ಪುತ್ತೂರು: ಅಕ್ರಮವಾಗಿ ವಾಹನವೊಂದರಲ್ಲಿ ಜಾನುವಾರು ಸಾಗಾಟ ಮಾಡುತ್ತಿರುವ ವೇಳೆ ಮುರ ರೈಲ್ವೇ ಗೇಟ್ ಬಳಿ ಪೊಲೀಸರು ವಾಹನ ತಡೆದು ವಾಹನದಲ್ಲಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಸೆ.೨೫ರ ಬೆಳಗ್ಗಿನ ಜಾವ ನಡೆದಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಮತ್ತು ಎಸ್.ಐ ಶ್ರೀಕಾಂತ್ ರಾಥೋಡ್ ಅವರು ಬೆಳಿಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕೆದಿಲ ಕಡೆಯಿಂದ ಮುರ ರೈಲ್ವೇ ಗೇಟ್ ಬಳಿಯಿಂದ ಪುತ್ತೂರು ಮುಖ್ಯರಸ್ತೆಗೆ ಪಿಕಪ್ ವಾಹನ ಬರುತ್ತಿರುವುದನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಒಂದು ದನ, ಎರಡು ಹೋರಿ ಇರುವುದನ್ನು ಗಮನಿಸಿ ವಿಚಾರಿಸಿದಾಗ ಆರೋಪಿ ಕೆದಿಲದ ಅಬ್ಬಾಸ್ ಎಂಬವರು ಯಾವುದೇ ಪರವಾನಿಗೆ, ದಾಖಲೆ ಇಲ್ಲದೆ ಒಂದು ದನ ಮತ್ತು ಎರಡು ಹೋರಿಯನ್ನು ವಾಹನದಲ್ಲಿ ಸಾಗಾಗಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಪೊಲೀಸರು ಪಿಕಪ್ ವಾಹನ ಮತ್ತು ಜಾನುವಾರುಗಳನ್ನು ಸ್ವಾಧೀನ ಪಡಿಸಿಕೊಂಡು ಆರೋಪಿ ಅಬ್ಬಾಸ್ ಅವರನ್ನು ವಶಕ್ಕೆ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ.