ಸಿಬ್ಬಂದಿ ನೇಮಕಾತಿಗೆಂದು ಪರೀಕ್ಷೆ ನಡೆಸಿದ ಅಭ್ಯರ್ಥಿಗಳ ಆಯ್ಕೆ ಮಾಡದೆ ತಾತ್ಕಾಲಿಕ ಸಿಬ್ಬಂದಿಗಳನ್ನು ಖಾಯಂಗೊಳಿಸಿದ ವಿಚಾರದಲ್ಲಿ ಚರ್ಚೆ
ಹೊರ ಬಾಕಿ ಸಾಲದ ಬಗ್ಗೆಯೂ ಚರ್ಚೆ ವಸೂಲಾತಿಗೆ ಅಗತ್ಯ ಕ್ರಮಕೈಗೊಳ್ಳಲು ಆಗ್ರಹ
ಲಕ್ಕಿಡಿಪ್ ಬದಲು ಎಲ್ಲ ಸದಸ್ಯರಿಗೂ ಬಹುಮಾನ ನೀಡಿ
ಸದಸ್ಯರಿಗೆ ಶೇ.12.5 ಡಿವಿಡೆಂಡ್ ಘೋಷಣೆ
ಕಡಬ:ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿ ಪ್ರಕಟಣೆ ಹೊರಡಿಸಿದ ಬಳಿಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿದರೂ ಅವರಲ್ಲಿ ಯಾರನ್ನೂ ಆಯ್ಕೆ ಮಾಡದೆ ತಾತ್ಕಾಲಿಕ ನೆಲೆಯಲ್ಲಿದ್ದ ಸಿಬ್ಬಂದಿಗಳನ್ನೇ ಖಾಯಂಗೊಳಿಸಿರುವ ವಿಚಾರವನ್ನು ಕೆಲ ಸದಸ್ಯರು ಮಹಾಸಭೆಯಲ್ಲಿ ಪ್ರಶ್ನಿಸಿ ಈ ಬಗ್ಗೆ ಚರ್ಚೆ ನಡೆದ ಘಟನೆ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಡೆದಿದೆ.ಹೊರ ಬಾಕಿ ಸಾಲ ವಸೂಲಾತಿಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯು ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆಯವರ ಅಧ್ಯಕ್ಷತೆಯಲ್ಲಿ ಆ.೩೦ರಂದು ಕಡಬ ಅನುಗ್ರಹ ಸಭಾಭವನದಲ್ಲಿ ನಡೆಯಿತು.ಸಂಘಧ ಸದಸ್ಯರಾದ ಸಾಂತಪ್ಪ ಗೌಡ ಅವರು ಮಾತನಾಡಿ, ಈಗಾಗಲೇ ಸಿಬ್ಬಂದಿ ನೇಮಕಗೊಳಿಸುವುದಾಗಿ ಪ್ರಕಟಣೆ ನೀಡಿ ಸುಮಾರು ೮೦ರಷ್ಟು ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು, ಆ ಅಭ್ಯರ್ಥಿಗಳಲ್ಲಿ ಯಾರಾದರೂ ನೇಮಕವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷರು,ಸಂಘದಲ್ಲಿ ಈಗಾಗಲೇ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಆಯ್ಕೆಯಾಗಿದ್ದು ಅವರನ್ನು ಖಾಯಂಗೊಳಿಸಲಾಗಿದೆ ಎಂದು ಹೇಳಿದರು.ಸಂಘದಲ್ಲಿ ಇದ್ದ ಸಿಬ್ಬಂದಿಗಳನ್ನು ಖಾಯಂಗೊಳಿಸಲು ಈ ನಾಟಕ ಯಾಕೆ?ನೇರವಾಗಿ ಅವರನ್ನೇ ಖಾಯಂಗೊಳಿಸಬಹುದಿತ್ತಲ್ವ ಎಂದು ಇತರ ಕೆಲ ಸದಸ್ಯರು ಕೇಳಿದರು. ಅಧ್ಯಕ್ಷರು ಉತ್ತರಿಸಿ, ನಾವು ಇಲಾಖೆಯ ನಿಯಮದಂತೆ ಮಾಡಿದ್ದೇವೆ, ಖಾಯಂಗೊಳಿಸಲಾದ ಸಿಬ್ಬಂದಿಗಳಿಗೆ ಅರ್ಹತೆ ಇದೆ ಎಂದು ಹೇಳಿದರು.