ಮಂಗಳೂರು; ಸೆ.2ರಂದು ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ 8 ವಿಧಾನಸಭಾ ಕ್ಷೇತ್ರದಿಂದ ಸುಮಾರು 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 70 ಸಾವಿರ ಮಂದಿ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮದ ಸಮಯದಲ್ಲಿ ಕೊಂಚ ಬದಲಾವಣೆಯಾಗಿದೆ. ಈ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕಿಂತ (ಸುಮಾರು 2 ಗಂಟೆ) ಮುಂಚಿತವಾಗಿ ಪ್ರಧಾನಿ ಮಂಗಳೂರಿಗೆ ಆಗಮಿಸಲಿದ್ದಾರೆ. ಪರಿಷ್ಕೃತ ಕಾರ್ಯಕ್ರಮದ ಪ್ರಕಾರ ಪ್ರಧಾನಿ ಸೆ.2ರಂದು 1 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಎನ್‌ಎಂಪಿಎಯ ಕಾರ್ಯಕ್ರಮ ಹಾಗೂ ಬಂಗ್ರಕೂಳೂರು ಗೋಲ್ಡ್ ಪಿಂಚ್ ಮೈದಾನದಲ್ಲಿ ಸಭಾ ಕಾರ್ಯಕ್ರಮ ಮುಗಿಸಿ ಸಂಜೆ 3 ಗಂಟೆಗೆ ಮಂಗಳೂರಿನಿಂದ ನಿರ್ಗಮಿಸಲಿದ್ದಾರೆ. ಮೊದಲು ನಿಗದಿಯಾಗಿದ್ದ ಕಾರ್ಯಕ್ರಮದ ಪ್ರಕಾರ ಸೆ.2ರಂದು ಸಂಜೆ 3.15 ಗಂಟೆಗೆ ಪ್ರಧಾನಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ 5 ಗಂಟೆಗೆ ನಿರ್ಗಮನ ಎಂದಿತ್ತು ಎಂದು ಅವರು ತಿಳಿಸಿದ್ದಾರೆ. ಸಮಾರಂಭದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರ ದಿಂದ ಸುಮಾರು 2 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 70 ಸಾವಿರ ಮಂದಿ ವಿವಿಧ ಸರಕಾರಿ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. 1461 ಬಸ್, 200ಕ್ಕೂ ಅಧಿಕ ಟೆಂಪೋ ಟ್ರಾವೆಲ್ಲರ್‌ಗಳನ್ನು ಮುಂಗಡವಾಗಿ ಕಾದಿರಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಸೆ.2ರಂದು ಬೆಳಿಗ್ಗೆ 11.30ರ ಮೊದಲು ಮಂಗಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಹಾಜರಿರಬೇಕು ಎಂದು ಸುದರ್ಶನ್ ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸರಕಾರದ ಸಚಿವರಾದ ಸರ್ಬಾನಂದ ಸೋನಾವಾಲ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮತ್ತು ಶಾಸಕರು ಭಾಗವಹಿಸಲಿದ್ದಾರೆ ಎಂದು ಸುದರ್ಶನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ ಶೇಣವ, ರವಿಶಂಕರ್ ಮಿಜಾರ್, ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.
11:30ರೊಳಗಾಗಿ ಸಭಾ ಮೈದಾನ ತಲುಪಬೇಕು
ನರೇಂದ್ರ ಮೋದಿಯವರು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1 ಗಂಟೆಗೆ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್.ಎಂ.ಪಿ.ಎ.)ಕ್ಕೆ ಭೇಟಿ ನೀಡುವರು. ಅಲ್ಲಿಂದ ರಸ್ತೆ ಮಾರ್ಗವಾಗಿ ಸಭಾ ಕಾರ್ಯಕ್ರಮ ನಡೆಯುವ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸುವರು. ಜನರು ಪೂರ್ವಾಹ್ನ 11:30ರ ಒಳಗಾಗಿ ಸಭಾ ಮೈದಾನಕ್ಕೆ ತಲುಪಬೇಕಿದೆ. ಜಿಲ್ಲಾಡಳಿತದಿಂದ ಉಪಾಹಾರ ವ್ಯವಸ್ಥೆ ಇರಲಿದೆ. ಕಾರ್ಯಕ್ರಮ ಮುಗಿದ ಮೇಲೆ ಪಕ್ಷದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುವುದು. ವಾಹನಗಳಿಗೆ ಊಟದ ಪ್ಯಾಕೆಟ್ ತಲುಪಿಸಲು ಯೋಚಿಸಲಾಗಿದೆ ಎಂದು ಸುದರ್ಶನ ಮೂಡಬಿದ್ರೆ ತಿಳಿಸಿದ್ದಾರೆ. ಪ್ರಧಾನಿಯವರನ್ನು ಸ್ವಾಗತಿಸಲು ದಕ್ಷಿಣ ಕನ್ನಡ ಜಿಲ್ಲೆ ಸಜ್ಜುಗೊಂಡಿದೆ. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು ಮಾರ್ಗದರ್ಶನದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ ಎಂದವರು ತಿಳಿಸಿದ್ದಾರೆ.