ರೈತ ಉತ್ಪಾದಕ ಸಂಸ್ಥೆಗೆ ಅಂಗಡಿಕೋಣೆ ನೀಡುವ ವಿಚಾರ-ಚರ್ಚೆ

0
  • ನಿರ್ಣಯಕ್ಕೆ 8ಮಂದಿ ಸದಸ್ಯರ ಆಕ್ಷೇಪ-ನಿರ್ಣಯ

ಪುತ್ತೂರು: ರೈತ ಉತ್ಪಾದಕ ಸಂಸ್ಥೆಯೊಂದಕ್ಕೆ ಗ್ರಾಮ ಪಂಚಾಯತ್ ವಾಣಿಜ್ಯ ಕಟ್ಟಡದಲ್ಲಿರುವ ಅಂಗಡಿ ಕೋಣೆಯನ್ನು ಬಾಡಿಗೆಗೆ ನೀಡುವ ವಿಚಾರದಲ್ಲಿ ಚರ್ಚೆ ನಡೆದು ಕಳೆದ ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯಕ್ಕೆ ಉಪಾಧ್ಯಕ್ಷೆ ಸೇರಿ ಒಟ್ಟು 8 ಮಂದಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಪುತ್ತೂರ ಮುತ್ತು ರೈತ ಉತ್ಪಾದಕ ಸಂಸ್ಥೆಯವರು ಗ್ರಾಪಂ ಕಟ್ಟಡದ ಅಂಗಡಿ ಕೋಣೆಯೊಂದನ್ನು ಬಾಡಿಗೆಗೆ ಕೇಳಿದ್ದು ಈ ವಿಚಾರದಲ್ಲಿ ಹಿಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ರೂ. 2 ಸಾವಿರ ಬಾಡಿಗೆ ಮತ್ತು 10ಸಾವಿರ ಮುಂಗಡ ಪಾವತಿಯೊಂದಿಗೆ ಅಂಗಡಿ ಕೋಣೆಯನ್ನು ಬಾಡಿಗೆಗೆ ನೀಡುವುದು ಎಂದು ನಿರ್ಣಯಿಸಲಾಗಿತ್ತು. ಈ ವಿಚಾರವಾಗಿ ಅಂಗಡಿ ಕೋಣೆಯನ್ನು ಏಲಂ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಸಾರ್ವಜನಿಕ ಅರ್ಜಿಯೊಂದು ಬಂದಿದ್ದು ಈ ವಿಚಾರವಾಗಿ ಚರ್ಚೆ ನಡೆಯಿತು. ವಿಷಯ ಪ್ರಸ್ತಾಪಿಸಿದ ಅಶ್ರಫ್ ಉಜಿರೋಡಿಯವರು, ರೈತ ಉತ್ಪಾದಕ ಸಂಸ್ಥೆಗೆ ಅಂಗಡಿಕೋಣೆಯನ್ನು ಕೊಡುವ ವಿಚಾರದಲ್ಲಿ ನಾವು ಈ ಸಂಸ್ಥೆಯ ಬಗ್ಗೆ ಮಾಹಿತಿ ಕೊಡಬೇಕು ಎಂದು ಕೇಳಿದ್ದೆವು ಆದರೆ ಮಾಹಿತಿ ಕೊಟ್ಟಿಲ್ಲ , ಇದೊಂದು ಸ್ಥಳೀಯ ವ್ಯಕ್ತಿಗಳು ನಡೆಸುವ ಸಂಸ್ಥೆ ಎಂದು ತಿಳಿದುಬಂದಿದ್ದು ಇದಕ್ಕೆ ಪಂಚಾಯತ್ ಕೋಣೆಯನ್ನು ಕಡಿಮೆ ಬಾಡಿಗೆಗೆ ಕೊಡುವುದು ಸರಿಯಲ್ಲ, ಏಕೆಂದರೆ ಇದೇ ಅಂಗಡಿ ಕೋಣೆಯ ಪಕ್ಕದ ಕೋಣೆಗೆ ೧೦ ಸಾವಿರದಷ್ಟು ಬಾಡಿಗೆ ಪಾವತಿಸುತ್ತಿದ್ದು ಈ ಸಂಸ್ಥೆಗೆ 2ಸಾವಿರ ರೂ.ಗೆ ಕೋಣೆಯನ್ನು ಕೊಡುವುದು ಸರಿಯಲ್ಲ ಎಂದರು. ಇದಕ್ಕೆ ವಿನೋದ್ ಶೆಟ್ಟಿ, ಸಿರಾಜುದ್ದೀನ್, ಶೀನಪ್ಪ ನಾಯ್ಕ, ಚಿತ್ರಾ ಬಿ.ಸಿ ಧ್ವನಿಗೂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹೇಶ್ ರೈ ಕೇರಿಯವರು, ರೈತ ಉತ್ಪಾದಕ ಸಂಸ್ಥೆ ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಇದು ರೈತಪರ ಸಂಸ್ಥೆಯಾಗಿದೆ. ಹಿಂದಿನ ಸಾಮಾನ್ಯ ಸಭೆಯಲ್ಲಿ ಸಂಸ್ಥೆಗೆ ಅಂಗಡಿ ಕೋಣೆ ನೀಡುವುದು ಎಂದು ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ನಿರ್ಣಯ ಮಾಡಲಾಗಿದೆ. ಈಗ ಆಕ್ಷೇಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.ಇದಕ್ಕೆ ಸಿರಾಜುದ್ದೀನ್‌ರವರು, ರೈತ ಉತ್ಪಾದಕ ಸಂಸ್ಥೆಯ ಬಗ್ಗೆ ಮಾಹಿತಿ ಕೊಡಬೇಕು ಎಂದು ಕೇಳಿದ್ದೆವು ಆದರೆ ಮಾಹಿತಿ ಕೊಟ್ಟಿಲ್ಲ, ನಮಗೆ ಸಂಸ್ಥೆಯ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ, ಹಿಂದಿನ ಸಾಮಾನ್ಯ ಸಭೆಯಲ್ಲಿ ನಮಗೆ ತಪ್ಪು ಮಾಹಿತಿ ಕೊಡಲಾಗಿದೆ. ಈಗ ಮಾಹಿತಿ ಪಡೆದುಕೊಂಡಿದ್ದೇವೆ, ಇದು ಸ್ಥಳೀಯ ವ್ಯಕ್ತಿಗಳ ನಡೆಸುವ ಸಂಸ್ಥೆ ಇದಕ್ಕೆ ಕಡಿಮೆ ಬಾಡಿಗೆಗೆ ಅಂಗಡಿಕೋಣೆಯನ್ನು ಕೊಡುವುದು ಎಷ್ಟು ಸರಿ? 2 ಸಾವಿರಕ್ಕೆ ಬಾಡಿಗೆಗೆ ಕೊಡುವುದಾದರೆ ಕಟ್ಟಡದಲ್ಲಿರುವ ಎಲ್ಲರಿಗೂ ೨ ಸಾವಿರಕ್ಕೆ ಕೋಣೆ ಕೊಡಿ ಎಂದರು ಇದಕ್ಕೆ ಅಶ್ರಫ್ ಉಜಿರೋಡಿ ಧ್ವನಿಗೂಡಿಸಿದರು.