ಪರೀಕ್ಷೆ ಬರೆದ ಅಷ್ಟೂ ಅಭ್ಯರ್ಥಿಗಳಲ್ಲಿ ಯಾರೂ ಅರ್ಹರು ಇರಲಿಲ್ಲವೇ, ಹಾಗಾದರೆ ಸಂಘಕ್ಕೆ ಉದ್ಯೋಗಕ್ಕೆ ಸೇರಬೇಕಾದರೆ ಬ್ಯಾಂಕಿಂಗ್ ಸಂಬಂಧಪಟ್ಟ ವಿದ್ಯಾಭ್ಯಾಸ ಮಾಡುವ ಅಗತ್ಯವಿಲ್ಲ ಅಲ್ಲವೇ ಎಂದು ಕೆಲ ಸದಸ್ಯರು ಮರು ಪ್ರಶ್ನಿಸಿದರು.ಈ ವಿಚಾರ ಮೊದಲೇ ಗೊತ್ತಿದ್ದರೂ ಪರೀಕ್ಷೆ ಬರೆದ ಅಷ್ಟು ಅಭ್ಯರ್ಥಿಗಳಿಗೆ ವೃಥಾ ತೊಂದರೆ ನೀಡಲಾಗಿದೆ ಎಂಬ ಆರೋಪವೂ ಕೆಲವರಿಂದ ವ್ಯಕ್ತವಾಯಿತು.
ಸಿಬ್ಬಂದಿ ಭಡ್ತಿ ಯಾವ ಮಾನದಂಡದಲ್ಲಿ ನಡೆಯುತ್ತದೆ?:
ಸಹಕಾರಿ ಸಂಘದಲ್ಲಿ ಸಿಬ್ಬಂದಿ ನೇಮಕಾತಿಗಳು ಮತ್ತು ಭಡ್ತಿ ಯಾವ ಮಾನದಂಡದ ಮೇಲೆ ನಡೆಯುತ್ತದೆ ಎಂದು ಸದಸ್ಯರು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷರು,ಅರ್ಹತೆಯ ಆಧಾರದಲ್ಲಿ ಮತ್ತು ಸೇವಾ ಹಿರಿತನವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.ಸಂಘದಲ್ಲಿ ವಂಶಪಾರಂಪರ್ಯವಾಗಿ ಸಿಬ್ಬಂದಿಗಳು ನೇಮಕವಾಗಿರುವುದು ಕಂಡು ಬರುತ್ತಿದೆ, ತಂದೆಯಿಂದ ಮಕ್ಕಳಿಗೆ ಹುದ್ದೆ ಬಂದಿದೆ,ಮೊದಲು ತಾತ್ಕಾಲಿಕವಾಗಿ ಅವರನ್ನು ನೇಮಕಗೊಳಿಸಿ ಬಳಿಕ ಪರೀಕ್ಷೆಗೆ ಅವರನ್ನು ತಯಾರಿ ನಡೆಸಿ ಅವರನ್ನೇ ಖಾಯಂಗೊಳಿಸುವ ಪರಿಪಾಠ ನಡೆಯುತ್ತಿದೆ,ಹೀಗಾದರೆ ಇತರರಿಗೆ ಅವಕಾಶವೇ ಇಲ್ಲ ಎಂದು ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಕೊಣಾಜೆ ಶಾಖೆಯಲ್ಲಿ ಸಿಬ್ಬಂದಿಯೋರ್ವರಿಗೆ ಸೇವಾ ಹಿರಿತನ ಇದ್ದರೂ ಅವರನ್ನು ಪ್ರಭಾರ ಮ್ಯಾನೇಜರ್ ಹುದ್ದೆಗೆ ಭಡ್ತಿಗೊಳಿಸದೆ ಅವರಿಗಿಂತ ಕಿರಿಯರಿಗೆ ಆ ಹುದ್ದೆ ನೀಡಲಾಗಿತ್ತು, ಇದು ಸರಿಯೇ ಎಂದು ಸದಸ್ಯರೋರ್ವರು ಪ್ರಶ್ನಿಸಿದರು.ಅದಕ್ಕೆ ಉತ್ತರಿಸಿದ ಅಧ್ಯಕ್ಷರು, ಅಲ್ಲಿ ಆ ಸಿಬ್ಬಂದಿಗೆ ಹಿರಿತನ ಇದ್ದರೂ ಅರ್ಹತೆ ಇರದ ಕಾರಣ ಆ ರೀತಿ ಮಾಡಲಾಗಿದೆ ಎಂದರು,ಈ ವಿಚಾರದಲ್ಲಿ ಭಾರೀ ಚರ್ಚೆ ನಡೆದು, ಸೇವಾ ಹಿರಿತನ ಇರುವವರನ್ನೇ ಪ್ರಭಾರ ಮ್ಯಾನೇಜರ್ ಆಗಿ ಖಾಯಂಗೊಳಿಸಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು.
