ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ನಡೆಯಲಿರುವ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಹಾಗೂ ದ್ರವ್ಯಕಲಶ ಕಾರ್ಯಕ್ರಮಕ್ಕೆ ಸೆ. 2ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಕಾರ್ತಿಕ್ ತಂತ್ರಿ ಅವರು ದೇವರ ಮುಂದೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಶುಕ್ರವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ ಬಳಿಕ ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಸಂಜೀವಿನೀ ಮೃತ್ಯುಂಜಯ ಹೋಮ, ಐಕ್ಯಮತ್ಯ ಹೋಮ, ಸರ್ಪಸಂಸ್ಕಾರ ಮಂಗಳ ಹೋಮ, ಆಶ್ಲೇಷಾ ಬಲಿ, ವಟು ಆರಾಧನೆ, ನಾಗ ತಂಬಿಲ, ದೈವಗಳಿಗೆ ತಂಬಿಲ, ಸರ್ಪ ಪ್ರಾಯಶ್ಚಿತ್ತವಾಗಿ ಶ್ರೀ ದೇವರಿಗೆ ಭದ್ರದೀಪ ಸಮರ್ಪಣೆ, ಊರಿನ ಭಕ್ತಾದಿಗಳಿಂದ ಮುಷ್ಟಿಕಾಣಿಕೆ ಸಮರ್ಪಣೆ, ನವಕ ಕಲಶ ಪೂಜೆ, ಕಲಶಾಭಿಷೇಕ ನಡೆಯಿತು.
ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಸಂಜೆ 5.30ರಿಂದ ದುರ್ಗಾಪೂಜೆ, ತ್ರಿಷ್ಟುಪ್ ಹೋಮ, ಅಘೋರ ಹೋಮ, ಮಹಾಸುದರ್ಶನ ಹೋಮ, ಆವಾಹನೆ, ಬಾಧಾಕರ್ಷಣೆ ಉಚ್ಚಾಟನೆ, ಮಹಾಪೂಜೆ, ಪ್ರಸಾದ ವಿತರಣೆ ಜರಗಲಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.