10.23 ಲಕ್ಷ ರೂ. ನಿವ್ವಳ ಲಾಭ; ಶೇ.13 ಡಿವಿಡೆಂಡ್ ಘೋಷಣೆ
ಪುತ್ತೂರು: ಕ್ಯಾಂಪ್ಕೋ ಚಾಕೊಲೇಟ್ ಕಾರ್ಖಾನೆ ಉದ್ಯೋಗಸ್ಥರ ಗೃಹ ನಿರ್ಮಾಣ ಸಹಕಾರ ಸಂಘದ 2021-22ನೇ ಸಾಲಿನ 17ನೇ ವಾರ್ಷಿಕ ಮಹಾಸಭೆ ಸೆ.18ರಂದು ಬೆಳಿಗ್ಗೆ ಕ್ಯಾಂಪ್ಕೋ ಚಾಕೋಲೇಟ್ ಕಾರ್ಖಾನೆಯ ವಠಾರದ ಹೊಸ ಕಟ್ಟಡದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿಕುಮಾರ್ ಕೆ., ಮಾತನಾಡಿ, 2021-22ನೇ ಸಾಲಿನಲ್ಲಿ ಸಂಘವು 10,23,099.61 ರೂ.,ನಿವ್ವಳ ಲಾಭಗಳಿಸಿದೆ. ಲಾಭಾಂಶವನ್ನು ಸಹಕಾರ ಸಂಘದ ನಿಬಂಧನೆಯ ಪ್ರಕಾರ ವಿಂಗಡಣೆ ಮಾಡಲಾಗಿದ್ದು ಸಂಘದ ಸದಸ್ಯರಿಗೆ ಶೇ.13ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಪ್ರತಿಭಾ ಪುರಸ್ಕಾರ:
ಕಳೆದ ಸಾಲಿನ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಂಘದ ಸದಸ್ಯ ವಾಸುದೇವ ಗೌಡರವರ ಪುತ್ರಿ ಭೂಮಿಕಾ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯ ಪ್ರಭಾಕರ ಎಸ್.,ರವರ ಪುತ್ರ ಪ್ರಣವ್ಗೆ ಪ್ರೋತ್ಸಾಹಕ ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಲ್ಲದೇ ಎಸ್ಎಸ್ಎಲ್ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ಆರು ವಿದ್ಯಾರ್ಥಿಗಳಿಗೆ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಸುಬ್ರಾಸ್ ಆರ್.ಎಂ., ನಿರ್ದೇಶಕರಾದ ಕೆ.ಚಂದ್ರಶೇಖರ ರಾವ್, ರವೀಂದ್ರ ಎ., ಪ್ರಮೋದ್ ಎಂ.ಐ., ತೀರ್ಥರಾಮ ಎಸ್., ರವಿ ಪೂಜಾರಿ, ರಾಜೇಶ್ ಟಿ., ವಿನುತಾ ವಿ.ಎಸ್., ಚೇತನಾ ಕುಮಾರಿ ಎನ್.ಎಸ್., ಪದ್ಮನಾಭ, ನಾರಾಯಣ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ವಿಚಾರಗಳ ಕುರಿತಂತೆ ಸಂಘದ ಸದಸ್ಯರು ಚರ್ಚೆ ನಡೆಸಿದರು. ಕಾರ್ಯದರ್ಶಿ ಪ್ರಶಾಂತ್ ಡಿ.ಎಸ್.,ಸ್ವಾಗತಿಸಿ, ವರದಿ ಮಂಡಿಸಿದರು.