ಎ ಸಿ ಗಿರೀಶ್ ನಂದನ್, ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್‌ರಿಂದ ಚಾಲನೆ
- ಸ್ವಚ್ಛತೆಯಲ್ಲಿ ನಗರಸಭೆ ನಂ. 1 ಸ್ಥಾನಕ್ಕೇರಲಿ – ಎ.ಸಿ ಗಿರೀಶ್ ನಂದನ್
- ಮಾದರಿ ನಗರಸಭೆಯನ್ನಾಗಿಸುವ ಗುರಿ – ಕೆ.ಜೀವಂಧರ್ ಜೈನ್
ಪುತ್ತೂರು: ನಗರಸಭೆ ಕಾರ್ಯಾಲಯ ಪುತ್ತೂರು ಇದರ ವತಿಯಿಂದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಸೆ.17ರಂದು ಬೆಳಿಗ್ಗೆ ಪುತ್ತೂರು ಪರ್ಲಡ್ಕದಲ್ಲಿರುವ ಡಾ| ಶಿವರಾಮ ಕಾರಂತರ ಬಾಲವನದಲ್ಲಿ ನಡೆಯಿತು. ಸಹಾಯಕ ಕಮೀಷನರ್ ಗಿರೀಶ್‌ನಂದನ್ ಮತ್ತು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಸ್ವಚ್ಛತಾ ನಿಶಾನೆ ತೋರಿಸುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರ ಕಾರ್ಮಿಕರು, ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿದರು.
ಸ್ವಚ್ಛತೆಯಲ್ಲಿ ನಗರಸಭೆ ನಂ. 1 ಸ್ಥಾನಕ್ಕೇರಲಿ:
ಸಹಾಯಕ ಕಮೀಷನರ್ ಗಿರೀಶ್‌ನಂದನ್ ಅವರು ಮಾತನಾಡಿ ಪುತ್ತೂರು ನಗರಸಭೆ ಸ್ವಚ್ಛತೆಯಲ್ಲಿ ಮಾದರಿ ಕೆಲಸ ಮಾಡುತ್ತಿದೆ. ಮುಂದೆ ಅದು ಮೊದಲ ಸ್ಥಾನಕ್ಕೆ ಏರಲಿ. ಅದೇ ರೀತಿ ಬಾಲವನದಲ್ಲಿ ಸ್ವಚ್ಚತೆ ಕಾಯ್ದುಕೊಳ್ಳುವಲ್ಲಿ ಎಲ್ಲರ ಸಹಕಾರವಿರಲಿ ಎಂದರು.
ಮಾದರಿ ನಗರಸಭೆಯನ್ನಾಗಿಸುವ ಗುರಿ:
ಸ್ವಚ್ಛತೆ ಬಗ್ಗೆ ಬಹಳಷ್ಟು ಮುತುವರ್ಜಿ ವಹಿಸಿಕೊಂಡು ರಾಜ್ಯದಲ್ಲಿ 3ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಮುಂದಿನ ದಿನ 1ನೇ ಸ್ಥಾನ ಪಡೆದುಕೊಳ್ಳುವ ದೃಷ್ಟಿಕೋನವಿಟ್ಟು ಒಂದಷ್ಟು ಮನೆ ಮನೆ ಕಸ ಸಂಗ್ರಹದಲ್ಲಿ ಅತೀ ಹೆಚ್ಚು ಮುತುವರ್ಜಿ ವಹಿಸಿಕೊಳ್ಳುತ್ತಿದ್ದೇವೆ. ಪ್ರತಿ ವಾರ್ಡ್ ಮಟ್ಟದಲ್ಲಿ ವಾಹನ ಹೋಗಿ ಕಸ ಸಂಗ್ರಹ ಮಾಡಲಾಗುತ್ತಿದೆ. ಮುಂದಿನ ದಿನ ಪುತ್ತೂರು ನಗರಸಭೆ ಮಾದರಿ ನಗರಸಭೆಯನ್ನಾಗಿ ಮಾಡುವುದು. ಜೊತೆಗೆ ಪುತ್ತೂರು ಬನ್ನೂರಿನಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ಬಯೋಗ್ಯಾಸ್ ಕಾಮಗಾರಿ ಬಹಳಷ್ಟು ಶೀಘ್ರವಾಗಿ ನಡೆಯುತ್ತಿದೆ. ಅದನ್ನು ಮುಂದಿನ ದಿನ ಲೋಕಾರ್ಪಣೆ ಮಾಡಿ ಪುತ್ತೂರು ನಗರಸಭೆ ರಾಜ್ಯದಲ್ಲೇ ಮಾದರಿ ನಗರಸಭೆಯನ್ನಾಗಿ ಮಾಡುವ ಬಗ್ಗೆ ಎಲ್ಲರು ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪೌರಾಯುಕ್ತ ಮಧು ಎಸ್ ಮನೋಹರ್, ನಗರಸಭೆ ಸದಸ್ಯರಾದ ದೀಕ್ಷಾ ಪೈ, ಪಿ.ಜಿ ಜಗನ್ನಿವಾಸ ರಾವ್, ಗೌರಿ ಬನ್ನೂರು, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸಹಿತ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ವರಲಕ್ಷ್ಮೀ, ಅಧಿಕಾರಿಗಳು, ಪೌರ ಕಾರ್ಮಿಕರು, ನರೇಂದ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾದರು.