ್ರಮವಾಗಿರುವುದರಿಂದ ಉzಶಿತ ಈ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆರವರಿಗೆ ನೋಟಿಸ್ ಜಾರಿ ಮಾಡಿದ್ದರು.ಬಳಿಕ ಈ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿ ಗೊಂದಲ ಏರ್ಪಟ್ಟಿತ್ತು.ಪುತ್ತೂರು ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿತ್ತು.`ಎಂ.ಬಿ.ವಿಶ್ವನಾಥ ರೈರವರು ಕಾರ್ಯಕ್ರಮ ನಡೆಸದಂತೆ ನೊಟೀಸ್ ಜಾರಿ ಮಾಡಿದ್ದರೂ ಯಾವುದೇ ಕಾರಣಕ್ಕೂ ಹಸ್ತಲಾಘವ ಕಾರ್ಯಕ್ರಮ ನಿಲ್ಲುವುದಿಲ್ಲ.ನಿಗದಿತ ಸಮಯಕ್ಕೆ ಕಾರ್ಯಕ್ರಮ ನಡೆಯುತ್ತದೆ’ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಸಭೆಯಲ್ಲಿ ಘೋಷಿಸಿದ್ದರು.

ಜಿಲ್ಲಾಧ್ಯಕ್ಷ ಹರೀಶ್ ಕುಮಾರ್‌ರಿಂದ ಬ್ಲಾಕ್, ಯುವ ಅಧ್ಯಕ್ಷರ ಸಭೆ: ವಿವಾದ ಮುಂದುವರಿದ ಹಿನ್ನೆಲೆಯಲ್ಲಿ ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್‌ರವರು ಜೂ.16ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆಯವರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿ ಕರೆಸಿ ಚರ್ಚೆ ನಡೆಸಿದರು.ಯುವ ಕಾಂಗ್ರೆಸ್ ನಡೆಸಲು ಉದ್ಧೇಶಿಸಿದ `ಹಸ್ತಲಾಘವ’ ಕಾರ್ಯಕ್ರಮದ ಬದಲು `ಯುವ ಹಸ್ತಲಾಘವ’ ಹೆಸರಿನಲ್ಲಿ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿದರು.ಬ್ಲಾಕ್ ಮತ್ತು ಯುವ ಅಧ್ಯಕ್ಷರ ಸಹಿತ ಸಭೆಯಲ್ಲಿದ್ದವರು ಒಪ್ಪಿಗೆ ಸೂಚಿಸಿದರು.ಅದೇರೀತಿ ಕಾರ್ಯಕ್ರಮ ನಡೆಸಲು ತೀರ್ಮಾನಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಲಾಯಿತು.

ವ್ಯಾಪ್ತಿ ಮೀರಿದ್ದ ಕಾರ್ಯಕ್ರಮ ರದ್ದತಿಗೆ ನೊಟೀಸ್ ನೀಡಲಾಗಿತ್ತು:ಎಂ.ಬಿ.: ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈಯವರು ಮಾತನಾಡಿ ಪಕ್ಷದ ಹಿತದೃಷ್ಟಿಯಿಂದ ಯುವ ಕಾಂಗ್ರೆಸ್ ಕಾರ್ಯಕ್ರಮ ನಡೆಸಲು ಯಾವುದೇ ಅಭ್ಯಂತರವಿಲ್ಲ. ಆದರೆ ಯುವಕಾಂಗ್ರೆಸಿಗರು ತಮ್ಮ ವ್ಯಾಪ್ತಿಯನ್ನು ಮೀರಿ ಕಾರ್ಯಕ್ರಮ ಮಾಡಲು ಹೊರಟದ್ದಕ್ಕೆ ಅಂತಹ ಕಾರ್ಯಕ್ರಮ ರದ್ದು ಪಡಿಸುವಂತೆ ನೋಟೀಸ್ ನೀಡಲಾಗಿತ್ತು.ಯುವ ಕಾಂಗ್ರೆಸಿಗರು ಮಾಹಿತಿ ಕೊರತೆಯಿಂದಲೋ ಅಥವಾ ತಪ್ಪು ಮಾಹಿತಿಯಿಂದಲೋ ಅಸಮಾಧಾನಗೊಂಡಿರಬಹುದು.ಪಕ್ಷದ ಹಿತದೃಷ್ಟಿಯಿಂದ ಯುವಕಾಂಗ್ರೆಸ್ ವ್ಯಾಪ್ತಿಯಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಿದ್ದರೂ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ಜಿಲ್ಲಾಧ್ಯಕ್ಷರ ಸೂಚನೆಯಂತೆ ಕಾರ್ಯಕ್ರಮ-ಶ್ರೀಪ್ರಸಾದ್: ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮತ್ತು ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಗೆದ್ದುಬರಬೇಕೆಂಬ ಹಿತದೃಷ್ಟಿಯಿಂದ ನಾವು ಹಸ್ತಲಾಘವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು.ಇದೀಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಮೇರೆಗೆ ನಾವು ಯುವ ಹಸ್ತಲಾಘವ ಕಾರ್ಯಕ್ರಮವನ್ನಾಗಿ ಪರಿವರ್ತಿಸಿ ನಿಗದಿತ ದಿನಾಂಕದಂದು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹೇಳಿದರು.ಮಾಜಿ ಸಚಿವ ಅಭಯಚಂದ್ರ ಜೈನ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here