ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ, ಸಾಧಕರಿಗೆ ಸನ್ಮಾನ

0
  • ರೂ. 223.33 ಕೋಟಿ ವ್ಯವಹಾರ, ರೂ.70,69,467 ನಿವ್ವಳ ಲಾಭ, ಶೇ.11 ಡಿವಿಡೆಂಡ್
  • ಸಂಘವು ಆರ್ಥಿಕವಾಗಿ ಸದೃಢಗೊಳ್ಳುತ್ತಿರುವುದು ಖುಷಿ ತಂದಿದೆ: ಪ್ರಕಾಶ್ಚಂದ್ರ ರೈ ಕೈಕಾರ

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2021-22 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ಸೆ.19 ರಂದು ಕುಂಬ್ರ ನವೋದಯ ರೈತ ಸಭಾ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಸ್ವಾಗತ, ಪ್ರಾಸ್ತಾವಿಕ ಮಾತುಗಳೊಂದಿಗೆ 2021-22 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಸಂಘದಲ್ಲಿ ವರ್ಷದ ಆರಂಭದಲ್ಲಿ 3,564 ಮಂದಿ ಸದಸ್ಯರಿದ್ದು ರೂ.3,26,19,095/- ಪಾಲು ಬಂಡವಾಳವಿತ್ತು ವರದಿ ವರ್ಷದಲ್ಲಿ 178 ಮಂದಿ ಸದಸ್ಯರು ಸೇರ್ಪಡೆಗೊಂಡು 29 ಮಂದಿ ಸದಸ್ಯತನವನ್ನು ಬಿಟ್ಟಿರುತ್ತಾರೆ. ಪಾಲು ಬಂಡವಾಳ ರೂ.41,46,125 ಜಮೆಯಾಗಿರುತ್ತದೆ. ರೂ.9,42,300 ಪಾಲು ಬಂಡವಾಳ ಪಾವತಿಸಿದೆ. ವರ್ಷಾಂತ್ಯಕ್ಕೆ 3713 ಮಂದಿ ಸದಸ್ಯರಿದ್ದು ರೂ.3,5822,945 ಪಾಲು ಬಂಡವಾಳ ಇರುತ್ತದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ ಎಂದರು.

ಸಂಘವು 2021-22 ನೇ ಸಾಲಿನಲ್ಲಿ ಒಟ್ಟು ರೂ. 223.33 ಕೋಟಿ ವ್ಯವಹಾರ ನಡೆಸಿದ್ದು ಕಳೆದ ವರ್ಷಕ್ಕಿಂತ ಹೆಚ್ಚಳವನ್ನು ಸಾಧಿಸಿದೆ. ವರದಿ ಸಾಲಿನಲ್ಲಿ ಒಟ್ಟು ರೂ.70,69,467 ನಿವ್ವಳ ಲಾಭವನ್ನು ಪಡೆದುಕೊಂಡಿದ್ದು ಸದಸ್ಯರಿಗೆ ಶೇ.11 ಡಿವಿಡೆಂಡ್ ಕೊಡಲಾಗುವುದು ಎಂದು ತಿಳಿಸಿದರು. ಸಾಲ ವಸೂಲಾತಿಯಲ್ಲೂ ಶೇ.98 ಪ್ರಗತಿ ಸಾಧಿಸಲಾಗಿದೆ ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್‌ರವರು, ಮಹಾಸಭೆಯ ತಿಳುವಳಿಕೆ ಪತ್ರ, ಹಿಂದಿನ ಸಾಲಿನ ಮಹಾಸಭೆಯ ನಡವಳಿಕೆಗಳನ್ನು, 2022-23 ನೇ ಸಾಲಿಗೆ ತಯಾರಿಸಿದ ಅಂದಾಜು ಬಜೆಟ್, ನಿವ್ವಳ ಲಾಭಾಂಶ ಹಂಚಿಕೆ ಮಾಡುವ ವಿಚಾರ, 2022-23 ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ವಿಚಾರಗಳನ್ನು ಸಭೆಯ ಮುಂದಿಟ್ಟು ಸಭೆಯಿಂದ ಅನುಮತಿ ಪಡೆದುಕೊಂಡರು. ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ಡಿ.ಯವರು ರೈತರಿಗೆ ವಿವಿಧ ಸವಲತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದಿಂದ ರೈತಪರ ಸಹಕಾರಿ ಚಟುವಟಿಕೆಗಳು
ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಮಾತನಾಡಿ, ಸಂಘವು 2021-22 ನೇ ಸಾಲಿನಲ್ಲಿ ಹಲವು ರೈತಪರ ಸಹಕಾರಿ ಚಟುವಟಿಕೆಗಳನ್ನು ಮಾಡಿದೆ ಅವುಗಳಲ್ಲಿ ಮುಖ್ಯವಾಗಿ ಸಂಘದ ಪ್ರಧಾನ ಕಛೇರಿಯಲ್ಲಿ ವಿಶೇಷ ಸಹಾಯವಾಣಿ ವ್ಯವಸ್ಥೆ( ಹೆಲ್ಪ್ ಡೆಸ್ಕ್)ಯನ್ನು ಆರಂಭಿಸಲಾಗಿದೆ. ಹೆಲ್ಪ್ ಡೆಸ್ಕ್ನಲ್ಲಿ ಓರ್ವ ಸಿಬ್ಬಂದಿ ಇರಲಿದ್ದು ಗ್ರಾಹಕರಿಗೆ ಸಂಘಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆಯೂ ಮಾಹಿತಿಯನ್ನು ನೀಡಲಿದ್ದಾರೆ ಎಂದರು ಇದಲ್ಲದೆ ಕೈಕಾರ ಶಾಖೆಯಲ್ಲಿ ಬ್ಯಾಂಕಿಂಗ್ ಸೇವೆ, ಸಾವಯವ, ಜೈವಿಕ, ರಾಸಾಯನಿಕ ಗೊಬ್ಬರದ ಮಾರಾಟದ ಬಗ್ಗೆ ಸಂಘದ ಪ್ರಧಾನ ಕಛೇರಿಯಲ್ಲಿ ಪ್ರದರ್ಶನ ಫಲಕ ಅಳವಡಿಕೆ, ಸುಳ್ಯಪದವು ಗೋದಾಮಿನ ಕಟ್ಟಡ ರಚನೆಯ ಬಗ್ಗೆ ನಬಾರ್ಡ್ ಅನುದಾನ ಪಡೆಯುವಲ್ಲಿ ಅನುಮತಿಯನ್ನು ಪಡೆದು, ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ, ಶವಪೆಟ್ಟಿಗೆಯನ್ನು ದಾಸ್ತಾನು ಇಡುವ ಬಗ್ಗೆ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ, ಅರಿಯಡ್ಕ ಪಡಿತರ ವಿತರಣಾ ಕಟ್ಟಡಕ್ಕೆ ಹೊಂದಿಕೊಂಡು ಶೀಟು ಅಳವಡಿಸಿ ಕೊಠಡಿ ನಿರ್ಮಾಣ ಮಾಡಲಾಗಿದೆ, ಸಂಪನ್ಮೂಲ ವ್ಯಕ್ತಿಗಳಿಂದ ರೈತರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದೆ.

ಮುಂದಿನ ಯೋಜನೆಗಳು
ಸಂಘವು 70 ಲಕ್ಷ ರೂ.ಗಳಷ್ಟು ಲಾಭ ಪಡೆಯತ್ತಾ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಇದು ಸಂಘವು ಆರ್ಥಿಕವಾಗಿ ಸದೃಢಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ. ಇದರ ಹಿಂದೆ ಎಲ್ಲಾ ಸದಸ್ಯರುಗಳು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ,ಸಿಬ್ಬಂದಿ ವರ್ಗ ಅಲ್ಲದೆ ಮಾಜಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರುಗಳ ಎಲ್ಲರ ಶ್ರಮ ಇದೆ. ಸಂಘವನ್ನು ಸ್ಥಾಪನೆ ಮಾಡಿ ಸಂಘದ ಬೆಳವಣಿಗೆಗೆ ಕಾರಣೀಕರ್ತರಾದವರಲ್ಲಿ ಬೊಳ್ಳಾಡಿ ಇಬ್ರಾಹಿಂರವರನ್ನು ನಾವು ಸ್ಮರಿಸಿಕೊಳ್ಳಬೇಕಾಗಿದೆ ಎಂದ ಅವರು, ಸಂಘದ ಸ್ಥಾಪಕ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಭಾವಚಿತ್ರವನ್ನು ಸಂಘದಲ್ಲಿ ಅನಾವರಣ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದರು. ಇದಲ್ಲದೆ ಸಂಘವು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದು ಅದರಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಸಲುವಾಗಿ ` ವಾರದ ಸಂತ’ ಆರಂಭಿಸಬೇಕು ಎಂಬ ಯೋಜನೆ ಇದೆ. ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ `ಸೂಪರ್ ಮಾರ್ಕೆಟ್’ ವ್ಯವಸ್ಥೆ ಹಾಗೂ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರವನ್ನು ಕೂಡ ಮುಂದಿನ ದಿನಗಳಲ್ಲಿ ಆರಂಭಿಸುವ ಯೋಚನೆ ಯೋಜನೆ ಇದೆ ಎಂದು ಸಭೆಗೆ ತಿಳಿಸಿದರು.

ಸದಸ್ಯರಿಂದ ಬಂದ ಬೇಡಿಕೆಗಳು
ಮೈಂದನಡ್ಕ ಭಾಗದಲ್ಲಿ ಸುಮಾರು 200 ಕ್ಕೂ ಅಧಿಕ ಮಂದಿ ಪಡಿತರದಾರರು ಇದ್ದಾರೆ. ಆದ್ದರಿಂದ ವಾರದಲ್ಲಿ ಒಂದು ದಿವಸ ಮೈಂದನಡ್ಕ ಭಾಗದಲ್ಲಿ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಆಗಬೇಕು ಎಂದು ಮಹಮ್ಮದ್ ಬಡಗನ್ನೂರು ಕೇಳಿಕೊಂಡರು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು. ಸಂಘದಿಂದ 53 ರೈತರಿಗೆ ಸಾಲ ಮನ್ನಾದ ಹಣ ಇನ್ನೂ ಬರಲಿಲ್ಲ ಆದ್ದರಿಂದ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಈ ಬಗ್ಗೆ ಬಹಳಷ್ಟು ಪ್ರಯತ್ನಗಳನ್ನು ಮಾಡಲಾಗಿದೆ. ಮತ್ತೊಮ್ಮೆ 53 ಮಂದಿಯ ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಿಕೊಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಸಿಬ್ಬಂದಿ ಉದಯಶಂಕರ ಕೆ.ಪಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕೆ, ನಿರ್ದೇಶಕರುಗಳಾದ ವಿನೋದ್ ಶೆಟ್ಟಿ ಅರಿಯಡ್ಕ, ನಿತೀಶ್ ಕುಮಾರ್ ಶಾಂತಿವನ, ವಾರಿಜಾಕ್ಷಿ ಪಿ.ಶೆಟ್ಟಿ, ಸಂತೋಷ್ ರೈ ಕೆ, ರಘುರಾಮ ಪಾಟಾಳಿ, ಸೂರ್ಯನಾರಾಯಣ, ಉಷಾ ನಾರಾಯಣ ಎಚ್, ಸೂರಪ್ಪ, ರಾಮಕೃಷ್ಣ ನಾಯ್ಕ ಮುಡಾಲ, ಸುಕುಮಾರ ಬಿ ಉಪಸ್ಥಿತರಿದ್ದರು. ಸಂಘದ ಶಾಖಾಧಿಕಾರಿ ರಾಜ್‌ಪ್ರಕಾಶ್ ರೈ ವಂದಿಸಿದರು. ನಾರಾಯಣ ಕುಕ್ಕುಪುಣಿ ಮತ್ತು ಸುಭಾಷ್ ರೈ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳಾದ ವೀಣಾ ಕೆ ರೈ, ರಾಜ್‌ಕಿರಣ್ ರೈ, ಭರತ್ ಎಸ್.ಎನ್, ಶಾಂತ ಕುಮಾರ, ವೆಂಕಪ್ಪ, ಹರ್ಷಿತಾ ಕೆ, ಹರೀಶ್, ಆಶಿಕಾ ಮತ್ತು ಕರುಣಾಕರ ಸಹಕರಿಸಿದ್ದರು.

