ಬೆಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಅನಾದಿಕಾಲದಿಂದ ಸಾಗುವಳಿ ಮಾಡುತ್ತಿರುವ ಕಾನೆ, ಬಾನೆ, ಕುಮ್ಕಿ ಜಮೀನುಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ.ಸಮಿತಿ ವರದಿ ಬಂದ ಬಳಿಕ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಬಿಜೆಪಿ ಶಾಸಕ ಪ್ರತಾಪಸಿಂಹ ನಾಯಕ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವ ಅಶೋಕ್ ಅವರು, ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನಬೆಟ್ಟ ಇತ್ಯಾದಿ ಸರಕಾರಿ ಜಮೀನುಗಳನ್ನು ಮಂಜೂರು ಮಾಡಲು ನೀತಿ ರೂಪಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಅದಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ಸಮಿತಿಯು ಈಗಾಗಲೆ ಹಲವು ಸಭೆ ಮಾಡಿದ್ದು, ಶೀಘ್ರದಲ್ಲಿ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಅನಂತರ ಸೂಕ್ತ ನೀತಿ ರೂಪಿಸಿ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.