ಹೊರ ಬಾಕಿ ಸಾಲ-ಚರ್ಚೆ:
ಸದಸ್ಯರಾದ ಗಣೇಶ್ ಕೈಕುರೆ, ಬಾಲಕೃಷ್ಣ ಬಳ್ಳೇರಿ ಮೊದಲಾದವರು ಮಾತನಾಡಿ, ಹೊರಬಾಕಿ ಸಾಲ ಸುಮಾರು ೧೦ ಕೋಟಿಗೂ ಮಿಕ್ಕಿ ಇದೆ, ನೀವು ಸಾಲ ವಸೂಲಾತಿಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಸಾಲ ಮರುಪಾವತಿಗೆ ಬಾಕಿ ಇರುವ ಸದಸ್ಯರಿಗೆ ನೋಟೀಸ್ ಮಾಡಲಾಗಿದೆ, ಕೆಲ ಸದಸ್ಯರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.ಸಾಲ ವಸೂಲಾತಿಗೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ನಮ್ಮ ಸಂಘದಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ಸುಸ್ತಿಯಾಗಿರುವ ಸದಸ್ಯರ ಹೆಸರನ್ನು ಪ್ರಕಟಿಸಿ ಎಂದು ಗಣೇಶ್ ಕೈಕುರೆ ಆಗ್ರಹಿಸಿದರು.ಪ್ರತಿಕ್ರಿಯಿಸಿದ ಅಧ್ಯಕ್ಷರು, ಸಾಲ ಬಾಕಿ ಇರಿಸಿಕೊಂಡಿರುವ ಸದಸ್ಯರ ಹೆಸರನ್ನು ಸಾರ್ವಜನಿಕವಾಗಿ ಪ್ರಕಟ ಮಾಡಲು ಈಗ ಅವಕಾಶ ಇಲ್ಲ,ಮುಂದಿನ ಹಂತದಲ್ಲಿ ಅವರ ಹೆಸರು ತಾನಾಗಿಯೇ ಬರುತ್ತದೆ ಎಂದು ಹೇಳಿದರು.ಹೀಗಾದರೆ ಸಂಘವು ಮುಳುಗುವ ರೀತಿಯಲ್ಲಿ ಸಾಗುತ್ತದೆ ಎಂದು ಹೇಳಿದ ಗಣೇಶ್ ಕೈಕುರೆ,ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ,ಸಂಘಕ್ಕೆ ಸಾಲ ಬಾಕಿ ಇರಿಸಿಕೊಂಡ ಕೆಲವರು ಹೊರಗಡೆ ಭಾರೀ ವಿಜ್ರಂಭಣೆಯಿಂದ ಜೀವನ ಸಾಗಿಸುತ್ತಿದ್ದಾರೆ.ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಎಲ್ಲ ಸದಸ್ಯರಿಗೂ ಬಹುಮಾನ ನೀಡಿ:
ಈ ಬಾರಿ ಸಂಘದ ಸದಸ್ಯರಲ್ಲಿ, ಸಭೆಗೆ ಹಾಜರಾದವರಲ್ಲಿ ಲಕ್ಕಿಡಿಪ್ ಡ್ರಾ ನಡೆಸಿ ನೂರು ಮಂದಿಯನ್ನು ಬಹುಮಾನಕ್ಕೆ ಆಯ್ಕೆ ಮಾಡುವ ವಿಧಾನಕ್ಕೆ ಕೆಲ ಸದಸ್ಯರ ವಿರೋಧ ವ್ಯಕ್ತವಾಯಿತು. ಕೇವಲ ನೂರು ಜನರು ಮಾತ್ರವೇ ಅದೃಷ್ಟವಂತರೇ, ಉಳಿದವರು ಅದೃಷ್ಟವಂತರಲ್ವ ಎಂದು ಗಣೇಶ್ ಕೈಕುರೆ ಪ್ರಶ್ನಿಸಿದರಲ್ಲದೆ ಎಲ್ಲ ಸದಸ್ಯರಿಗೂ ಬಹುಮಾನ ನೀಡಿ ಎಂದರು.ಇದಕ್ಕೆ ಅಧ್ಯಕ್ಷರು ಉತ್ತರಿಸಿ ಮುಂದಿನ ಬಾರಿ ನೋಡೊಣ ಎಂದರು.
ಸಿಬ್ಬಂದಿಗಳ ಬೋನಸ್ ಬಗ್ಗೆ ವಿರೋಧ:
ಸಂಘದ ಸಿಬ್ಬಂದಿಗಳಿಗೆ ವಾರ್ಷಿಕ ೨ ತಿಂಗಳ ವೇತನವನ್ನು ಬೋನಸ್ ಆಗಿ ನೀಡುತ್ತಿರುವ ಬಗ್ಗೆ ಸದಸ್ಯ ವೆಂಕಟ್ರಮಣ ಗೌಡ ಪಾಂಗ ಅವರು ವಿರೋಧ ವ್ಯಕ್ತಪಡಿಸಿದರು.ಸಿಬ್ಬಂದಿಗಳ ಪ್ರಾಮಾಣಿಕ ಮತ್ತು ಸ್ವಾರ್ಥರಹಿತ ಕೆಲಸದಿಂದಾಗಿ ಸಂಘವು ಅಭಿವೃದ್ಧಿಯ ಪಥದಲ್ಲಿದೆ.ಆದುದರಿಂದ ಬೋನಸ್ ಕಡಿತಗೊಳಿಸುವುದು ತರವಲ್ಲ ಎಂದು ಅಧ್ಯಕ್ಷರು ಸೇರಿದಂತೆ ಹಲವು ಮಂದಿ ಸದಸ್ಯರು ಅಭಿಪ್ರಾಯಪಟ್ಟರು.
ಸದಸ್ಯರಿಗೆ ಶೇ. ೧೨.೫ ಡಿವಿಡೆಂಟ್ ಘೋಷಣೆ
ಸಭೆಯನ್ನು ಉದ್ಘಾಟಿಸಿ, ಸ್ವಾಗತಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ ಅವರು,ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದ್ದು,ಆಡಿಟ್ ವರ್ಗೀಕರಣದಲ್ಲಿ ಎ ಶ್ರೇಣಿಯಲ್ಲಿದೆ.ಸಂಘದ ಸದಸ್ಯರಿಗೆ ಕಳೆದ ವರ್ಷ ಶೇ.೧೦ ಡಿವಿಡೆಂಟ್ ನೀಡಲಾಗಿತ್ತು,ಈ ಬಾರಿ ಸದಸ್ಯರ ಬೇಡಿಕೆಯ ಮೇರೆಗೆ ಅದನ್ನು ಏರಿಕೆ ಮಾಡಿ ಶೇ.೧೨.೫ ಡಿವಿಡೆಂಟ್ ನೀಡುತ್ತಿರುವುದಾಗಿ ಘೋಷಿಸಿದರು.ಸಂಘದ ವತಿಯಿಂದ ಕೋಡಿಂಬಾಳ ಭಾಗದ ಜನರ ಅನುಕೂಲಕ್ಕಾಗಿ ಈಗಾಗಲೇ ಕೋಡಿಂಬಾಳದಲ್ಲಿ ಪಡಿತರ ವಿತರಣೆಯ ವ್ಯವಸ್ಥೆ ಆರಂಭಿಸಲಾಗಿದೆ. ಕೊಣಾಜೆ ಶಾಖೆಯು ಅಲ್ಲಿನ ಭಜನಾ ಮಂದಿರದಲ್ಲಿ ಬಾಡಿಗೆ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶಾಖೆಗೆ ಸ್ವಂತ ಜಾಗವನ್ನು ಪಡೆದು ಕಟ್ಟಡ ನಿರ್ಮಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಹಾಗೆಯೇ ಕಡಬದಲ್ಲಿಯೂ ಸಂಘದ ಹೆಸರಿನಲ್ಲಿ ಹೆಚ್ಚುವರಿ ಜಮೀನು ಖರೀದಿಸುವ ಚಿಂತನೆ ಇದೆ.ಕೃಷಿಕರ ಉತ್ಪನ್ನಗಳ ಶೇಖರಣೆಗಾಗಿ ಮರ್ದಾಳ ಶಾಖೆಯಲ್ಲಿ ನಬಾರ್ಡ್ ಆರ್ಥಿಕ ಸಹಕಾರದಲ್ಲಿ ಸುಸಜ್ಜಿತ ಗೋದಾಮು ನಿರ್ಮಿಸಲಾಗುತ್ತಿದೆ.