ಪುತ್ತೂರು: ಆಟೋ ಚಾಲಕ ಸಂಚಾರಿ ಪೊಲೀಸರ ಸೂಚನೆಯನ್ನು ಪಾಲಿಸಲಿಲ್ಲವೆಂದು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಹಾಗೂ ಕಾನ್ಸ್ಟೇಬಲ್ ಓರ್ವರನ್ನು ಇಲಾಖಾ ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಅ.17 ರಂದು ಸಂಜೆ ಆಟೋ ಚಾಲಕ ಕುರಿಯದ ಬಶೀರ್ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿರುವಾಗ, ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಎ.ಎಸ್.ಐ ಚಿದಾನಂದ ರೈ, ಮತ್ತು ಸಿಪಿಸಿ ಶ್ರೀಶೈಲ ಎಂ ಕೆ, ಕೈ ಸನ್ನೆ ಮೂಲಕ ಅಟೋ ನಿಲ್ಲಿಸಲು ಸೂಚಿಸಿದ್ದರೂ, ಚಾಲಕ ಬಶೀರ್ ರಿಕ್ಷಾವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿದ್ದು ಪೊಲೀಸರು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಕುರಿತು ತನಿಖೆ ನಡೆಸಿದ ಮೇಲಾಧಿಕಾರಿಗಳು ಆರೋಪಿತ ಎಎಸ್ಐ ಚಿದಾನಂದ ರೈ ಮತ್ತು ಸಿಪಿಸಿ ಶ್ರೀಶೈಲ ಎಂ ಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ. ಜಿಲ್ಲಾ ಪೊಲೀಸ್ ಪ್ರಕಟಣೆ ಇದನ್ನು ಖಚಿತ ಪಡಿಸಿದೆ.