ಪುತ್ತೂರು: ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು ಭವ್ಯ ಭಾರತವನ್ನು ಮತ್ತೆ ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಆರಂಭಿಸಿದ ಭಾರತ್ ಜೋಡೋ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲರವರ ನಿರ್ದೇಶನದ ಮೇರೆಗೆ ಕೆಪಿಸಿಸಿ ರಾಜ್ಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರು ದಕ್ಷಿಣ ಕನ್ನಡ ಜಿಲ್ಲೆಯ ಕೆಪಿಸಿಸಿ ಸಂಯೋಜಕರಾಗಿ ಎನ್. ಚಂದ್ರಹಾಸ ಶೆಟ್ಟಿರವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿರುತ್ತಾರೆ.
3750ಕಿ.ಮೀ ನಡಿಗೆಯ ಭಾರತ್ ಜೋಡೋ ಯಾತ್ರೆಯು ಈಗಾಗಲೇ 100ಕಿ.ಮೀ ಅನ್ನು ಕ್ರಮಿಸಿದೆ. ರಾಹುಲ್ ಗಾಂಧಿಯವರ ಪಾದಯಾತ್ರೆಯು ಕರ್ನಾಟಕ ರಾಜ್ಯವನ್ನು ಪ್ರವೇಶಿಸುವ ಸಂದರ್ಭ ಪಾದಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಜ್ಜುಗೊಳಿಸಲು, ಸಭೆ ನಡೆಸಲು ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರು ಜಿಲ್ಲಾವಾರು ಕೆಪಿಸಿಸಿ ಸಂಯೋಜಕರನ್ನು ಆಯ್ಕೆ ಮಾಡಿರುತ್ತಾರೆ.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯ ನಿವಾಸಿ, ಬ್ಯಾಂಕ್ ಆಫ್ ಬರೋಡ(ವಿಜಯಾ ಬ್ಯಾಂಕ್)ದ ನಿವೃತ್ತ ಉದ್ಯೋಗಿಯಾಗಿರುವ ಚಂದ್ರಹಾಸ ಶೆಟ್ಟಿಯವರು ಕೋಟಿ-ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷರಾಗಿಯೂ, ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ನ ಪುತ್ತೂರು ತಾಲೂಕು ಇದರ ಗೌರವಾಧ್ಯಕ್ಷರಾಗಿ ಸೇವೆ ನೀಡುತ್ತಿದ್ದಾರೆ. ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ಸೇರಿದಂತೆ ಅನೇಕ ಕಬಡ್ಡಿ ಕ್ರೀಡಾಪಟಗಳುಗಳನ್ನು ವಿಜಯಾ ಬ್ಯಾಂಕಿಗೆ ಪರಿಚಯಿಸಿದ ಕೀರ್ತಿಯೂ ಅವರಿಗಿದೆ. ಪ್ರಸ್ತುತ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗುವ ಪಿಲಿರಂಗ್ ಸ್ಪರ್ಧಾ ಕಾರ್ಯಕ್ರಮದ ಗೌರವಾಧ್ಯಕ್ಷರಾಗಿರುತ್ತಾರೆ.