ನೆಲ್ಯಾಡಿ: ಕಾರು ಡಿಕ್ಕಿಯಾಗಿ ಪಾದಚಾರಿಯೋರ್ವರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕದಲ್ಲಿ ಸೆ.17ರಂದು ಬೆಳಿಗ್ಗೆ ನಡೆದಿದೆ.
ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕಡ್ತಡ್ಕ ನಿವಾಸಿ ಶಶಿಧರ(46ವ.)ಗಾಯಗೊಂಡವರಾಗಿದ್ದಾರೆ. ಶಶಿಧರ ಅವರು ಸೆ.17ರಂದು ಬೆಳಿಗ್ಗೆ ಎಂಜಿರದಲ್ಲಿರುವ ಹಾಲಿನ ಡೈರಿಗೆ ಹಾಲು ನೀಡಿ ರಾಷ್ಟ್ರೀಯ ಹೆದ್ದಾರಿ 75ರ ಇಚಿಲಂಪಾಡಿ ಗ್ರಾಮದ ಲಾವತ್ತಡ್ಕ ಎಂಬಲ್ಲಿರುವ ಜಾರ್ಜ್ ಎಂಬವರ ಹೋಟೆಲ್ ಬಳಿ ಬೆಳಿಗ್ಗೆ 6.45ರ ವೇಳೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಾರಿನ ಎಡಬದಿಯ ಸೈಡ್ ಮಿರರ್ ಇವರಿಗೆ ತಾಗಿತ್ತು. ಪರಿಣಾಮ ಶಶಿಧರ ಅವರು ರಸ್ತೆಗೆ ಎಸೆಯಲ್ಪಟ್ಟು ಅವರ ಎಡಕಾಲಿನ ಮೊಣಗಂಟಿಗೆ ಗುದ್ದಿದ ಗಾಯವಾಗಿತ್ತು. ಆದರೆ ಡಿಕ್ಕಿಯಾದ ಕಾರನ್ನು ಅದರ ಚಾಲಕ ನಿಲ್ಲಿಸದೇ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿದ್ದು, ಡಿಕ್ಕಿಯಾದ ಕಾರನ್ನು ಶಿಬಾಜೆಯ ಮಾಧವ ಗೌಡ ಎಂಬವರು ನೋಡಿ ಗುರುತಿಸಿದ್ದು, ಸದ್ರಿ ಕಾರಿನ ನಂಬ್ರ ಕೆಎ 02 ಎಹೆಚ್ 5027 ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶಶಿಧರರವರು ಅದೇ ದಿನ ಪುತ್ತೂರು ಮಹಾವೀರ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ವಾಪಸ್ಸು ಮನೆಗೆ ಬಂದಿದ್ದು ಕಾಲಿಗೆ ಆದ ನೋವು ಉಲ್ಬಣಗೊಂಡ ಹಿನ್ನೆಲೆಯಲ್ಲಿ ಸೆ.19ರಂದು ಮತ್ತೆ ಪುತ್ತೂರು ಮಹಾವೀರ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗಾಯಾಳು ಶಶಿಧರ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279, 337 ಐಪಿಸಿ ಮತ್ತು ಕಲಂ:134 (ಎಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.