ಜು.1ರಿಂದ ರಾಜ್ಯವ್ಯಾಪಿ ನೇರ ಪಾವತಿ ಪೌರಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರ

0

ಪುತ್ತೂರು:ಪೌರ ಕಾರ್ಮಿಕರಿಗೆ ಗುತ್ತಿಗೆ ಪದ್ಧತಿಯ ಬದಲು ನೇರ ವೇತನ ಪಾವತಿ ಮತ್ತು ಪೌರ ಕಾರ್ಮಿಕರ ನೇಮಕಾತಿಗೆ ಆಗ್ರಹಿಸಿ ಜು.1ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘ ಕರೆ ನೀಡಿದ್ದು ಪುತ್ತೂರು ನಗರಸಭೆ ನೇರ ಪಾವತಿ ಪೌರ ಕಾರ್ಮಿಕರು ಬೆಂಬಲ ಘೋಷಿಸಿದ್ದಾರೆ.ಮುಷ್ಕರಕ್ಕೆ ತಾವು ಬೆಂಬಲ ನೀಡುವ ಕುರಿತು ಜೂ.23ರಂದು ಬೆಳಗ್ಗೆ ನಗರಸಭೆ ಪೌರ ಕಾರ್ಮಿಕರು ಸಭೆ ನಡೆಸಿ, ಸಂಜೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಹಾಗೂ ಪೌರಾಯುಕ್ತ ಮಧು ಎಸ್.ಮನೋಹರ್ ಅವರಿಗೆ ಮಾಹಿತಿ ನೀಡಿದ್ದಾರೆ.

 

ಬೆಳಿಗ್ಗೆ ಸ್ವಚ್ಛತಾ ಕೆಲಸಕ್ಕೆ ತೆರಳುವ ಮೊದಲು ನಗರಸಭೆ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರ ಸಭೆ ನಡೆಯಿತು.ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಕರ್ನಾಟಕದ ಎಲ್ಲಾ 314 ನಗರ ಸ್ಥಳೀಯ ಸಂಸ್ಥೆಗಳ ಕಸ ಸಾಗಿಸುವ ವಾಹನ ಚಾಲಕರು, ವಾಟರ್‌ಮೆನ್, ಡಾಟ ಆಪರೇಟರ್‌ಗಳು, ಯುಜಿಡಿ ಕಾರ್ಮಿಕರು, ತ್ಯಾಜ್ಯ ಸಹಾಯಕರನ್ನೂ ಪೌರ ಕಾರ್ಮಿಕರ ಮಾದರಿಯಲ್ಲಿ, ಗುತ್ತಿಗೆ ಪದ್ಧತಿ ಬದಲು ನೇರ ವೇತನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಮತ್ತು ಪೌರ ಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಜು.1ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.ಪುತ್ತೂರು ನಗರ ಸಭೆಯಲ್ಲಿರುವ ನೇರ ಪಾವತಿ ಮತ್ತು ಗುತ್ತಿಗೆ ಆಧಾರದಲ್ಲಿರುವ ಪೌರ ಕಾರ್ಮಿಕರು ಬೆಂಬಲ ನೀಡುವ ಕುರಿತು ಸಭೆಯಲ್ಲಿ ತಿಳಿಸಿದ್ದಾರೆ.ಪೌರ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಐತ್ತಪ್ಪ, ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ಅಮಿತ್ ಸೇರಿದಂತೆ ಕಾರ್ಮಿಕರು ಉಪಸ್ಥಿತರಿದ್ದರು.

ಪುತ್ತೂರು ನಗರಸಭೆ ನೇರ ಪಾವತಿ ಪೌರಕಾರ್ಮಿಕರ ಬೆಂಬಲ

ನಗರಸಭೆ ಅಧ್ಯಕ್ಷರಿಗೆ, ಪೌರಾಯುಕ್ತರಿಗೆ ಮಾಹಿತಿ

ಜು.೧ರಿಂದ ನಡೆಯಲಿರುವ ಪೌರ ಕಾರ್ಮಿಕರ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ನಗರಸಭೆಯ ಪೌರಕಾರ್ಮಿಕರು ಪಾಲ್ಗೊಳ್ಳುತ್ತಿರುವುದರಿಂದ ಪುತ್ತೂರು ಪೇಟೆಯಲ್ಲಿ ಸ್ವಚ್ಛತೆಗೆ ಉಂಟಾಗುವ ಸಮಸ್ಯೆಯ ಕುರಿತು ಪೌರ ಕಾರ್ಮಿಕರು ಸಂಜೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮತ್ತು ಪೌರಾಯುಕ್ತ ಮಧು ಎಸ್ ಮನೋಹರ್ ಅವರಿಗೆ ಮಾಹಿತಿ ನೀಡಿದ್ದಾರೆ.ತಮ್ಮ ಮುಷ್ಕರಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬೆಂಬಲ ನೀಡುವಂತೆ ಕೋರಿದ್ದಾರೆ.

ಮುಷ್ಕರದ ಮೊದಲು ಸರಕಾರ ಪರಿಹಾರ ಕ್ರಮ ಕೈಗೊಳ್ಳುವ ಸಾಧ್ಯತೆ

ಪೌರ ಕಾರ್ಮಿಕರ ಬೇಡಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ತೀರ್ಮಾನ ಕೈ ಗೊಳ್ಳಬೇಕಾಗಿದೆ. ಆದರೆ ಅವರ ಬೇಡಿಕೆಗೆ ಸಂಬಂಧಿಸಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ.ಅವರ ಮುಷ್ಕರ ಜು.1ರಿಂದ ಆರಂಭ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.ಅದಕ್ಕೂ ಮೊದಲು ರಾಜ್ಯ ಸರಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.ಇದರ ಜೊತೆಗೆ ನಾವು ಸ್ವಚ್ಛತೆಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಕುರಿತು ಚಿಂತನೆ ನಡೆಸುತ್ತಿದ್ದೇವೆ.
                                                                                                                                   

                                                                                                                                       -ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ

LEAVE A REPLY

Please enter your comment!
Please enter your name here