ಸುಳ್ಳು ಮಾಹಿತಿ ನೀಡಿ ಉದ್ಯೋಗ ಗಳಿಸಿ ಸರಕಾರಿ ಸಂಬಳ ಪಡೆದು ವಂಚನೆ ಆರೋಪ-ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ. ಸಂಧ್ಯಾ ವಿರುದ್ಧ ಎ.ಸಿ.ಬಿ.ಗೆ ದೂರು-ತನಿಖೆ ಆರಂಭ

0

ಪುತ್ತೂರು: ಸುಳ್ಳು ಮಾಹಿತಿ ನೀಡಿ ಉದ್ಯೋಗ ಗಳಿಸಿ ಸರಕಾರಿ ಸಂಬಳ ಪಡೆಯುತ್ತಿರುವ ಆರೋಪದಡಿ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆರವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳದಲ್ಲಿ ದೂರು ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ.

 


ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಮತ್ತು ಜಗನ್ನಾಥ ಶೆಟ್ಟಿ ನಡುಮನೆರವರು ಭ್ರಷ್ಟಾಚಾರ ನಿಗ್ರಹದಳದ ಎಸ್.ಪಿ.ಗೆ ಸಂಧ್ಯಾ ವಿರುದ್ಧ ಪ್ರತ್ಯೇಕ ದೂರು ನೀಡಿದ್ದರು. ದೂರು ಸ್ವೀಕರಿಸಿರುವ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ದ.ಕ ಜಿಲ್ಲೆ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಅಧೀನದಲ್ಲಿರುವ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ಹುದ್ದೆಯ ಆಯ್ಕೆಯಲ್ಲಿ ಮಾನದಂಡಗಳ ಉಲ್ಲಂಘನೆಯಾಗಿರುತ್ತದೆ. ಸರಕಾರದ ಸುತ್ತೋಲೆಯಂತೆ ದ್ವಿತೀಯ ಪಿಯುಸಿ ಪಾಸಾಗಿರುವ, ಸಂಘದ ಸದಸ್ಯರಾಗಿರುವ, ಅಂಗವಿಕಲ/ವಿಧವೆ/ಪ.ಜಾ/ಪ.ಪಂಗಡದವರಿಗೆ ಆದ್ಯತೆ ನೀಡಬೇಕೆಂದಿದೆ. ಸದರಿ ಹುದ್ದೆಗೆ ಎಸ್.ಎಸ್.ಎಲ್.ಸಿ‌ ವಿದ್ಯಾರ್ಹತೆಯಿರುವ ಯಾವುದೇ ಅರ್ಹತೆಗಳಿಲ್ಲದ ಬೆಳ್ಳಿಪ್ಪಾಡಿ ಗ್ರಾಮದ ಕೈಲಾಜೆ ನಿವಾಸಿಯಾಗಿರುವ ಸಾಮಾನ್ಯ ವರ್ಗದ ಮಹಿಳೆ ಸಂಧ್ಯಾ ರಾಮಚಂದ್ರ ಗೌಡರವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದಿನಾಂಕ ೨೨-೯-೨೦೨೧ರಂದು ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಂತರ ದಿನಾಂಕ ೨೩-೩-೨೦೨೨ರಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅವರು ಅದೇ ದಿನ ಅಸಿಂಧು ಆದೇಶ ಹೊರಡಿಸಿರುತ್ತಾರೆ. ನಂತರ ಮುಖ್ಯ ಪುಸ್ತಕ ಬರಹಗಾರರನ್ನು ವಜಾಗೊಳಿಸಿ ತಾಲೂಕು ಪಂಚಾಯತ್ ಇ.ಓ.ರವರು ಆದೇಶ ಮಾಡಿದರೂ ಲೆಕ್ಕಿಸದೆ ಮುಖ್ಯ ಪುಸ್ತಕ ಬರಹಗಾರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳ ಬೆಂಬಲದಿಂದ ಸರಕಾರಿ ಸಂಬಳವನ್ನು ಪಡೆಯುತ್ತಿದ್ದಾರೆ.

ಸದರಿ ಎಮ್.ಬಿ.ಕೆ ರವರು ಈ ಹಿಂದಿನ ಗ್ರಾಮ ಪಂಚಾಯತ್ ಅವಧಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುತ್ತಾರೆ. ಆ ಸಮಯದಲ್ಲಿ ನಡೆದ ಕಾಂಪೋಸ್ಟ್ ಪೈಪ್ ಹಗರಣದ ಮುಖ್ಯ ಆರೋಪಿಯಾಗಿರುತ್ತಾರೆ. ಆ ಮೊಕದ್ದಮೆ ಇನ್ನೂ ಇತ್ಯರ್ಥವಾಗಿರುವುದಿಲ್ಲ. ಸದರಿ ಒಕ್ಕೂಟಕ್ಕೆ ಸರಕಾರದಿಂದ ಕೊಟ್ಟ ಮೊತ್ತದ ಸವಲತ್ತುಗಳು ಬರಲಿದ್ದು ಅವ್ಯವಹಾರ ನಡೆಯುವ ಸಾಧ್ಯತೆ ಇದೆ.

ಆದ್ದರಿಂದ ತಾವುಗಳು ಪರಿಶೀಲಿಸಿ ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಪುತ್ತೂರು ತಾಲೂಕು ಪಂಚಾಯತ್ ಇ.ಓ. ಮತ್ತು ಜಿಲ್ಲಾ ಪಂಚಾಯತ್ ಸಿ.ಇ. ಓ. ಮತ್ತು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಹುದ್ದೆ ಪಡೆದುಕೊಂಡು ಸಂಬಳಗಿಟ್ಟಿಸುತ್ತಿರುವ ಸಂಧ್ಯಾರವರನ್ನು ಬಂಧಿಸಿ ಈವರೆಗೆ ಪಡೆದುಕೊಂಡ ಸರಕಾರಿ ಸಂಬಳವನ್ನು ವಸೂಲಿ ಮಾಡಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು ಎಂದು ದೂರಿನಲ್ಲಿ ಜಗನ್ನಾಥ ಶೆಟ್ಟಿ ಮತ್ತು ಜಯಪ್ರಕಾಶ್ ಬದಿನಾರು ತಿಳಿಸಿದ್ದರು. ಇದೀಗ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

 

LEAVE A REPLY

Please enter your comment!
Please enter your name here