ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಯರಾಮ ಶೆಟ್ಟಿಯವರಿಗೆ ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಸನ್ಮಾನ

0

ಪುತ್ತೂರು: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸರ್ವೆ ಕಲ್ಪಣೆ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಅವರಿಗೆ ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಸನ್ಮಾನ ಕಾರ್ಯಕ್ರಮ ಸೆ.8ರಂದು ಶಾಲೆಯಲ್ಲಿ ನಡೆಯಿತು.

ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಸರಳ ವ್ಯಕ್ತಿತ್ವದ ಜಯರಾಮ ಶೆಟ್ಟಿಯವರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ಸಿಕ್ಕಿರುವುದು ಅವರ ಅರ್ಹತೆಗೆ ಸಂದ ಗೌರವವಾಗಿದೆ. ಇವರಿಗೆ ಪ್ರಶಸ್ತಿ ಬಂದಿರುವುದು ಶಾಲೆಗೂ, ಊರಿಗೂ ಹೆಮ್ಮೆ ವಿಷಯವಾಗಿದ್ದು ಮುಂದಕ್ಕೆ ನಿಮಗೆ ರಾಜ್ಯ, ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು.
ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಕರುಣಾಕರ ಗೌಡ ಎಲಿಯ ಮಾತನಾಡಿ ಜಯರಾಮ ಶೆಟ್ಟಿಯವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು ಶಾಲೆಯ ಅಭಿವೃದ್ಧಿಯಲ್ಲಿ ಚಿಂತನೆ ನಡೆಸುವವರಾಗಿದ್ದಾರೆ. ಇವರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ದೊರಕಿರುವುದು ನಮಗೂ, ಊರಿಗೂ ಅಭಿಮಾನ ಎಂದು ಹೇಳಿದರು.

ಸೌಹಾರ್ದ ವೇದಿಕೆಯ ನಿರ್ದೇಶಕ ಯೂಸುಫ್ ರೆಂಜಲಾಡಿ ಮಾತನಾಡಿ ಎಲ್ಲರನ್ನೂ ಗೌರವಿಸುವ ಗುಣ ಹೊಂದಿರುವ ಜಯರಾಮ ಶೆಟ್ಟಿಯವರು ಶಾಂತಿ ಚಿತ್ತದ ಮಾದರಿ ಶಿಕ್ಷಕರಾಗಿದ್ದು ಅರ್ಹವಾಗಿಯೇ ಇವರಿಗೆ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.

ಸೌಹಾರ್ದ ವೇದಿಕೆಯ ನಿರ್ದೇಶಕ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಮಾತನಾಡಿ ನಮ್ಮೂರಿನ ಶಾಲೆಯ ಶಿಕ್ಷಕರೋರ್ವರಿಗೆ ಜಿಲ್ಲಾ ಉತ್ತಮ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲಾ ಬಹಳ ಖುಷಿ ತಂದಿದೆ ಎಂದು ಹೇಳಿದರು.

ಸೌಹಾರ್ದ ವೇದಿಕೆಯ ನಿರ್ದೇಶಕ ಗಣೇಶ್ ನೇರೋಳ್ತಡ್ಕ, ಶಿಕ್ಷಕರಾದ ಸಹದೇವ್ ಇ, ಉಮಾಶಂಕರ್ ಡಿ, ವೆಂಕಟೇಶ್ ಬಿ, ಕಾಂಚನಾ ಕೆ.ಸಿ, ಹರ್ಷಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಜಯರಾಮ ಶೆಟ್ಟಿ ಕೆ ಸ್ವಾಗತಿಸಿದರು. ಶಿಕ್ಷಕ ಸಹದೇವ್ ಇ ವಂದಿಸಿದರು.

ಜಿಲ್ಲಾ ಉತ್ತಮ ಪ್ರಶಸ್ತಿ ಸಿಕ್ಕಿರುವುದನ್ನು ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಸಂದ ಗೌರವ ಎಂದು ಭಾವಿಸಿ ಪ್ರಶಸ್ತಿ ಸ್ವೀಕರಿಸಿದ್ದೇನೆ. ನಾನು ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಸನ್ಮಾನ, ಗೌರವಾರ್ಪಣೆಗಳನ್ನೂ ನಾನು ಬಯಸುವುದಿಲ್ಲ. ಆದರೆ ನಿಮ್ಮ ಪ್ರೀತಿ, ಅಭಿಮಾನಕ್ಕೆ ಸನ್ಮಾನ ಸ್ವೀಕರಿಸಿದ್ದೇನೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಯಲ್ಲಿ ತಾವೆಲ್ಲರೂ ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಜಯರಾಮ ಶೆಟ್ಟಿ ಕೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ

LEAVE A REPLY

Please enter your comment!
Please enter your name here