- ಧಾರ್ಮಿಕತೆ, ಸಂಸ್ಕೃತಿ ಎರಡೂ ಜೊತೆಯಾಗಿ ಬೆಳೆಯಬೇಕು: ಒಡಿಯೂರು ಶ್ರೀ
ವಿಟ್ಲ: ಲಲಿತೆಯನ್ನು ಪೂಜಿಸುವ ಸುದಿನವಿದು. ಕಲೆಯನ್ನು ಪೋಷಣೆ ಮಾಡುವ ಕೆಲಸ ನವರಾತ್ರಿ ಕಾಲದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕಾಣಬಹುದು. ಧಾರ್ಮಿಕತೆ ಮತ್ತು ಸಂಸ್ಕೃತಿ ಎರಡೂ ಜೊತೆಯಾಗಿ ಬೆಳೆಯಬೇಕು. ದೇಶ ಎನ್ನುವಾಗ ಭಯದ ವಾತಾವರಣ ನಿರ್ಮಾಣವಾಗಿದೆ. ದೇಶದ ವಿಚಾರದಲ್ಲಿ ನಾವು ಎಚ್ಚರಿಕೆಯಿಂದ ಇದ್ದು, ರಾಷ್ಟ್ರ ಕಟ್ಟುವ ಕಾಯಕದಲ್ಲಿ ತೊಡಗಬೇಕು. ಸರಕಾರದ ತೀರ್ಮಾನವನ್ನು ನಾವು ಅಭಿನಂದಿಸಬೇಕಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಸಂಸ್ಥಾನದಲ್ಲಿ ಸೆ.೩೦ರಂದು ನಡೆದ ಶ್ರೀ ಲಲಿತಾ ಪಂಚಮಿ ಮಹೋತ್ಸವ ಶ್ರೀ ಚಂಡಿಕಾ ಯಾಗ ದ ಪ್ರಯುಕ್ತ ನಡೆದ ಧರ್ಮ ಸಭೆ ಹಾಗೂ ಕಲಾಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಜೀವನದಲ್ಲಿ ಆನಂದ ಮತ್ತು ಸಂತೋಷದ ಮನುಷ್ಯನ ಎರಡು ಕಣ್ಣುಗಳಿದ್ದಂತೆ. ಆದ್ಯಾತ್ಮದ ಬದುಕು ನಮ್ಮದಾಗಬೇಕು. ಆದ್ಯಾತ್ಮದ ವಿಚಾರ ಎಲ್ಲರಲ್ಲಿಯೂ ಉದಯಿಸಬೇಕು. ಧರ್ಮ, ಭಗವಂತನ ಬಗ್ಗೆ ಶ್ರದ್ದೆ ಹುಟ್ಟಿಸುವ ಕೆಲಸವಾಗಬೇಕು. ಪ್ರೀತಿಯ ಬಾವದೊಂದಿಗೆ ಬದುಕುವ ಮನಸ್ಸು ನಮ್ಮದಾಗಬೇಕು. ಆನಂದ ಮತ್ತು ಸಂತೋಷವನ್ನು ಯಾರು ಅನುಭವಿಸುತ್ತಾರೋ ಅವರೇ ನಿಜವಾದ ಸನ್ಯಾಸಿಗಳು. ಹೊಂದಾಣಿಕೆಯ ಬದುಕು ನಮ್ಮದಾಗಬೇಕು ಎಂದವರು ಹೇಳಿದರು.
ದ. ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷರಾದ ರವೀಂದ್ರ ಎಸ್ ಕಂಬಳಿರವರು ಮಾತನಾಡಿ ಕ್ಷೇತ್ರದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿಸುವುದು ನನ್ನ ಸುಯೋಗ. ಹಿಂದೂ ಸಮಾಜದ ಉಳಿವಿಗೆ ಸಾಧುಸಂತರ ಪಾತ್ರ ಬಹಳಷ್ಟಿದೆ. ಕಲೆಯನ್ನು ಉಳಿಸುವಲ್ಲಿ ಇಂತಹ ಸನ್ಮಾನಗಳ ಪಾತ್ರ ಮಹತ್ತರವಾದುದು. ಇನ್ನಷ್ಟು ಜನರಿಗೆ ಕ್ಷೇತ್ರದಿಂದ ಸನ್ಮಾನ ದೊರಕುವಂತಾಗಲಿ ಎಂದು ಶುಭಹಾರೈಸಿದರು.
