ಮಿಂಚಿನ ದಾಳಿ ನಡೆಸಿದ ಎನ್.ಐ.ಎ. ; ನೆಕ್ಕಿಲಾಡಿ, ಮಿತ್ತೂರು, ಸಾಲ್ಮರ, ಅರಿಯಡ್ಕ, ಬೆಳ್ಳಾರೆ, ಮಡಿಕೇರಿ, ಮೈಸೂರಿನಲ್ಲಿ 33 ಸ್ಥಳಗಳಿಗೆ ದಾಳಿ

0
  • ಬೆಂಗಳೂರು ವಿಶೇಷ ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಗುಪ್ತ ದಾಳಿ ಸಂಘಟಿಸಿದ್ದ ತನಿಖಾ ದಳ
  • ದರ್ಬೆಯ ನಿರೀಕ್ಷಣಾ ಮಂದಿರದಲ್ಲಿ ವಿಚಾರಣೆ: ನೊಟೀಸ್ ಜಾರಿ
  • ಮದ್ದುಗುಂಡು, ಶಸ್ತ್ರಾಸ್ತ್ರ, ಕರಪತ್ರ ಸಹಿತ ಹಲವು ವಸ್ತುಗಳು ಪತ್ತೆ

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜು. 26ರಂದು ರಾತ್ರಿ ನಡೆದ ಬಿಜೆಪಿ ಯುವ ಮುಂದಾಳು ಪ್ರವೀಣ್ ನೆಟ್ಟಾರ್(34ವ)ರವರ ಹತ್ಯೆ ಪ್ರಕರಣದ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಸೆ. 6ರಂದು ಬೆಳ್ಳಂಬೆಳಗ್ಗೆ ಪುತ್ತೂರು ತಾಲೂಕಿನ ನೆಕ್ಕಿಲಾಡಿ, ಮಿತ್ತೂರು, ಸಾಲ್ಮರ, ಅರಿಯಡ್ಕ, ಸುಳ್ಯ ತಾಲೂಕಿನ ಬೆಳ್ಳಾರೆ, ನಾವೂರು ಮತ್ತು ಮಡಿಕೇರಿ ಹಾಗೂ ಮೈಸೂರಿನಲ್ಲಿ ಒಟ್ಟು 33 ಸ್ಥಳಗಳಿಗೆ ಮಿಂಚಿನ ದಾಳಿ ನಡೆಸಿದ್ದಾರೆ.

ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಬಿಜೆಪಿ ಯುವಮೋರ್ಛಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ ಯುವವಾಹಿನಿ ಸುಳ್ಯ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬೆಳ್ಳಾರೆ ಸಮೀಪದ ನೆಟ್ಟಾರ್ ನಿವಾಸಿ ಪ್ರವೀಣ್ ಅವರನ್ನು ಅವರದೇ ಮಾಲಕತ್ವದ ಅಕ್ಷಯ ಫ್ರೆಶ್ ಫಾರ್ಮ್ ಚಿಕನ್ ಸೆಂಟರ್ ಎದುರು ಬರ್ಬರವಾಗಿ ಇರಿದು ಕೊಲೆಗೈದಿರುವ ಘಟನೆಗೆ ಸಂಬಂಧಿಸಿ ಈಗಾಗಲೇ ಕರ್ನಾಟಕ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಕಸ್ಟಡಿಗೆ ಪಡೆದ ಬಳಿಕ ಪೊಲೀಸರು ಬಂಧಿತ ಹತ್ತು ಮಂದಿಯನ್ನು ಜೈಲಿಗಟ್ಟಿದ್ದಾರೆ. ಪ್ರವೀಣ್ ಕೊಲೆಯ ಬಳಿಕ ಹಿಂದೂ ಸಂಘಟನೆಗಳಿಂದ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿತ್ತು. ಕರ್ನಾಟಕ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ.ಎಸ್ಪಿ ಹೃಷಿಕೇಶ್ ಸೋನಾವಣೆ ಮತ್ತು ಪುತ್ತೂರು ಡಿವೈಎಸ್ಪಿ ಆಗಿದ್ದ ಡಾ. ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ನಡೆದಿದ್ದ ತನಿಖೆಯ ವರದಿಯ ಸಂಪೂರ್ಣ ಮಾಹಿತಿ ಪಡೆದಿದ್ದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಪ್ರಕರಣದ ದಾಖಲೆಯ ಸಮಗ್ರ ಮಾಹಿತಿಯನ್ನೂ ಬೆಂಗಳೂರುನಲ್ಲಿರುವ ಎನ್.ಐ.ಎ. ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿ ತನಿಖೆ ಮುಂದುವರಿಸಿದ್ದರು. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವವರಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದವರನ್ನೂ ಬಲೆಗೆ ಕೆಡವಲು ಯೋಜನೆ ರೂಪಿಸಿರುವ ತನಿಖಾ ದಳದ ಅಧಿಕಾರಿಗಳು ಕರ್ನಾಟಕ ಮತ್ತು ಕೇರಳದಲ್ಲಿ ಶೋಧ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಸೆ. 6ರಂದು ಗುಪ್ತವಾಗಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದ.ಕ., ಮೈಸೂರು ಹಾಗೂ ಕೊಡಗು ಜಿಲ್ಲೆಯ ಒಟ್ಟು 33 ಕಡೆಗಳಿಗೆ ದಾಳಿ ನಡೆಸಿ ಹಲವು ವಸ್ತುಗಳನ್ನು ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಎನ್.ಐ.ಎ ವಿಶೇಷ ಕೋರ್ಟ್ ಮೂಲಕ ಸರ್ಚ್ ವಾರಂಟ್ ಪಡೆದಿದ್ದ ರಾಷ್ಟ್ರೀಯ ತನಿಖಾ ದಳ ಸಂಸ್ಥೆಯ ಅಧಿಕಾರಿಗಳು ತನಿಖಾ ದಳದ ವಿವಿಧ ವಿಭಾಗದ ಸುಮಾರು 40 ದಕ್ಷ ಅಧಿಕಾರಿಗಳೊಂದಿಗೆ 55ಕ್ಕೂ ಹೆಚ್ಚು ಖಾಸಗಿ ಇನೋವಾ ಕಾರು ಹಾಗೂ ಸರಕಾರಿ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದಾರೆ. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದ ಹತ್ತು ಆರೋಪಿಗಳ ಮನೆ ಮೇಲೆ, ಹತ್ಯೆ ಬಳಿಕ ಆರೋಪಿಗಳಿಗೆ ಅಶ್ರಯ ನೀಡಿದ ಸ್ಥಳಗಳು, ಕಚೇರಿಗಳು ಹಾಗೂ ಪಿಎಫ್‌ಐನ ಮುಖಂಡರು ಮತ್ತು ಸಕ್ರಿಯ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್, ಕಚೇರಿ, ಪಿಎಫ್‌ಐ ಮುಖಂಡರುಗಳಾದ ಪುತ್ತೂರು ಎಪಿಎಂಸಿ ರಸ್ತೆಯ ಸಾದಿಕ್ ಸಾಲ್ಮರ, ಬೆಳ್ಳಾರೆಯ ಇಕ್ಬಾಲ್, ಕುಂಬ್ರದ ಜಾಬೀರ್ ಅರಿಯಡ್ಕ, ಉಪ್ಪಿನಂಗಡಿ ನೆಕ್ಕಿಲಾಡಿಯ ಮಸೂದ್ ಅಗ್ನಾಡಿ, ಮಡಿಕೇರಿಯ ತುಫೇಲ್ ಅವರ ನಿವಾಸ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದಾರೆ. ವಿವಿಧೆಡೆ ಬಳಸಿದ ಮದ್ದುಗುಂಡು ಸುಧಾರಿತ ಶಸ್ತ್ರಾಸ್ತ್ರ, ಕರಪತ್ರಗಳು, ಪುಸ್ತಕಗಳು, ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್, ನಗದು, ವಶ ಪಡಿಸಿಕೊಂಡಿರುವ ಅಧಿಕಾರಿಗಳು ಕೆಲವು ಗೌಪ್ಯ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಕೆಲವು ಶಂಕಿತ ವ್ಯಕ್ತಿಗಳನ್ನು ಪುತ್ತೂರು ದರ್ಬೆಯ ನಿರೀಕ್ಷಣಾ ಮಂದಿರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಾಹನದಲ್ಲಿ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಹೇರಲಾಗಿತ್ತು. ವಿಚಾರಣೆಯ ಬಳಿಕ ಎನ್.ಐ.ಎ. ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ನೋಟಿಸ್ ನೀಡಿ ಕಳುಹಿಸಿದ್ದಾರೆ.

ರಾತ್ರಿ 7.30 ಗಂಟೆ ವೇಳೆಗೆ ಎಲ್ಲಾ ಕಡೆಯ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿ ಎನ್.ಐ.ಎ ಅಧಿಕಾರಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ವಾಪಸ್ ತೆರಳಿದ್ದಾರೆ.

10 ಆರೋಪಿಗಳ ಬಂಧನ :  ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಳ್ಯದ ಶಿಹಾಬ್, ಪಾಲ್ತಾಡಿ ಅಂಕತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್ ಅಲ್ಲದೆ ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಿಮಜಲಿನ ಸದ್ದಾಂ, ಹ್ಯಾರೀಸ್, ಬೆಳ್ಳಾರೆ ಗೌರಿ ಹೊಳೆ ಬಳಿಯ ನೌಫಲ್, ನಾವೂರಿನ ಆಬಿದ್ ಮತ್ತು ಜಟ್ಟಿಪಳ್ಳದ ಕಬೀರ್ ಸೇರಿದಂತೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ- ಪುತ್ತೂರಿನ ಹಲವೆಡೆ ಎನ್‌ ಐ ಎ ದಾಳಿ; ಐ ಬಿಯಲ್ಲಿ ವಿಚಾರಣೆ

LEAVE A REPLY

Please enter your comment!
Please enter your name here