ವಿಶೇಷ ವರದಿ: ಪ್ರವೀಣ್ ಚೆನ್ನಾವರ
ಸವಣೂರು : ಪಶುಸಂಗೋಪನೆ ಇಲಾಖೆಯ ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ಮೊಟ್ಟೆ ಕೋಳಿಗಳಾದ ಸ್ವರ್ಣಧಾರ ಮತ್ತು ಗಿರಿರಾಜವನ್ನು ಸರಕಾರದ ವತಿಯಿಂದ ರೈತರಿಗೆ ವಿತರಣೆ ಮಾಡಲಾಗುತ್ತಿತ್ತು.ಇದೀಗ ರೈತರ ಬೇಡಿಕೆಯಂತೆ ಪಶುಸಂಗೋಪನಾ ಇಲಾಖೆ ಆಸಿಲ್ ಕೋಳಿಗಳನ್ನು ವಿತರಿಸಲು ಮುಂದಾಗಿದೆ.
ಇದಕ್ಕಾಗಿ ಕಡಬ ಸಮೀಪದ ಕೊಯಿಲ ಜಾನುವಾರು ಸಂವರ್ಧನಾ ತರಬೇತಿ ಕೇಂದ್ರದ ಕುಕ್ಕುಟ ವಿಸ್ತರಣಾ ಕೋಳಿ ಮರಿ ಉತ್ಪಾದನೆ ಘಟಕದಿಂದಲೂ ಈ ಬಾರಿ ಆಸಿಲ್ ಕೋಳಿ ಮರಿಗಳ ವಿತರಣೆಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಆಂಧ್ರಪ್ರದೇಶ ಮೂಲದ ನಾಟಿ ಕೋಳಿ ತಳಿಯಾದ ಆಸಿಲ್ ಕೋಳಿಗಳನ್ನು ಬಡ ಕುಟುಂಬಗಳ ಮಹಿಳೆಯರಿಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದ್ದು, ಫಲಾನುಭವಿಗಳ ಪಟ್ಟಿಯೂ ಸಿದ್ಧವಾಗಿದೆ.
ಮರಿ ಉತ್ಪಾದನೆಗೆ ಬೆಂಗಳೂರು ಹೇಸರಘಟ್ಟದಲ್ಲಿ ಇರುವ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆಯಿಂದ ಒಂದು ದಿನ ವಯಸ್ಸಿನ 800 ಆಸಿಲ್ ಮರಿಗಳನ್ನು ತಂದು ಕೊಯಿಲ ಫಾರ್ಮ್‌ನಲ್ಲಿ ಪೇರೆಂಟ್ ಬರ್ಡ್(ಮರಿಮಾಡುವ ಸಲುವಾಗಿ ಸಾಕುವ ಕೋಳಿಗಳು) ಆಗಿ ಬೆಳೆಸಲಾಗುತ್ತಿದೆ. ಈ ಕೋಳಿ ಮರಿಗಳಿಗೆ ಈಗ 20 ವಾರ ಪೂರ್ಣಗೊಂಡಿದ್ದು, ಕೆಲವು ಮೊಟ್ಟೆ ಇಡಲು ಆರಂಭಿಸಿವೆ.
ಫೈಟರ್ ಕೋಳಿ ಆಸಿಲ್: ಕೋಳಿಗಳ ಆಹಾರದ ಬೆಲೆ ವಿಪರೀತವಾಗಿ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕೋವಿಡ್ ಬಳಿಕ ಸ್ವರ್ಣಧಾರಾ,ಗಿರಿರಾಜ ಕೋಳಿಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದ್ದು,ಜತೆಗೆ ಕೋಳಿ ಅಂಕಗಳಲ್ಲಿ ಹೆಚ್ಚು ಬೇಡಿಕೆಯಿರುವ ಅಂಕದ ಕೋಳಿಗಳನ್ನು ಸಾಕುತ್ತಿರುವವರಷ್ಟೇ ಒಳ್ಳೆಯ ಆದಾಯ ಪಡೆಯುತ್ತಿದ್ದಾರೆ. ಕರಾವಳಿಯ ಜಿಲ್ಲೆಗಳಲ್ಲಿ -ಟರ್ ಕೋಳಿಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಹೇಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಸಂಸ್ಥೆ ಆಸಿಲ್ ಮರಿಗಳನ್ನು ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗುವಾಹಟಿ ಮುಂತಾದ ಕಡೆ ಕಳುಹಿಸುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ನೇರ ಪೂರೈಕೆ ವ್ಯವಸ್ಥೆ ಇರಲಿಲ್ಲ. ಅಗತ್ಯ ಇರುವವರು ಬೆಂಗಳೂರಿನಿಂದ ಸ್ವಂತ ವಾಹನ ವ್ಯವಸ್ಥೆಯಲ್ಲಿ ತರಿಸಿಕೊಳ್ಳಬೇಕಾಗಿತ್ತು. ಈ ಸಮಸ್ಯೆ ಈಗ ಬಗೆಹರಿಯುವ ನಿಟ್ಟಿನಲ್ಲಿ ವ್ಯವಸ್ಥೆಯಾಗುತ್ತಿದೆ.
ಆಸಿಲ್ ತಳಿಯ ಕಪ್ಪು ಬಣ್ಣದ ಕಲ ಮತ್ತು ಕಂದು ಬಣ್ಣದ ಪಿಲಾ ಜಾತಿಯ ಕೋಳಿಗಳು ಕೊಯಿಲ ಫಾರ್ಮ್‌ನಲ್ಲಿವೆ. ಸೆಪ್ಟೆಂಬರ್ ತಿಂಗಳಿಂದ ಮಾಸಿಕ ಸುಮಾರು 6 ಸಾವಿರ ಮರಿಗಳ ಉತ್ಪಾದನೆ ಸಾಧ್ಯವಾಗಬಹುದು. ಮುಂದಿನ ತಿಂಗಳಿಂದ ರೈತರಿಗೆ ಆಸಿಲ್ ಕೋಳಿ ಮರಿಗಳ ವಿತರಣೆ ಸಾಧ್ಯವಾಗಬಹುದು.
-ಡಾ.ಧರ್ಮಪಾಲ್ ಕರಂದ್ಲಾಜೆ, ಉಪ ನಿರ್ದೇಶಕರು
ಜಾನುವಾರು ಸಂವರ್ಧನಾ ತರಬೇತಿ ಕೇಂದ್ರ ಕೊಯಿಲ