ಶಕುಂತಲಾ ಶೆಟ್ಟಿ ಸೋಲಿನಿಂದ ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಸೋಲಾಗಿದೆ:ಖಾದರ್

0
  • ಪಡುಮಲೆಯಲ್ಲಿ ಗುಂಪುಗಾರಿಕೆ ಮಾಡಿದ್ದೇ ಬಿಜೆಪಿಯ ಸಾಧನೆಯಾಗಿದೆ
  • ಮೋದಿ ಆಗಮಿಸಿ ಉದ್ಘಾಟಿಸಲಿರುವ ಸಾವಿರ ಕೋಟಿ ಯೋಜನೆಯ ಬಗ್ಗೆ ಸಂಸದರು ಸ್ಪಷ್ಟನೆ ಕೊಡಲಿ
  • ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್

ಪುತ್ತೂರು: ‘ಪುತ್ತೂರಿನಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಕುಂತಲಾ ಶೆಟ್ಟಿಯವರ ಸೋಲಿನಿಂದ ಸಾಮಾನ್ಯ ಜನರಿಗೆ ದೊಡ್ಡ ಮಟ್ಟಿನ ಸೋಲು ಆಗಿದೆ.ಶಕುಂತಲಾ ಶೆಟ್ಟಿಯವರು ಕನಸು ಕಂಡು ಕೆಲಸ ಮಾಡಿದ್ದ ಅನೇಕ ಜನಪರ ಯೋಜನೆಗಳು ಮೂಲೆ ಸೇರಿದೆ.ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಯೋಜನೆಯಾದ ಮೆಡಿಕಲ್ ಕಾಲೇಜಿಗೆ ಗೊತ್ತು ಮಾಡಿದ್ದ ಜಾಗದಲ್ಲಿ ಸೀ ಫುಡ್ ಪಾಕ್೯ ಮಾಡಲು ಈಗಿನ ಶಾಸಕರು ಹೊರಟಿದ್ದರು,ಪುತ್ತೂರಿಗೆ ಅವಶ್ಯಕವಿರುವ ಎಸ್.ಪಿ ಆಫೀಸ್ ಪುತ್ತೂರಿಗೆ ವರ್ಗಾವಣೆ ಮಾಡುವಲ್ಲಿ ವಿಫಲವಾದ್ರು ಹೀಗೆ ಯಾವುದೇ ಜನೋಪಯೋಗಿ ಯೋಜನೆಗಳನ್ನು ತರುವಲ್ಲಿ ಶಾಸಕರು ವಿಫಲರಾಗಿದ್ದಾರೆ‌.ಶಕುಂತಲಾ ಶೆಟ್ಟಿ ಕಾಲದಲ್ಲಿ ಕೋಟಿ-ಚೆನ್ನಯ ಜನ್ಮಸ್ಥಳವಾದ ಪಡುಮಲೆ ಕ್ಷೇತ್ರಕ್ಕೆ 5 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗಿದೆ.ಆದರೆ ಅಲ್ಲಿ ಗುಂಪುಗಾರಿಕೆ ಮಾಡಿದ್ದಷ್ಟೇ ಬಿಜೆಪಿಯ ಸಾಧನೆಯಾಗಿದೆ.ಹೀಗೆ ಬಿಜೆಪಿ ಪರಸ್ಪರ ವೈಮನಸ್ಸುಗಳನ್ನು ಸೃಷ್ಠಿಸಿ ಜನಪರವಲ್ಲದ ಆಡಳಿತ ನೀಡುತ್ತಿದೆ ಎಂದು ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಹೇಳಿದರು.

ಅವರು ಆ.30ರಂದು ದರ್ಬೆಯ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ‘ರಾಜ್ಯ ಸರ್ಕಾರವು ಕರುಣೆ ಇಲ್ಲದ ಸರ್ಕಾರವಾಗಿದ್ದು ಜನಸಾಮಾನ್ಯರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ.ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಸರಿಯಾದ ಪರಿಹಾರ ನೀಡಿಲ್ಲ.ಶಾಲಾ ಕಾಲೇಜಿನ ಯೂನಿಫಾರಂ ಇನ್ನೂ ಪೂರೈಕೆಯಾಗಿಲ್ಲ,ನಿವೇಶನ ರಹಿತರಿಗೆ ಇನ್ನೂ ನಿವೇಶನಗಳು ದೊರಕಿಲ್ಲ ಒಟ್ಟಿನಲ್ಲಿ ಸಾಮಾನ್ಯ ಜನರು ತಮ್ಮ ಹಕ್ಕಿಗಾಗಿ ಪರದಾಡಬೇಕಾದ ಅನಿವಾರ್ಯತೆ ಸೃಷ್ಠಿಯಾಗಿರುವುದು ದುರಾದೃಷ್ಟ.ಈ ರೀತಿಯ ಜನಪರವಲ್ಲದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನರು ಕಾಯುತ್ತಿದ್ದಾರೆ’ಎಂದರು.