ಕಡಬ ಕೇಂದ್ರ ಕಚೇರಿ ವಾಣಿಜ್ಯ ಸಂಕೀರ್ಣದಲ್ಲಿ ಕೃಷಿ ಕೇಂದ್ರದ ರೀತಿಯಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನೀರಾವರಿ ಪೈಪ್ ಹಾಗೂ ಫಿಟ್ಟಿಂಗ್ಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು ಶೀಘ್ರದಲ್ಲಿ ಕಾರ್ಯಗತಗೊಳ್ಳಲಿದೆ ಎಂದರು.ಸದಸ್ಯ ಗಿರಿಧರ್ ರೈ, ಡಿವಿಡೆಂಟ್ ಹೆಚ್ಚಿಸುವಂತೆ ಆಗ್ರಹಿಸಿದರು.ಭತ್ತ ಬೆಳೆಯುವ ಕೃಷಿಕರಿಗೆ ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸುವ ಸಣ್ಣ ಯಂತ್ರವನ್ನು ಸಂಘದ ವತಿಯಿಂದ ಬಾಡಿಗೆ ಆಧಾರದಲ್ಲಿ ನೀಡುವ ವ್ಯವಸ್ಥೆ ಮಾಡುವಂತೆ ಸಲಹೆ ವ್ಯಕ್ತವಾಯಿತು.ಸದಸ್ಯರಾದ ಸಾಂತಪ್ಪ ಗೌಡ ಪಿಜಕಳ, ಚಂದ್ರಶೇಖರ ಗೌಡ ಕೋಡಿಬೈಲು, ಬಾಲಕೃಷ್ಣ ಭಟ್ ಮೂಜೂರುಕಟ್ಟ, ನಾರಾಯಣ ಪೂಜಾರಿ ಪಾಲಪ್ಪೆ, ವೆಂಕಟ್ರಾಜ್ ಗೌಡ, ಸತೀಶ್ ನಾಯಕ್, ಮೇದಪ್ಪ ಗೌಡ ಡೆಪ್ಪುಣಿ, ಬಾಲಕೃಷ್ಣ ಗೌಡ ಬಳ್ಳೇರಿ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು.ಸೇವೆಯಿಂದ ನಿವೃತ್ತರಾದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಾಕೋ ಕೆ.ಎಂ.ದಂಪತಿಯನ್ನು ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.ಸಭೆಯಲ್ಲಿ ಭಾಗವಹಿಸಿದ ಅದೃಷ್ಟಶಾಲಿ ಸದಸ್ಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಬಹುಮಾನ ವಿತರಿಸಲಾಯಿತು.
ಉಪಾಧ್ಯಕ್ಷ ಗಣೇಶ್ ಮೂಜೂರು, ನಿರ್ದೇಶಕರಾದ ರಘುಚಂದ್ರ ಕೆ., ಗಿರೀಶ್ ಎ.ಪಿ., ಕೃಷ್ಣಪ್ಪ ಮಡಿವಾಳ, ಹರಿಶ್ಚಂದ್ರ ಪಲಯಮಜಲು, ಉಮೇಶ್ ಗೌಡ ಬಿ., ಸದಾನಂದ ಪಿ., ಸತೀಶ್ ನಾಕ್ ಮೇಲಿನಮನೆ, ಬಾಬು ಮುಗೇರ, ಚಂದ್ರಾವತಿ, ಯಶೋದಾ ಬಿ.ಪಿ.ಉಪಸ್ಥಿತರಿದ್ದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಚಾಕೋ ಕೆ.ಎಂ. ವರದಿ ಮಂಡಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ಜಿ. ನಿರೂಪಿಸಿ, ವಂದಿಸಿದರು.