- ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್: ಪ್ರವೀಣ್ ಮರ್ಡರ್ ಕೇಸ್ ಗೆ ಲಿಂಕ್ ಹಿನ್ನೆಲೆಯಲ್ಲಿ ವಿಚಾರಣೆ?
ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ರಿಯಾಝ್ ಫರಂಗಿಪೇಟೆ ಮನೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೆ.8ರಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.
ಜಲೈ 26ರಂದು ರಾತ್ರಿ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯವ ಮುಂದಾಳು ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಎರಡು ತಿಂಗಳ ಹಿಂದೆ ಬಿಹಾರದಲ್ಲಿ ಬಾಂಬ್ ಸ್ಫೋಟಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಘಟನೆಗೆ ಸಂಬಂಧಿಸಿ ತನಿಖೆ ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಅವರ ಬಿ.ಸಿ.ರೋಡ್ ಸಮೀಪದ ಮನೆಗೆ ದಾಳಿ ನಡೆಸಿದ್ದಾರೆ.
ಬೆಂಗಳೂರು ಎನ್.ಐ.ಎ. ವಿಶೇಷ ಕೋರ್ಟ್ ಮೂಲಕ ಸರ್ಚ್ ವಾರಂಟ್ ಪಡೆದಿದ್ದ ರಾಷ್ಟ್ರೀಯ ತನಿಖಾ ದಳ ಸಂಸ್ಥೆಯ ಅಧಿಕಾರಿಗಳು ತನಿಖಾದಳದ ವಿವಿಧ ವಿಭಾಗದ ಸುಮಾರು 40 ದಕ್ಷ ಅಧಿಕಾರಿಗಳೊಂದಿಗೆ 55ಕ್ಕೂ ಹೆಚ್ಚು ಖಾಸಗಿ ಇನೋವಾ ಕಾರು ಹಾಗೂ ಸರಕಾರಿ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಸಹಕಾರದೊಂದಿಗೆ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಬಂಧಿಸಿ ಸೆ.6ರಂದು ಪುತ್ತೂರು ತಾಲೂಕಿನ ನೆಕ್ಕಿಲಾಡಿ, ಮಿತ್ತೂರು, ಸಾಲ್ಮರ, ಅರಿಯಡ್ಕ, ಸುಳ್ಯ ತಾಲೂಕಿನ ಬೆಳ್ಳಾರೆ, ನಾವೂರು ಮತ್ತು ಮಡಿಕೇರಿ ಹಾಗೂ ಮೈಸೂರು ಸೇರಿದಂತೆ ಒಟ್ಟು 33 ಸ್ಥಳಗಳಿಗೆ ಮಿಂಚಿನ ದಾಳಿ ನಡೆಸಿದ್ದರು.
ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದ ಹತ್ತು ಆರೋಪಿಗಳ ಮನೆ ಮೇಲೆ, ಹತ್ಯೆ ಬಳಿಕ ಆರೋಪಿಗಳಿಗೆ ಅಶ್ರಯ ನೀಡಿದ ಸ್ಥಳಗಳು, ಕಚೇರಿಗಳು ಹಾಗೂ ಪಿಎಫ್ಐ ಮುಖಂಡರು ಮತ್ತು ಸಕ್ರಿಯ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್, ಕಚೇರಿ, ಪಿಎಫ್ಐ ಮುಖಂಡರುಗಳಾದ ಪುತ್ತೂರು ಎಪಿಎಂಸಿ ರಸ್ತೆಯ ಸಾದಿಕ್ ಸಾಲ್ಮರ, ಬೆಳ್ಳಾರೆಯ ಇಕ್ಬಾಲ್, ಕುಂಬ್ರದ ಜಾಬೀರ್ ಅರಿಯಡ್ಕ, ಉಪ್ಪಿನಂಗಡಿ ನೆಕ್ಕಿಲಾಡಿಯ ಮಸೂದ್ ಅಗ್ನಾಡಿ, ಮಡಿಕೇರಿಯ ತುಫೇಲ್ ಅವರ ನಿವಾಸ ಸೇರಿದಂತೆ ಒಟ್ಟು 33 ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದ್ದರು.
ದಾಳಿ ವೇಳೆ ವಿವಿಧೆಡೆ ಬಳಸಿದ ಮದ್ದುಗುಂಡು, ಸುಧಾರಿತ ಶಸ್ತ್ರಾಸ್ತ್ರ, ಕರಪತ್ರಗಳು, ಪುಸ್ತಕಗಳು, ಲ್ಯಾಪ್ ಟ್ಯಾಪ್, ಹಾರ್ಡ್ ಡಿಸ್ಕ್ ಮತ್ತು ನಗದು ವಶ ಪಡಿಸಿಕೊಂಡಿದ್ದ ಅಧಿಕಾರಿಗಳು ಕೆಲವು ಗೌಪ್ಯ ಮಾಹಿತಿಗಳನ್ನು ಪತ್ತೆ ಹಚ್ಚಿದ್ದರು. ಬಳಿಕ ಕೆಲವು ಶಂಕಿತ ವ್ಯಕ್ತಿಗಳನ್ನು ಪುತ್ತೂರು ದರ್ಬೆಯ ನಿರೀಕ್ಷಣಾ ಮಂದಿರಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಾಹನದಲ್ಲಿ ಕರೆ ತಂದು ವಿಚಾರಣೆಗೆ ಒಳಪಡಿಸಿದ್ದರು. ಇಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ಸೆ.8ರಂದು ಬೆಳ್ಳಂಬೆಳಗ್ಗೆ ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಮನೆಗೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಎನ್.ಐ.ಎ. ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆಯೇ ಎಸ್. ಡಿ. ಪಿ.ಐ. ಕಾರ್ಯಕರ್ತರು ರಿಯಾಝ್ ಮನೆ ಮುಂದೆ ಮುಗಿ ಬಿದ್ದಿದ್ದರು. ಬಳಿಕ ಬಂಟ್ವಾಳ ಪೊಲೀಸರು ಮನವೊಲಿಸಿ ಕಾರ್ಯಕರ್ತರನ್ನು ವಾಪಸ್ ಕಳುಹಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಸುಳ್ಯದ ಶಿಹಾಬ್, ಪಾಲ್ತಾಡಿ ಅಂಕತಡ್ಕದ ರಿಯಾಝ್, ಸುಳ್ಯ ಎಲಿಮಲೆಯ ಬಶೀರ್ ಅಲ್ಲದೆ ಸವಣೂರಿನ ಝಾಕಿರ್, ಬೆಳ್ಳಾರೆಯ ಶಫೀಕ್, ಪಳ್ಳಿಮಜಲಿನ ಸದ್ದಾಂ, ಹ್ಯಾರೀಸ್, ಬೆಳ್ಳಾರೆ ಗೌರಿ ಹೊಳೆ ಬಳಿಯ ನೌಫಲ್, ನಾವೂರಿನ ಆಬಿದ್ ಮತ್ತು ಜಟ್ಟಿಪಳ್ಳದ ಕಬೀರ್ ಸೇರಿದಂತೆ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಎಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಂಧಿತರ ಜತೆ ರಿಯಾಝ್ ಫರಂಗಿಪೇಟೆರವರು ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕಾಗಿ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇನ್ನೊಂದೆಡೆ ಬಿಹಾರದಲ್ಲಿ ಎರಡು ತಿಂಗಳ ಹಿಂದೆ ಬಾಂಬ್ ಸ್ಫೋಟ ನಡೆಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣದ ಪ್ರತ್ಯೇಕ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಾಂಬ್ ಸ್ಫೋಟಿಸಿದ ಉಗ್ರರ ಜತೆಗೆ ಫೋನ್ ಮೂಲಕ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ರಿಯಾಝ್ ಫರಂಗಿಪೇಟೆ ಮನೆಗೆ ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆ ಮತ್ತು ಬಿಹಾರದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಬಳಿಕ ರಿಯಾಜ್ ಫರಂಗಿಪೇಟೆ ಸಹಿತ ಹಲವು ಮುಖಂಡರ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳು ಇದೀಗ ರಿಯಾಝ್ ಫರಂಗಿಪೇಟೆಗೆ ಬಲೆ ಬೀಸಿದ್ದು ನೊಟೀಸ್ ಜಾರಿಗೊಳಿಸಿದ್ದಾರೆ. ಅಲ್ಲದೆ, ರಿಯಾಝ್ ಅವರ ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಉಗ್ರರ ಜತೆಗೆ ಫೋನ್ ಮೂಲಕ ಸಂಭಾಷಣೆ ಮಾಡಿದ್ದರು ಎನ್ನಲಾಗಿರುವ ವಿಚಾರಕ್ಕೆ ಸಂಬಂಧಿಸಿ ಅವರ ಮೊಬೈಲ್ ಫೋನ್ ಪರಿಶೀಲನೆಗೆ ಬೆಂಗಳೂರಿನಿಂದ ಸೈಬರ್ ತಜ್ಞರು ಆಗಮಿಸಿದ್ದಾರೆ. ರಿಯಾಝ್ ಮನೆಗೆ ಯಾವ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂಬುದನ್ನು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ತಿಳಿಸಿಲ್ಲ.