@ ಸಿಶೇ ಕಜೆಮಾರ್
ಪುತ್ತೂರು: ತೆವಳುತ್ತಲೇ ಸಾಗುವ ಮಗಳು, ಕಣ್ಣಂಚಿನಲ್ಲಿ ಕಂಬನಿ ತುಂಬಿಕೊಂಡು ಕುಳಿತಿರುವ ತಾಯಿ. ಕೋಳಿ ಗೋಡಿನಂತಿರುವ ಬಾಡಿಗೆ ಕೊಠಡಿಯಲ್ಲಿ ಜೀವನ ಸಾಗಿಸುತ್ತಿರುವ ಈ ತಾಯಿ, ಮಗಳ ಬಡ ಕುಟುಂಬಕ್ಕೆ ಬೇಕಿದೆ ಆಸರೆಯ ಬೆಳಕು. ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಬಳಿಯಲ್ಲಿರುವ ಪಂಚಾಯತ್‌ನ ಕಟ್ಟಡವೊಂದರಲ್ಲಿ ಕಳೆದ 10 ವರ್ಷಗಳಿಂದ ಜೀವನ ನಡೆಸುತ್ತಿರುವ 75 ವರ್ಷದ ತಾಯಿ ಸೀತಮ್ಮ ಹಾಗೂ 55 ವರ್ಷದ ಮಗಳು ಬೇಬಿ. ಈ ತಾಯಿ, ಮಗಳ ಕುಟುಂಬ ತೀರಾ ಸಂಕಷ್ಟದಲ್ಲಿದೆ. ಬೇಬಿಗೆ ತನ್ನೆರಡು ಕಾಲುಗಳು ಸೊಂಟದಿಂದ ಬಲ ಕಳೆದುಕೊಂಡ ಪರಿಣಾಮ ನಡೆದಾಡಲು ಆಗದೆ ತೆವಳುತ್ತಲೇ ಸಾಗಬೇಕಾಗಿದೆ. ವಿಶೇಷ ಚೇತನೆಯಾಗಿರುವ ಇವರಿಗೆ ಸರಕಾರದಿಂದ ಬರುವ ಸಹಾಯಧನದಿಂದಲೇ ಇವರ ಜೀವನ ಸಾಗುತ್ತಿದೆ.
ರೇಷನ್ ಕಾರ್ಡ್, ಆಧಾರ್ ಕಾರ್ಡ್‌ಗಳಿಲ್ಲ
ಸರಕಾರದಿಂದ ದೊರೆಯುವ ಅಕ್ಕಿಯನ್ನು ಪಡೆದುಕೊಳ್ಳಬೇಕಾದರೆ ಇವರ ಹತ್ತಿರ ರೇಷನ್ ಕಾರ್ಡೇ ಇಲ್ಲದಾಗಿದೆ. ಇತರ ಸೌಲಭ್ಯಗಳನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಕೂಡ ಇಲ್ಲ. ಒಟ್ಟಿನಲ್ಲಿ ಸಹೃದಯಿ ದಾನಿಗಳು ಕೊಡುವ ಅಲ್ಪಸ್ವಲ್ಪ ಸಹಾಯದಿಂದ ಇವರ ಜೀವನ ಸಾಗುತ್ತಿದೆ. ಸಹೃದಯಿ ದಾನಿಗಳು ನಮಗೆ ಸಹಾಯ ಮಾಡುತ್ತಿದ್ದಾರೆ. ಕೊರೋನ ಕಾಲದಲ್ಲೂ ಕೆಲವು ಮಂದಿ ನಮಗೆ ಆಹಾರ ಧಾನ್ಯಗಳನ್ನು ಕೊಟ್ಟಿದ್ದಾರೆ ಎನ್ನುತ್ತಾರೆ ಸೀತಮ್ಮ. ಈ ಬಡಕುಟುಂಬಕ್ಕೆ ದಾನಿಗಳ ಸಹಾಯದ ಆಸರೆ ಬೇಕಾಗಿದೆ.
ಆಶಾ ದೀಪ ಸಹಾಯ ಹಸ್ತ ತಂಡದಿಂದ ನೆರವು: ಇವರ ಮನೆಗೆ ಕುಂಬ್ರದ ಆಶಾದೀಪ ಸಹಾಯ ಹಸ್ತ ತಂಡವು ಭೇಟಿ ನೀಡಿದ್ದು ರೇಷನ್ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಶಾದೀಪ ಸಹಾಯ ಹಸ್ತತಂಡದ ಶ್ಯಾಮ್‌ಸುಂದರ್ ರೈ ಕೊಪ್ಪಳ, ಮೆಲ್ವಿನ್ ಮೊಂತೆರೋ ಮತ್ತು ಸಂಶುದ್ದೀನ್ ಎ.ಆರ್ ಉಪಸ್ಥಿತರಿದ್ದರು. ಇವರಿಗೆ ನಮ್ಮಿಂದ ಸಾಧ್ಯವಾಗುವ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಂಡವು ಈ ಸಂದರ್ಭದಲ್ಲಿ ಭರವಸೆ ನೀಡಿತು.
ನಾವು ಬಹಳ ಕಷ್ಟದಲ್ಲಿದ್ದೇವೆ. ಪಂಚಾಯತ್ ಕಟ್ಟಡದ ಬಾಡಿಗೆ ರೂಮ್‌ನಲ್ಲಿದ್ದುಕೊಂಡು ತಿಂಗಳಿಗೆ 800 ರೂ.ಬಾಡಿಗೆ ಕಟ್ಟುತ್ತಿದ್ದೇವೆ. ಮಗಳಿಗೆ ನಡೆಯಲು ಆಗುತ್ತಿಲ್ಲ. ಊರ ಸಹೃದಯಿಗಳು ಅಲ್ಪಸ್ವಲ್ಪ ಸಹಾಯ ಮಾಡುತ್ತಿದ್ದಾರೆ. ನಮಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಉಳಿದುಕೊಳ್ಳಲು ಒಂದು ಮನೆಯ ಅವಶ್ಯಕತೆ ಇದೆ. ದಾನಿಗಳ ಸಹಕಾರ ಯಾಚಿಸುತ್ತಿದ್ದೇವೆ – ಸೀತಮ್ಮ
ಈ ಕುಟುಂಬವನ್ನು ನೋಡಿದಾಗ ಕಣ್ಣೀರು ಬರುತ್ತದೆ. ನಮ್ಮ ಆಶಾದೀಪ ಸಹಾಯ ಹಸ್ತ ಕುಂಬ್ರ ತಂಡವು ಇವರ ಬಾಡಿಗೆ ರೂಮ್‌ಗೆ ಭೇಟಿ ನೀಡಿದಾಗ ಇವರ ನಿಜ ಸ್ಥಿತಿ ಅರಿವಿಗೆ ಬಂತು. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವುದೂ ಇಲ್ಲ. ಬಾಡಿಗೆ ಕಟ್ಟಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಡಕುಟುಂಬದ ಬಗ್ಗೆ ಗಮನ ಹರಿಸಬೇಕಾಗಿದೆ – ಶ್ಯಾಮ್‌ಸುಂದರ ರೈ ಕೊಪ್ಪಳ, ಆಶಾದೀಪ ಸಹಾಯ ಹಸ್ತ ಕುಂಬ್ರ