ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಪಂಪ್ ಹೌಸ್ ರಸ್ತೆ ತೀರಾ ಹದಗೆಟ್ಟು ಹೋಗಿದ್ದು, ತಕ್ಷಣ ಇದನ್ನು ದುರಸ್ತಿಗೊಳಿಸಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು 34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಗ್ರಾ.ಪಂ.ಗೆ ಎಚ್ಚರಿಕೆ ನೀಡಿದೆ.
ಪುತ್ತೂರಿಗೆ ನೀರು ಸರಬರಾಜು ಮಾಡುವ ಕುಮಾರಧಾರ ನದಿ ದಡದಲ್ಲಿರುವ ಪಂಪ್ ಹೌಸ್‌ಗೆ ಹೋಗುವ ರಸ್ತೆ ಇದಾಗಿದ್ದು, ಈ ಭಾಗದಲ್ಲಿ ಹಲವು ಮನೆಗಳಿವೆ. ಜಲಸಿರಿ ಯೋಜನೆಯಡಿ ಹೊಸ ಪೈಪ್ ಅಳವಡಿಕೆಗಾಗಿ ಈ ರಸ್ತೆಯನ್ನು ಈಗ ಅಗೆಯಲಾಗಿದ್ದು, ಆ ಬಳಿಕ ರಸ್ತೆಗೆ ಡಾಮರು ಆಗಲೀ, ಕಾಂಕ್ರೀಟ್ ಕಾಮಗಾರಿಯಾಗಲೀ ಮಾಡಿಲ್ಲ. ಇದರಿಂದಾಗಿ ಅಲ್ಲಲ್ಲಿ ಹೊಂಡಗುಂಡಿಗಳು ಉಂಟಾಗಿವೆಯಲ್ಲದೆ, ಮಳೆಯ ಸಂದರ್ಭದಲ್ಲಿ ರಸ್ತೆ ಕೆಸರುಮಯವಾಗಿರುತ್ತದೆ. ಆದ್ದರಿಂದ ಗ್ರಾ.ಪಂ. ತಕ್ಷಣ ಸ್ಪಂದಿಸಿ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು. ತಪ್ಪಿದ್ದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಖಲಂದರ್ ಶಾಫಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
೩೪ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಹಾಗೂ ಕಾರ್ಯದರ್ಶಿ ಸತೀಶ್ ಬಂಗೇರ ಮನವಿ ಸ್ವೀಕರಿಸಿದರು. ಮನವಿ ನೀಡಿದ ನಿಯೋಗದಲ್ಲಿ 34 ನೆಕ್ಕಿಲಾಡಿ ಯುವ ಕಾಂಗ್ರೆಸ್ ಅಧ್ಯಕ್ಷ ಫಯಾಝ್ ಗೂಡು, ಅನೀಸ್ ನೆಕ್ಕಿಲಾಡಿ, ಇಮ್ತಿಯಾಝ್ ಎ.ವೈ.ಎಂ. ಉಪಸ್ಥಿತರಿದ್ದರು.