ನಿರ್ಣಯಕ್ಕೆ ಆಕ್ಷೇಪ
ರೈತ ಉತ್ಪಾದಕ ಸಂಸ್ಥೆಗೆ ಕೋಣೆ ಕೊಡುವುದಕ್ಕೆ ನಮ್ಮ ಆಕ್ಷೇಪ ಇಲ್ಲ ಆದರೆ ಪಂಚಾಯತ್ ಕಟ್ಟಡದಲ್ಲಿರುವ ಕೋಣೆಯನ್ನು ಕೊಡುವುದಕ್ಕೆ ವಿರೋಧ ಇದೆ ಏಕೆಂದರೆ ಈ ಕಟ್ಟಡದ ಇತರ ಕೋಣೆಗಳಿಗೆ ಹೆಚ್ಚು ಬಾಡಿಗೆ ಇದೆ. ಸಂಸ್ಥೆಗೆ ಕಡಿಮೆ ಬಾಡಿಗೆಗೆ ಕೋಣೆ ಕೊಟ್ಟರೆ ಇತರರಿಗೆ ವಂಚನೆ ಮಾಡಿದ ಹಾಗೆ ಆಗುತ್ತದೆ. ಆದ್ದರಿಂದ ಪಂಚಾಯತ್ ಕಛೇರಿಯಲ್ಲಿ ಬೇಕಾದರೆ ಕೋಣೆ ಕೊಡಿ ಇದಕ್ಕೆ ನಮ್ಮ ವಿರೋಧ ಇಲ್ಲ, ಹಿಂದಿನ ಸಾಮಾನ್ಯ ಸಭೆಯಲ್ಲಿ ಮಾಡಿದ ನಿರ್ಣಯವನ್ನು ರದ್ದು ಮಾಡಬೇಕು ಎಂದು ಅಶ್ರಫ್, ಸಿರಾಜುದ್ದೀನ್, ವಿನೋದ್ ಶೆಟ್ಟಿ, ಶೀನಪ್ಪ ನಾಯ್ಕ ಹೇಳಿದರು. ಇದಕ್ಕೆ ಉತ್ತರಿಸಿದ ಪಿಡಿಒ ಅವಿನಾಶ್ ಬಿ.ಆರ್‌ರವರು ನಿರ್ಣಯವನ್ನು ರದ್ದು ಮಾಡಲು ಸಾಧ್ಯವಿಲ್ಲ, ನಿರ್ಣಯ ಅಂಗೀಕಾರವಾಗಿಲ್ಲ ಈ ಬಗ್ಗೆ ಪರಿಶೀಲನೆ ಮಾಡುವ ಎಂದು ತಿಳಿಸಿದರು. ಹಿಂದಿನ ಸಾಮಾನ್ಯ ಸಭೆಯ ನಿರ್ಣಯಕ್ಕೆ ನಮ್ಮ ಆಕ್ಷೇಪ ಇದೆ ಎಂದು ನಿರ್ಣಯ ಮಾಡಿ ಎಂದು ಉಪಾಧ್ಯಕ್ಷೆ ಸುಂದರಿ, ಸದಸ್ಯರಾದ ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ಸಿರಾಜುದ್ದೀನ್, ವಿನೋದ್ ಶೆಟ್ಟಿ, ಚಿತ್ರಾ ಬಿ.ಸಿ, ಶಾರದಾ ಮತ್ತು ಲತೀಫ್ ಕೈ ಎತ್ತಿದರು. ಅದರಂತೆ ನಿರ್ಣಯಿಸಲಾಯಿತು.

