- ರಕ್ಷೆ ಕಪ್ಪಾಗಿದ್ದರಿಂದ ಆರೋಗ್ಯದ ದೃಷ್ಟಿಯಿಂದ ಮನೆಯಲ್ಲಿ ತೆಗೆದು ಬರಲು ಹೇಳಿದ್ದೆ :ತೆರೇಜ್ ಎಂ.ಸಿಕ್ವೇರಾ
- ಒಂದು ಬಾರಿ ಕಟ್ಟಿದ ರಕ್ಷೆಯನ್ನು ಮುಂದಿನ ವರ್ಷವೇ ತೆಗೆಯೋದು -ಪೋಷಕರಿಂದ ಮನವರಿಕೆ
- ಮಕ್ಕಳಿಗೆ ಮತ್ತೆ ರಕ್ಷೆ ಕಟ್ಟಲು ಅವಕಾಶ ಸುಖಾಂತ್ಯಗೊಂಡ ಪ್ರಕರಣ
ಪುತ್ತೂರು: ರಕ್ಷಾ ಬಂಧನ ದಿನದಂದು ಮಕ್ಕಳ ಕೈಗೆ ಕಟ್ಟಿದ್ದ ರಕ್ಷೆಯನ್ನು ತೆಗೆದು ಬರುವಂತೆ ಮುಖ್ಯಗುರುಗಳು ಹೇಳಿದ್ದರೆನ್ನುವುದನ್ನು ಮಕ್ಕಳ ಮೂಲಕ ತಿಳಿದುಕೊಂಡ ಪೋಷಕರು, ಎಸ್‌ಡಿಎಂಸಿಯವರು ಹಾಗೂ ಸ್ಥಳೀಯ ಕೆಲ ನಾಗರಿಕರು ಶಾಲೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿ, ಮುಖ್ಯಶಿಕ್ಷಕಿಯನ್ನು ಪ್ರಶ್ನಿಸಿದ ಮತ್ತು ಮುಖ್ಯ ಶಿಕ್ಷಕಿಯ ಒಪ್ಪಿಗೆಯ ಮೇರೆಗೆ ಶಾಲೆಯಲ್ಲಿ ಮತ್ತೆ ಮಕ್ಕಳಿಗೆ ರಕ್ಷೆ ಕಟ್ಟಿಸಿದ ಘಟನೆ ಪಾಪೆಮಜಲು ಶಾಲೆಯಲ್ಲಿ ಸೆ.19ರಂದು ನಡೆದಿದೆ.
ಪಾಪೆಮಜಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಾ ಬಂಧನ ದಿನದಂದು ವಿದ್ಯಾರ್ಥಿಗಳು ರಕ್ಷೆ ಕಟ್ಟಿಸಿಕೊಂಡಿದ್ದರು.ಇದಾದ ಕೆಲವು ದಿನಗಳ ಬಳಿಕ,ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷೆಯನ್ನು ಮನೆಯಲ್ಲಿ ಬಿಚ್ಚಿ ಬರುವಂತೆ ಶಾಲಾ ಮುಖ್ಯಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಅವರು ಮಕ್ಕಳಿಗೆ ತಿಳಿಸಿದ್ದರು.ಈ ವಿಚಾರ ಮಕ್ಕಳ ಪೋಷಕರು ಹಾಗೂ ಎಸ್‌ಡಿಎಂಸಿಯವರ ಗಮನಕ್ಕೆ ಬಂದಿತ್ತು.ಸೆ.18ರಂದು ಎಸ್‌ಡಿಎಂಸಿ ಅಧ್ಯಕ್ಷ, ಕೆಲ ಸದಸ್ಯರು, ಪೋಷಕರು ಹಾಗೂ ಸ್ಥಳೀಯ ಕೆಲವು ನಾಗರಿಕರು ಶಾಲೆಗೆ ತೆರಳಿ, ಮಕ್ಕಳ ಕೈಯಲ್ಲಿದ್ದ ರಕ್ಷೆಯನ್ನು ಬಿಚ್ಚಿ ಬರುವಂತೆ ಹೇಳಿದ್ದ ಕುರಿತು ಮುಖ್ಯಶಿಕ್ಷಕಿ ತೆರೇಜ್ ಎಂ ಸಿಕ್ವೇರಾ ಮತ್ತು ಇತರ ಶಿಕ್ಷಕರಲ್ಲಿ ವಿಚಾರಿಸಿದರು.
ಈ ವೇಳೆ ಆಗಮಿಸಿದವರ ಜೊತೆ ಮಾತನಾಡಿದ ಮುಖ್ಯಗುರು ತೆರೇಜ್ ಎಂ.ಸಿಕ್ವೇರಾರವರು, ಆ.11ರಂದು ರಕ್ಷಾ ಬಂಧನ ದಿನದಂದು ಮಕ್ಕಳು ಕೈಗೆ ರಕ್ಷೆ ಕಟ್ಟಿಕೊಂಡಿದ್ದು ಕೈಯಲ್ಲಿದ್ದ ರಕ್ಷೆ ಕಪ್ಪು ಬಣ್ಣಕ್ಕೆ ತಿರುಗಿದ್ದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅದನ್ನು ಮನೆಯಲ್ಲಿ ಬಿಚ್ಚಿ ಬರುವಂತೆ ಸೆ.2ರಂದು ಹೇಳಿದ್ದೆ ಹೊರತು ಬೇರೆ ಯಾವುದೇ ಉದ್ದೇಶದಿಂದ ಹೇಳಿಲ್ಲ ಎಂದು ಹೇಳಿದರು.ರಕ್ಷಾ ಬಂಧನವನ್ನು ರಕ್ಷಣೆಯ ಸಂಕೇತವಾಗಿ ಕಟ್ಟಲಾಗುತ್ತದೆ.ಈ ವರ್ಷ ಕಟ್ಟಿದ ರಕ್ಷೆಯನ್ನು ಮುಂದಿನ ವರ್ಷ ರಕ್ಷಾ ಬಂಧನ ದಿನದಂದು ಬಿಚ್ಚಿ ಹೊಸ ರಕ್ಷೆಯನ್ನು ಕಟ್ಟಲಾಗುತ್ತದೆ.ಅದರ ಮಧ್ಯೆ ಅದನ್ನು ಬಿಚ್ಚಿಡಲಾಗುವುದಿಲ್ಲ ಎಂದು ಪೋಷಕರು ರಕ್ಷಾ ಬಂಧನದ ಮಹತ್ವದ ಕುರಿತು ಶಿಕ್ಷಕರಿಗೆ ಮನವರಿಕೆ ಮಾಡಿದರು.ತನಗೆ ಈ ವಿಚಾರ ಗೊತ್ತಿರಲಿಲ್ಲ ಎಂದು ಹೇಳಿದ ಮುಖ್ಯಶಿಕ್ಷಕಿ ವಿಷಾದ ವ್ಯಕ್ತಪಡಿಸಿ ಬಳಿಕ ಮಕ್ಕಳಿಗೆ ರಕ್ಷೆ ಕಟ್ಟುವುದಕ್ಕೆ ಅವಕಾಶ ಮಾಡಿಕೊಟ್ಟರು.ಪೋಷಕರು ತಂದಿದ್ದ ರಕ್ಷೆಯನ್ನು ಶಾಲೆಯಲ್ಲಿ ಮಕ್ಕಳಿಗೆ ಕಟ್ಟುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ ಎಂದು ವರದಿಯಾಗಿದೆ.ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ ಮರತ್ತಮೂಲೆ, ಪೋಷಕರಾದ ರಾಜೇಶ್ ಪೆರಿಗೇರಿ, ನಾರಾಯಣ್ ಚಾಕೋಟೆ, ಬಾಲಕೃಷ್ಣ ಕುಂಞಕುಮೇರು,ಮತ್ತಿತರರು ಉಪಸ್ಥಿತರಿದ್ದರು.
ಮಕ್ಕಳ ಕೈಗೆ ಕಟ್ಟಿದ್ದ ರಕ್ಷೆಯನ್ನು ಬಿಚ್ಚಿ ಬರಲು ಮುಖ್ಯಶಿಕ್ಷಕಿ ಹೇಳಿದ್ದ ವಿಚಾರ ನಿನ್ನೆಯಷ್ಟೆ ನನಗೆ ತಿಳಿಯಿತು.ಈ ಕುರಿತು ಇಂದು ಪೋಷಕರು ನಾವೆಲ್ಲ ಸೇರಿ ಶಾಲೆಗೆ ತೆರಳಿ ಮುಖ್ಯಶಿಕ್ಷಕಿಯವರಲ್ಲಿ ವಿಚಾರಿಸಿದಾಗ, ಅವರು ಆರೋಗ್ಯದ ದೃಷ್ಟಿಯಿಂದ ರಕ್ಷೆಯನ್ನು ಬಿಚ್ಚಿ ಬರಲು ಹೇಳಿರುವುದಾಗಿ ಸ್ಪಷ್ಟನೆ ನೀಡಿ ವಿಷಾದ ವ್ಯಕ್ತಪಡಿಸಿದ್ದರು.ಒಟ್ಟು ಪ್ರಕರಣ ಗೊಂದಲವಿಲ್ಲದೆ ಸುಖಾಂತ್ಯ ಕಂಡಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ್ ಪೂಜಾರಿ ಮರತ್ತಮೂಲೆ ಪ್ರತಿಕ್ರಿಯಿಸಿದ್ದಾರೆ.