ಮೋದಿ ಆಗಮಿಸಿ ಉದ್ಘಾಟಿಸಲಿರುವ ಸಾವಿರ ಕೋಟಿ ಯೋಜನೆಯ ಬಗ್ಗೆ ಸಂಸದರು ಸ್ಪಷ್ಟನೆ ಕೊಡಲಿ
ದ.ಕ ಜಿಲ್ಲೆಗೆ ದೇಶದ ಪ್ರಧಾನಿ ಆಗಮಿಸುತ್ತಿರುವುದು ಸಂತಸದ ವಿಚಾರ ಆದರೆ ಪ್ರಧಾನಿ ಆಗಮನದ ಸಂಧರ್ಭದಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ ಎನ್.ಎಮ್.ಪಿ.ಟಿ ಒಳಗೆ ಯಾವ ಯೋಜನೆಯ ಉದ್ಘಾಟನೆ ಮಾಡುತ್ತಿರುವುದು ಎಂಬ ಸ್ಪಷ್ಟನೆಯನ್ನು ಸಂಸದರು ಕೊಟ್ಟರೆ ಉತ್ತಮ,ನನಗೆ ತಿಳಿದಿರುವ ಪ್ರಕಾರ ಪ್ರಧಾನಿಗಳು ಜಿ.ಎಸ್.ಡಬ್ಲ್ಯೂ ಮುಂತಾದ ಖಾಸಗಿ ಕಂಪೆನಿಗಳ ಪ್ರಮುಖ ಯೋಜನೆಗಳನ್ನು ತಮ್ಮ ಭೇಟಿಯ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.ಪ್ರಧಾನಿ ಖಾಸಗಿ ಕಂಪೆನಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ನಮ್ಮ ತಕಾರಾರು ಇಲ್ಲ.ಆದರೆ ಜಿಲ್ಲೆಯ ಅಭಿವೃದ್ದಿಗಾಗಿ ಇನ್ನಷ್ಟು ಯೋಜನೆಗಳನ್ನು ಘೋಷಿಸಲಿ ಹಾಗೂ ಸಂಸದರು ಕೇವಲ ಸಾವಿರ ಕೋಟಿ ಯೋಜನೆ ಎಂದು ಹೇಳುವ ಬದಲು ಜನರಿಗೆ ಸರಿಯಾದ ಅಂಕಿ-ಅಂಶಗಳನ್ನು ನೀಡಲಿ ಎಂದ ಖಾದರ್ ಈಗಾಗಲೇ ಬಿಜೆಪಿ ಕೆಲವು ವಿಚಾರದಲ್ಲಿ ಗೊಂದಲಕ್ಕೀಡು ಮಾಡಿದೆ ಅವುಗಳಿಗೆ ಪ್ರಧಾನಿ ಕಾರ್ಯಕ್ರಮದ ವೇದಿಕೆಯಲ್ಲೇ ಸ್ಪಷ್ಟನೆ ನೀಡುವ ಕೆಲಸ ಮಾಡಲಿ,ಕಸ್ತೂರಿ ರಂಗನ್ ವರದಿಯ ಬಗ್ಗೆ ದ.ಕ ಜಿಲ್ಲೆಯ ಜನ ಆತಂಕದಲ್ಲಿದ್ದಾರೆ ಮೋದಿ ಭೇಟಿಯ ವೇಳೆ ಈ ಬಗ್ಗೆ ಸ್ಪಷ್ಟ ನಿಲುವು ಘೋಷಣೆಯಾಗಲಿ,ಚುನಾವಣೆಗೆ ಮೊದಲು ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಬಗ್ಗೆ ಹೇಳುತ್ತಿದ್ದ ಬಿಜೆಪಿ ನಾಯಕರು ಈಗ ಬಾಯಿ ಮುಚ್ಚಿದ್ದಾರೆ ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ಈ ಬಗ್ಗೆ ಘೋಷಣೆಯಾಗಲಿ, ಟೋಲ್ ಗಳಿಂದ ಮುಕ್ತಿ ಸಿಗುವ ಬಗ್ಗೆ ಎಮ್.ಆರ್.ಪಿ.ಯಲ್,ಎನ್.ಎಮ್.ಪಿ.ಟಿ,ವಿಮಾನ ನಿಲ್ದಾಣ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಹಾಗೂ ವಿಶೇಷವಾಗಿ ದಕ್ಷಿಣ ಕನ್ನಡದವರಿಗೆ ಮೀಸಲಾತಿಯ ಬಗ್ಗೆ ಘೋಷಣೆಯಾಗಲಿ ಹೀಗೆ ಜನಸಾಮಾನ್ಯರಿಗೆ ಬೇಕಾದ ಯೋಜನೆಗಳು ಮೋದಿ ಭೇಟಿಯ ಸಂದರ್ಭದಲ್ಲಿ ಆಗಲಿ ಎಂದು ಯು.ಟಿ ಖಾದರ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ,ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಬಡಗನ್ನೂರು,ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ಕಾಂಗ್ರೆಸ್ ಮುಖಂಡರುಗಳಾದ ಶಕೂರ್ ಹಾಜಿ,ಚಂದ್ರಹಾಸ ಶೆಟ್ಟಿ, ರಜಾಕ್,ಎನ್.ಎಸ್.ಯು.ಐ ಪುತ್ತೂರು ಘಟಕದ ಅಧ್ಯಕ್ಷ ಬಾತೀಶ್ ಅಳಕೆಮಜಲು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here