ಸಾಧಕರಿಗೆ ಸನ್ಮಾನ
ಸಂಘದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ವಿಶೇಷ ಯೋಜನೆ ಮಾಡಲಾಗಿದ್ದು ಪದವಿ,ಸ್ನಾತಕೋತ್ತರ ಪದವಿಯಲ್ಲಿ ರ್‍ಯಾಂಕ್ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಗೌರವಾರ್ಪಣೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಪಡೆದ ಸದಸ್ಯರು, ಸದಸ್ಯರ ಮಕ್ಕಳನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 11 ಮಂದಿಯನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಸ್ತಾ ಶೆಟ್ಟಿ ಮುಡಾಲ, ಚಿತ್ರಕಲಾವಿದ ಉಮೇಶ್ ಬಿ.ಎಂ, ಎಂ.ಸಿ.ಎ ಯಲ್ಲಿ 3 ನೇ ರ್‍ಯಾಂಕ್ ಪಡೆದ ನೀಮಾ ಎಚ್, ಕರಾಟೆ ಪಟು ಚೈತನ್ಯ ರಾಜೇಶ್ವರಿ , ಬಿ.ಎಸ್.ಸಿಯಲ್ಲಿ 10 ನೇ ರ್‍ಯಾಂಕ್ ಪಡೆದ ರಮ್ಯಶ್ರೀ, ಕ್ರೀಡಾಪಟುಗಳಾದ ಅನುಶ್ರೀ ಯು.ಎಸ್, ಧನುಷಾ ಶೆಟ್ಟಿ ಜಿ, ಕೃತಿ ಶೆಟ್ಟಿ ಜಿ, ಕಬಡ್ಡಿ ಕ್ಷೇತ್ರದ ಪ್ರತಿಭೆಗಳಾದ ಖುಷಿ ರೈ ಮತ್ತು ಸುಪ್ರೀತಾ ಕೆ ಹಾಗೂ ಕಬಡ್ಡಿ ಪಟು ಪ್ರಶಾಂತ್ ರೈ ಕೈಕಾರ ಇವರುಗಳಲ್ಲಿ 6 ಮಂದಿ ಸಾಧಕರಿಗೆ ಹಾಗೂ ನಾಲ್ಕು ಮಂದಿ ಸಾಧಕರ ಅನುಪಸ್ಥಿತಿಯಲ್ಲಿ ಸಾಧಕರ ಹೆತ್ತವರಿಗೆ ಸನ್ಮಾನ ಮಾಡಲಾಯಿತು.

“ ಸಂಘದ ವಾರ್ಷಿಕ ವ್ಯವಹಾರ ಮತ್ತು ಲಾಭಾಂಶದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲಾಗಿದೆ. ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕರಿಸುತ್ತಿರುವ ಎಲ್ಲಾ ಠೇವಣಿದಾರರಿಗೆ, ಸಂಘದ ಸರ್ವ ಸದಸ್ಯರಿಗೆ, ಸಿಬ್ಬಂದಿ ವರ್ಗಕ್ಕೆ ಹಾಗೂ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.” ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಪ್ರಾ.ಕೃ.ಪ.ಸ.ಸಂಘ ಕುಂಬ್ರ

LEAVE A REPLY

Please enter your comment!
Please enter your name here