ಕಾವು: ಜು.3ರ ರಾತ್ರಿ ಬೀಸಿದ ಗಾಳಿಗೆ ಇಲ್ಲಿನ ಕುಡ್ಪುನಡ್ಕ ಸಮೀಪ ಭಾರೀ ಗಾತ್ರದ ಮರವೊಂದು ಮುರಿದು ರಸ್ತೆಗೆ ಬಿದ್ದ ಪರಿಣಾಮ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದೆ. ಜೊತೆಗೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳೂ ಮುರಿತಕ್ಕೊಳಗಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿ 9.20ರ ಸುಮಾರಿಗೆ ಈ ಘಟನೆ ನಡೆದಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವು ಕುಡ್ಪುನಡ್ಕದಲ್ಲಿ ರಸ್ತೆ ಬದಿಯ ಮರ ಗಾಳಿಗೆ ಮುರಿದು ಬಿದ್ದಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರು ಸಾರ್ವಜನಿಕರ ಸಹಕಾರದೊಂದಿಗೆ ಮರ ತೆರವು, ವಿದ್ಯುತ್ ಕಂಬಗಳ ಮರು ಜೋಡಣೆ ಕಾರ್ಯ ಮಾಡುತ್ತಿರುವುದಾಗಿ ವರದಿಯಾಗಿದೆ. ರಸ್ತೆ ಬದಿಯಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕಾರ್ಯವನ್ನು ಇಲಾಖೆಯವರು ಮಾಡಬೇಕು ಎಂದು ನಾಗರಿಕರಿಂದ ಆಗ್ರಹ ವ್ಯಕ್ತವಾಗಿದೆ.