ಸಾಲೆತ್ತೂರಿನಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ಮಧ್ಯೆ ನಡೆದ ಪರಸ್ಪರ ಹಲ್ಲೆ ಪ್ರಕರಣ: ಇತ್ತಂಡಗಳ 19ಮಂದಿ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲು

0

ವಿಟ್ಲ: ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಅಗರಿಯಲ್ಲಿ ನಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರ ತಂಡಗಳ ನಡುವಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕರಿಂಬಿನಾಡಿ ನಿವಾಸಿ ಆನಂದ ಬೆಳ್ಚಾಡ ರವರ ಪುತ್ರ ಚಂದ್ರಹಾಸ(27 ವ.)ರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪ್ರಶಾಂತ್ , ತೇಜಸ್ , ಗೀರಿಶ, ಗಣೇಶ್ , ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್‌, ಶಶಿಕುಮಾರ್ ಸಹಿತ ಇತರ ಇರ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕು ಇಡ್ಯ ಗ್ರಾಮದ ಸುರತ್ಕಲ್ ಕೃಷ್ಣಾಪುರ ನಿವಾಸಿ ಕೃಷ್ಣ ಭಂಡಾರಿ ರವರ ಪುತ್ರ ಪ್ರಶಾಂತ್ ಅಲಿಯಾಸ್ ಪಚ್ಚು(30 ವ.) ರವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಂದ್ರಹಾಸ, ನಾಗೇಶ್, ದೇವದಾಸ ಸಹಿತ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

ಘಟನೆ ಜೂ.19ರಂದು ಸಾಯಂಕಾಲ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಗ್ರಾಮದ ಅಗರಿ ಎಂಬಲ್ಲಿ ನಡೆದಿತ್ತು. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ತೆರಳಿ ಮಾಹಿತಿ ಸಂಗ್ರಹಿಸಿ ಸಾಲೆತ್ತೂರು ಭಾಗದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿತ್ತು.

ಚಂದ್ರಹಾಸರವರು ನೀಡಿದ ದೂರಿನಲ್ಲೇನಿದೆ…?

ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕನಾಗಿರುವ ನಾನು ಜೂ.19ರಂದು ಸಾಯಂಕಾಲ 5.30 ಗಂಟೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಅಗರಿ‌ ಎಂಬಲ್ಲಿದ್ದ ವೇಳೆ ಅಲ್ಲಿಗೆ ಬಂದ ಪ್ರಶಾಂತ, ತೇಜಸ್, ಗೀರಿಶ ,ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್‌, ಶಶಿಕುಮಾರ ಸಹಿತ ಇಬ್ಬರಿದ್ದ ತಂಡ ನೀನು ಸಂಘಟನೆಯಲ್ಲಿ ಬಾರಿ ಮೆರೆಯುತ್ತಿಯಾ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕೈಯ್ಯಲ್ಲಿದ್ದ ತಲವಾರಿನಿಂದ ನನ್ನ ಮೇಲೆ ದಾಳಿ ನಡೆಸಿದೆ. ಈ ವೇಳೆ ಸ್ನೇಹಿತ ನಾಗೇಶನ ಮನೆಯವರು ಬೊಬ್ಬೆ ಹೊಡೆದು ಪೊಲೀಸರಿಗೆ ಪೋನ್‌ ಮಾಡಿದಾಗ ತಂಡ ನನಗೆ ಜೀವಬೆದರಿಕೆ ಒಡ್ಡಿ ಕಾರು ಹಾಗೂ ದ್ವಿಚಕ್ರವಾಹನದಲ್ಲಿ ಪರಾರಿಯಾಗಿದ್ದಾರೆ. ಘಟನೆಯಿಂದ ಗಾಯಗೊಂಡ ನನ್ನನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕರಾಗಿ ಜವಾಬ್ದಾರಿಯನ್ನು ಹೊಂದಿರುವ ನನ್ನ ಏಳಿಗೆಯನ್ನು ಸಹಿಸದ ತಂಡ ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸದ್ದಾರೆ.

ಪ್ರಶಾಂತ ಅಲಿಯಾಸ್ ಪಚ್ಚು ರವರು ನೀಡಿದ ದೂರಿನಲ್ಲೇನಿದೆ…?

ನಾನು ಜೂ.19ರಂದು ಸಾಯಂಕಾಲ 5.30ರ ಸುಮಾರಿಗೆ ನಮ್ಮ ಹುಡುಗರ ಮದ್ಯೆ ಇದ್ದ ವೈಮನಸ್ಸನ್ನು ಮಾತುಕತೆ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಅಗರಿ ಎಂಬಲ್ಲಿರುವ ನಾಗೇಶ್‌ರವರ ಮನೆಯ ಬಳಿ ತೆರಳಿ ನಾಗೇಶ್‌, ಚಂದ್ರಹಾಸ ಹಾಗೂ ದೇವದಾಸರವರೊಂದಿಗೆ ಮಾತನಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು ಚಂದ್ರಹಾಸ, ನಾಗೇಶ್, ದೇವದಾಸ ಸಹಿತ ಮೂವರಿದ್ದ ತಂಡ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿದು ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಗಂಭೀರ ಗಾಯಗೊಂಡಿರುವ ನನ್ನನ್ನು ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ‌ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನನ್ನ ಮೇಲಿನ ದ್ವೇಷದಿಂದ ತಂಡ ಈ ಕೃತ್ಯ ಎಸಗಿದೆ ಎಂದು ಪ್ರಶಾಂತ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇತ್ತಂಡಗಳವರು ನೀಡಿದ ದೂರಿನಂತೆ ೧೯ಮಂದಿ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ‌.

LEAVE A REPLY

Please enter your comment!
Please enter your name here