ಉಜಿರೋಡಿ-ಕುಟ್ಟಿನೋಪಿನಡ್ಕ ಸಂಪರ್ಕ ರಸ್ತೆಯಾಗಲಿ
ಗ್ರಾಮದ ಉಜಿರೋಡಿಯಿಂದ ಕುಟ್ಟಿನೋಪಿನಡ್ಕಕ್ಕೆ ಸಂಪರ್ಕ ರಸ್ತೆಯ ಬಗ್ಗೆ ಸಾರ್ವಜನಿಕ ಅರ್ಜಿಯ ಮೇರೆಗೆ ಜಿಲ್ಲಾಧಿಕಾರಿಯವರು ಪಂಚಾಯತ್‌ಗೆ ಪರಿಶೀಲನೆಗಾಗಿ ಆದೇಶ ಮಾಡಿದ್ದು ಈ ಬಗ್ಗೆ ಚರ್ಚೆ ನಡೆಯಿತು. ಈ ಸಂಪರ್ಕ ರಸ್ತೆಯಾದರೆ ಈ ಭಾಗದ ಜನರಿಗೆ ಬಹಳಷ್ಟು ಪ್ರಯೋಜನವಿದೆ ಆದ್ದರಿಂದ ಈ ಬಗ್ಗೆ ಪಂಚಾಯತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ನೀಡಿದ ಅರ್ಜಿಯ ವಿಚಾರದಲ್ಲೂ ಚರ್ಚೆ ನಡೆಯಿತು. ಈ ವಿಚಾರದಲ್ಲಿ ಮಾತನಾಡಿದ ಅಶ್ರಫ್ ಉಜಿರೋಡಿ ಮತ್ತು ವಿನೋದ್ ಶೆಟ್ಟಿಯವರು, ಸಂಪರ್ಕ ರಸ್ತೆಯಾದರೆ ಬಹಳಷ್ಟು ಪ್ರಯೋಜನವಿದೆ. ಆದರೆ ಈ ರಸ್ತೆಯು ಖಾಸಗಿ ವ್ಯಕ್ತಿಗಳ ವರ್ಗ ಜಾಗದಲ್ಲಿ ಹಾದು ಹೋಗುವುದರಿಂದ ಜಾಗದ ಮಾಲಕರ ಜೊತೆ ಮಾತುಕತೆ ನಡೆಸಿ ಮನವೊಲಿಸಬೇಕಾಗಿದೆ ಎಂದರು. ಅಗಲ ಕಿರಿದಾಗಿರುವ ಈ ರಸ್ತೆಯು ಈಗಾಗಲೇ ಪಂಚಾಯತ್ ರಸ್ತೆ ಎಂದು ದಾಖಲೆಯಲ್ಲಿದೆ. ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ, ರಸ್ತೆಯನ್ನು ಅಗಲ ಮಾಡಬೇಕಾದರೆ ಜಾಗದ ಮಾಲಕರ ಜೊತೆಯಲ್ಲಿ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಅವಿನಾಶ್ ತಿಳಿಸಿದರು.

ಡೋರ್‌ನಂಬರ್ ಇಲ್ಲದೆ94ಸಿ ಅರ್ಜಿಗಳು ಪೆಡ್ಡಿಂಗ್
94ಸಿ ಗೆ ಈಗಾಗಲೇ ಗ್ರಾಮದ ಹಲವು ಮಂದಿ ಅರ್ಜಿ ನೀಡಿದ್ದು ಆದರೆ ಅರ್ಜಿದಾರರಿಗೆ ಡೋರ್ ನಂಬರ್ ಇಲ್ಲದೇ ಇರುವುದರಿಂದ ಅರ್ಜಿಗಳು ಪೆಡ್ಡಿಂಗ್ ಆಗಿವೆ. ಡೋರ್ ನಂಬರ್ ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಎನ್‌ಒಸಿ ನೀಡಬೇಕಾಗುತ್ತದೆ. ಆದರೆ ಅಧಿಕಾರಿಗಳು ಎನ್‌ಒಸಿ ನೀಡುತ್ತಿಲ್ಲ ಆದ್ದರಿಂದ ಡೋರ್‌ನಂಬರ್ ಇಲ್ಲದವರಿಗೆ ಸಂಬಂಧಪಟ್ಟ ಅಧಿಕಾರಿಗಳು ಎನ್‌ಒಸಿ ನೀಡಬೇಕು ಈ ಬಗ್ಗೆ ತಹಶೀಲ್ದಾರ್‌ಗೆ ಬರೆದುಕೊಳ್ಳುವ ಎಂದು ಅಶ್ರಫ್ ಉಜಿರೋಡಿ ತಿಳಿಸಿದರು.

ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಚಿತ್ರಾ ಬಿ.ಸಿ, ಶಾರದಾ, ನಳಿನಾಕ್ಷಿ, ರೇಖಾ, ವನಿತಾ ಕುಮಾರಿ, ಪ್ರದೀಪ್, ಲತೀಫ್ ಟೈಲರ್, ಮಹೇಶ್ ರೈ ಕೇರಿ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ಸರಕಾರದ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಾನಕಿ, ಕೇಶವ, ಗುಲಾಬಿ ಸಹಕರಿಸಿದ್ದರು.

` ಗ್ರಾಮದ ಸರ್ವತ್ತೋಮುಖ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಘನ ತ್ಯಾಜ್ಯ ಘಟಕದ ಕೆಲಸ ಪೂರ್ಣಗೊಂಡಿದ್ದು ಸದ್ಯದಲ್ಲೇ ಉದ್ಘಾಟನೆಯಾಗಲಿದೆ, ಸ್ವಚ್ಛವಾಹಿನಿ ವಾಹನ ಕೂಡ ಬಂದಿದೆ. ನೂತನ ಪಂಚಾಯತ್ ಕಟ್ಟಡದ ಕೆಲಸವು ಭರದಿಂದ ನಡೆಯುತ್ತಿದೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯ.‘- ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಗ್ರಾಪಂ

LEAVE A REPLY

Please enter your comment!
Please enter your name here