ಪುತ್ತೂರು: ಹಿಂದಿ ಭಾಷೆಯು ದೇಶದ ತಾಕತ್ ಆಗಿ ಮಾರ್ಪಟ್ಟಿದೆ. ವಿಶ್ವದಲ್ಲಿ ಹಿಂದಿ ಭಾಷೆಯು ಮೂರನೇ ಅತಿ ದೊಡ್ಡ ಭಾಷೆಯಾಗಿದ್ದು, ಹಿಂದಿ ಭಾಷೆಯು ಉದ್ಯೋಗ ಪೂರಕವಾಗಿಯೂ ಪರಿಣಾಮಕಾರಿಯಾಗಿ ಪರಿಣಮಿಸಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಭಗವತಿ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್ ಮಾಲಕ ಲೋಕೇಂದರ್ ಸಿಂಗ್ ಠಾಕೂರ್ ರವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹಿಂದಿ ಸಭಾದ ವತಿಯಿಂದ ಸೆ.24 ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿದ ರಾಷ್ಟ್ರೀಯ ಹಿಂದಿ ದಿವಸ್ ಆಚರಣೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿಂದಿ ಭಾಷೆಯು ಕಠಿಣ ಭಾಷೆ ಅಲ್ಲ. ಹಿಂದಿ ಭಾಷೆಯು ರಾಜ್ಯ ಭಾಷೆಯಾಗಿದ್ದು ಹಿಂದಿ ಭಾಷೆಗೆ 1949ರಲ್ಲಿ ಮಾನ್ಯತೆ ಲಭಿಸಿದ್ದು, 1953 ರಿಂದ ಹಿಂದಿ ದಿವಸ್ ಅನ್ನು ಆಚರಣೆ ಮಾಡಲಾಯಿತು. ಭಾರತದ ಉತ್ತರ ಭಾಗದಲ್ಲಿ ಹೆಚ್ಚು ಮಂದಿ ಹಿಂದಿ ಭಾಷೆಯನ್ನು ಬಳಸುತ್ತಿದ್ದು, ಭಾರತದಲ್ಲಿ ಸುಮಾರು 75 ಕೋಟಿಯಷ್ಟು ಜನ ಹಿಂದಿ ಭಾಷೆಯ ಮೂಲಕ ಸಂವಹನ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಯಾವುದೇ ಭಾಷೆ ಇರಲಿ, ಭಾಷೆಗೆ ಅದರದ್ದೇ ಆದ ಇತಿಹಾಸವಿದೆ, ಶ್ರೀಮಂತಿಕೆಯಿದೆ. ಹಿಂದಿ ಭಾಷೆಯಲ್ಲಿ ಶಾಯರಿಗಳು ಹೆಚ್ಚಾಗಿ ಕಂಡು ಬರುತ್ತದೆ. ಭಾಷೆಯು ಜನರನ್ನು ಒಗ್ಗೂಡಿಸುತ್ತದೆ ಮಾತ್ರವಲ್ಲದೆ ಮನುಷ್ಯನ ಮಧ್ಯೆ ಸಂವಹನ ಕೊಂಡಿಯಾಗಿ ಪರಿಣಮಿಸಿದೆ ಎಂದರು.
ಈ ಸಂದರ್ಭದಲ್ಲಿ ಹಿಂದಿ ಸಭಾದ ವತಿಯಿಂದ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಹಿಂದಿ ಸಭಾದ ನಿರ್ದೇಶಕರಾದ ಡಾ|ಆಶಾ ಸಾವಿತ್ರಿ ಹಾಗೂ ಸತೀಶ್ ಎಂ.ರವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಫುಲ್ಲ ಜ್ಯೋತ್ಸ್ನಾ ನೊರೋನ್ಹಾ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿ ಸಿಂಚನಾ ಜಿ ಸ್ವಾಗತಿಸಿ, ವಿದ್ಯಾರ್ಥಿ ಟಾಮ್ ಮ್ಯಾಥ್ಯೂ ವಂದಿಸಿದರು. ವಿದ್ಯಾರ್ಥಿ ನೋರ್ಮನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಭಾಷೆಗಳನ್ನು ನಾವು ಪ್ರೀತಿಸಿ ಪೋಷಿಸಬೇಕಾಗಿದೆ…
ಭಾರತ ದೇಶವು ವಿವಿಧತೆಯಲ್ಲಿ ಏಕತೆಗೆ ಪ್ರಸಿದ್ಧಿ ಪಡೆದಿದೆ ಮಾತ್ರವಲ್ಲದೆ ಸಾವಿರಾರು ಭಾಷೆಗಳ ಕಣಜವಾಗಿದೆ. ಎಲ್ಲಾ ಭಾಷೆಗಳನ್ನು ನಾವು ಪ್ರೀತಿಸಿ ಪೋಷಿಸಬೇಕಾಗಿದೆ. ಭಾರತದ ಅನೇಕ ಭಾಗಗಳಲ್ಲಿ ಹಿಂದಿ ಭಾಷೆಯು ಪ್ರಚಲಿತದಲ್ಲಿದ್ದರೂ, ಹಿಂದಿ ಭಾಷೆಯನ್ನು ಬಳಸುವಲ್ಲಿ ಸಾಮ್ಯತೆ ಹೊಂದಿದೆ. ಹಿಂದಿ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬಾರದಿದ್ದರೂ ಅದನ್ನು ಅರ್ಥೈಸುವುದಕ್ಕೆ ಸಾಧ್ಯವಾಗುತ್ತದೆ. ಫಿಲೋಮಿನಾ ಕ್ಯಾಂಪಸ್ಸಿನಲ್ಲಿ ಅನೇಕ ಮಂದಿ ಹಿಂದಿ ಭಾಷಿಗರಿದ್ದು ಅವರಲ್ಲಿ ಸ್ವಲ್ಪ ಸ್ವಲ್ಪ ಹಿಂದಿಯಲ್ಲಿ ಮಾತನಾಡಲು ಪ್ರಯತ್ನಿಸುವ ಮೂಲಕ ನನಗೂ ಈಗ ಹಿಂದಿ ಭಾಷೆಯಲ್ಲಿ ಸಂವಹನಗೈಯಲು ಸಾಧ್ಯವೆನಿಸಿದೆ-ವಂ|ಸ್ಟ್ಯಾನಿ ಪಿಂಟೋ, ಕ್ಯಾಂಪಸ್ ನಿರ್ದೇಶಕರು, ಸಂತ ಫಿಲೋಮಿನಾ ಕಾಲೇಜು