ಪುತ್ತೂರು: ನಮ್ಮ ನಾಡಿನ ಸಂಸ್ಕೃತಿಯ ನೆಲೆ ಹಾಗೂ ಕಲೆಯ ಬೆಲೆಯನ್ನು ವಿಶ್ವದಾದ್ಯಂತ ಪಸರಿಸುವ ಕಾರ್ಯವನ್ನು ಯಕ್ಷಗಾನವು ನಡೆಸುತ್ತಿದೆ. ಎಳೆಯ ವಯಸ್ಸಿನಿಂದ ಈ ಕಲೆಯನ್ನು ಕಲಿತು ಕರಗತ ಮಾಡಿಕೊಂಡು ಬದುಕಿನಲ್ಲೂ ಭರವಸೆಯನ್ನು ಕಾಣಬಹುದು. ಉದ್ಯೋಗ, ಉದ್ಯಮದ ದೃಷ್ಟಿಯಲ್ಲಿಯೂ ಬೆಳೆಯಬಹುದು ಎಂದು ಉಪ್ಪಿನಂಗಡಿ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ ವಿ ಪ್ರಸಾದ್ ಹೇಳಿದರು.
ಅವರು ಯಕ್ಷನಂದನ ಕಲಾಸಂಘ ಗೋಕುಲನಗರ ಇದರ ವತಿಯಿಂದ ಅಂಡೆತಡ್ಕ ಹಿ.ಪ್ರಾ ಶಾಲೆಯಲ್ಲಿ ನಡೆದ ಬಣ್ಣಗಾರಿಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಅಂಚೆಪಾಲಕ ಕೆ ಸುಂದರ ಶೆಟ್ಟಿ ಮಾತನಾಡಿ, ಯಕ್ಷಗಾನದ ಅಧ್ಯಯನದ ಮೂಲಕ ಭಾಷೆಯ ಅರಿವು, ಪರಂಪರೆ ಇತಿಹಾಸದ ಜ್ಞಾನವನ್ನು ಮಕ್ಕಳು ಪಡೆಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಯಕ್ಷನಂದನ ಕಲಾಸಂಘದ ಅಧ್ಯಕ್ಷ ಗಣರಾಜ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಅಂಡೆತಡ್ಕ ಶಾಲೆಯ ಮುಖ್ಯಗುರು ಕೃಷ್ಣಪ್ಪ ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ, ಯಕ್ಷಗಾನ ಗುರು ಎಡಮಂಗಲ ಲಕ್ಷ್ಮಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ರಾಘು ಸ್ವಾಗತಿಸಿ, ಭಾಸ್ಕರ ಬಟ್ಟೋಡಿ ವಂದಿಸಿದರು. ಕೃಷ್ಣಮೂರ್ತಿ ಕೆ ನಿರೂಪಿಸಿದರು.