ನೆಲ್ಯಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುದ್ಯ ಬಜತ್ತೂರು ಇದರ ವತಿಯಿಂದ ೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆ.೩೧ರಂದು ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಬೆಳಿಗ್ಗೆ ೭ ಗಂಟೆಗೆ ವಿದ್ಯಾಗಣಪತಿ ಪ್ರತಿಷ್ಠೆ ನಡೆಯಿತು. ನಂತರ ಗಣಹವನ, ಶ್ರೀ ಪಂಚಲಿಂಗೇಶ್ವರ ದೇವರಿಗೆ ನಿತ್ಯಪೂಜೆ ನಡೆಯಿತು. ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಶ್ರೀ ಪಂಚಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
ಧಾರ್ಮಿಕ ಸಭೆ:
ಮಧ್ಯಾಹ್ನ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಉಜಿತೆ ಸನಾತನ ಸಂಸ್ಥೆಯ ಆನಂದ ಗೌಡ ಅವರು, ಬಾಲಗಂಗಾಧರನಾಥರು ಆರಂಭಿಸಿದ್ದ ಗಣೇಶೋತ್ಸವದ ಉದ್ದೇಶವೇ ಈಗ ಬದಲಾಗುತ್ತದೆ. ಧರ್ಮದ ವಿಡಂಬನೆ, ಪಾಶ್ಚಾತ್ಯ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳೇ ನಡೆಯುತ್ತಿವೆ. ಗಣೇಶೋತ್ಸವದಲ್ಲಿ ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಪಡದೇ ಇರುವ ಕಾರ್ಯಕ್ರಮ ಆಯೋಜನೆ ಮಾಡುವುದು ಶುದ್ಧ ತಪ್ಪು. ಹಿಂದೂ ಧರ್ಮದಲ್ಲಿ ಸುಡುಮದ್ದು ಪ್ರದರ್ಶನವೇ ಇಲ್ಲ, ಇದಕ್ಕೆ ಭಗವಂತ ಒಲಿಯುವುದಿಲ್ಲ. ಇದು ರಾಕ್ಷಸಿ ಶಕ್ತಿಗಳನ್ನು ಆಕರ್ಷಿಸಿದಂತೆ ಆಗುತ್ತದೆ. ಗಂಟೆ,ತಾಳ, ಮಂಗಳವಾದ್ಯ, ಭಜನೆ,ಶಂಖನಾದ, ಶಾಸ್ತ್ರೀಯ ಸಂಗೀತಕ್ಕೆ ಭಗವಂತ ಒಲಿಯುತ್ತಾನೆ. ಮೆರವಣಿಗೆ ಭಕ್ತಿಭಾವದಿಂದ ನಡೆಯಬೇಕು ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಮುದ್ಯದಲ್ಲಿ ಆಯೋಜಿಸಿರುವ ಗಣೇಶೋತ್ಸವ ಅರ್ಥಪೂರ್ಣವಾಗಿದೆ ಎಂದರು. ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ಪಿಜಕ್ಕಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಶ್ರೀ ಕ್ಷೇ.ಧ.ಗ್ರಾ.ಯೋ. ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ ಪಿ., ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಟ್ರಸ್ಟ್ನ ಉಪಾಧ್ಯಕ್ಷ ಶಿವರಾಮ ಕಾರಂತ್, ಬೆದ್ರೋಡಿ ವಿದ್ಯಾನಗರ ಜನಸ್ಪಂದನಾ ಸಮಿತಿ ಮಾಜಿ ಕಾರ್ಯದರ್ಶಿ ಅಣ್ಣು ಬಿ.ಬೆದ್ರೋಡಿ, ಪೊರೋಳಿ ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಮಣಿಕಂಠ ನಾಯರ್, ಪ್ರಗತಿಪರ ಕೃಷಿಕರಾದ ವಾರಿಜ ಕೋಡಿಮನೆ, ಬಜತ್ತೂರು ಮುದ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಂಚಾಲಕ ರಾಧಾಕೃಷ್ಣ ಕುವೆಚ್ಚಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ತಿಮ್ಮಪ್ಪ ಗೌಡ ಉಪಾತಿಪಾಲು ಅವರನ್ನು ಧಾರ್ಮಿಕ ಸಭೆಯಲ್ಲಿ ಸನ್ಮಾನಿಸಲಾಯಿತು. ಸಮಿತಿಯ ಗೌರವ ಸಲಹೆಗಾರರಾದ ಗೋಪಾಲ ವಳಾಲುದಡ್ಡು ಸನ್ಮಾನಿತರನ್ನು ಪರಿಚಯಿಸಿ, ಸನ್ಮಾನಪತ್ರ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೋಮಸುಂದರ ಕೊಡಿಪಾನ ಸ್ವಾಗತಿಸಿ, ಉಪಾಧ್ಯಕ್ಷ ಮಹೇಂದ್ರ ವರ್ಮ ಪಡ್ಪು ವಂದಿಸಿದರು. ಗಣೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವೇದಿಕೆಯಲ್ಲಿ ಊರಿನ ಮಕ್ಕಳಿಂದ ನೃತ್ಯ ವೈಭವ ನಡೆಯಿತು. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಶೋಭಾ ಯಾತ್ರೆ:
ಸಂಜೆ ೨.೩೦ರಿಂದ ಗಣಪತಿ ವಿಗ್ರಹದ ಶೋಭಾಯಾತ್ರೆ ವಿವಿಧ ಭಜನಾ ತಂಡಗಳೊಂದಿಗೆ ನಡೆಯಿತು. ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ಅಯೋಧ್ಯನಗರ ಶ್ರೀರಾಮ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಜಲಸ್ತಂಭನ ಸ್ಥಳದಲ್ಲಿ ಬೆದ್ರೋಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಚೆಂಡೆ, ಕೀಲುಕುದರೆ ನೃತ್ಯ ಮೆರವಣಿಗೆಗೆ ಮೆರಗು ನೀಡಿತು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಪಡ್ಪು ದೈವಸ್ಥಾನ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೀರಕಟ್ಟೆಯಿಂದ ವಳಾಲು, ಮುಗೇರಡ್ಕ ಕ್ರಾಸ್ನಿಂದ ಆಗಮಿಸಿ ಬೆದ್ರೋಡಿ ನರ್ಸರಿ ಬಳಿಯಲ್ಲಿ ದೇವರ ಮೂರ್ತಿ ವಿಸರ್ಜನೆ ಮಾಡಲಾಯಿತು. ಗುಡ್ಡೆತಡ್ಕ, ನಡುವಡ್ಕ ಕ್ರಾಸ್ ರಸ್ತೆ, ಪಡ್ಪು ದೈವಸ್ಥಾನ, ಬೈಲು ಅಂಗಡಿ, ಟಪಾಲುಕೊಟ್ಟಿಗೆ, ನೀರಕಟ್ಟೆ, ವಳಾಲು ಹಾಗೂ ಜಲಸ್ತಂಭನ ಸ್ಥಳದಲ್ಲಿ ಪೂಜೆ ನಡೆಯಿತು. ದೇವರ ಮೂರ್ತಿ ವಿಸರ್ಜನೆ ಬಳಿಕ ಲಘು ಉಪಾಹಾರ ನಡೆಯಿತು.