ಪುತ್ತೂರು ಎ.ಪಿ. ಎಂ. ಸಿ.ಯ ಮಾಜಿ ಅಧ್ಯಕ್ಷರಾದ ರಾಧಾಕೃಷ್ಣ ರೈ ಬೂಡಿಯಾರುರವರು ಮಾತನಾಡಿ ಒಡಿಯೂರು ಸಂಸ್ಥಾನದಿಂದ ನಡೆಯುತ್ತಿರುವ ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಿಂದಾಗಿ ಕ್ಷೇತ್ರದ ಕೀರ್ತಿ ಹತ್ತೂರಿಗೆ ಪಸರಿಸಲು ಕಾರಣವಾಗಿದೆ. ಕಲೆಗೆ ನಿರಂತರವಾಗಿ ಪ್ರೋತ್ಸಾಹ ನೀಡುವ ಕೆಲಸ ಸಂಸ್ಥಾನದಿಂದಾಗಿದೆ. ಸ್ವಾಮೀಜಿ ದೂರದೃಷ್ಟಿತ್ವದಿಂದ ಮಾಡುತ್ತಿರುವ ಪ್ರತಿಯೊಂದೂ ಕೆಲಸದಲ್ಲಿ ಯಶಸ್ಸು ಹೆಚ್ಚಿದೆ. ಹಿಂದೂ ಸಮಾಜದ ಬೆಳವಣಿಗೆಗೆ ಶ್ರೀಗಳು ಮಾರ್ಗದರ್ಶಕರಾಗಿದ್ದಾರೆ. ತುಳುವಿನ ಉಳಿವಿಗೆ ಶ್ರೀಗಳ ಪಾತ್ರ ಅಪಾರವಾಗಿದೆ ಎಂದರು.
ಪ್ರಶಸ್ತಿ ಪುರಸ್ಕೃತ ಸೀತಾರಾಮ ಭಟ್ ಸೇರಾಜೆರವರು ಮಾತನಾಡಿ ನಮ್ಮ ಮನಸ್ಸು ತುಂಬಿ ಬರುತ್ತಿದೆ. ಶ್ರೀಗಳಿಂದ ಸನ್ಮಾನಿಸಿಕೊಂಡ ನಾವು ಧನ್ಯರಾದೆವು. ಕಲೆಗಾರರಿಗೆ ಸಂಸ್ಥಾನದಿಂದ ನೀಡುವ ಗೌರವ ನಮಗೆ ಶ್ರೀರಕ್ಷೆಯಾಗಿದೆ. ಹೇಳತೀರದಷ್ಟು ಸಮಾಜಮುಖಿ ಕಾರ್ಯಗಳು ಶ್ರೀಗಳಿಂದ ಆಗಿದೆ. ಎಲ್ಲಾ ಕಲಾವಿದರಿಗೆ ಶ್ರೀಗಳಿಂದ ಗೌರವ ಸನ್ಮಾನ ಪಡೆಯುವ ಯೋಗಭಾಗ್ಯ ಕೂಡಿಬರಲಿ ಎಂದರು.
ಖ್ಯಾತ ಯಕ್ಷಗಾನ ಅರ್ಥದಾರಿ, ಸಾಹಿತಿಗಳಾದ ಡಾ.ಕೆ.ರಮಾನಾಂದ ಬನಾರಿರವರು ಮಾತನಾಡಿ ನಾನಿಲ್ಲಿ ಬಂದಿರುವುದು ಸಾರ್ಥಕವಾಗಿದೆ. ದುಡಿಯುವ ಉತ್ಸಾಹವನ್ನು ಹೆಚ್ಚುಮಾಡುವ ಕೆಲಸ ಇಂತಹ ಸನ್ಮಾನದಿಂದ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಅರ್ಥದಾರಿ, ಸಾಹಿತಿಗಳಾದ ಡಾ.ಕೆ.ರಮಾನಾಂದ ಬನಾರಿ ಹಾಗೂ ಸೇರಾಜೆ ಸೀತಾರಾಮ ಭಟ್, ಯೋಗಗುರು ಕೆ.ಆನಂದ ಶೆಟ್ಟಿ ಅಳಿಕೆ, ಖ್ಯಾತ ಯಕ್ಷಗಾನ ಕಲಾವಿದ ರವಿ ಅಲೆವೂರಾಯ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು, ಯಕ್ಷಗಾನ ಭಾಗವತರಾದ ಶೇಖರ ಶೆಟ್ಟಿ ಬಾಯಾರುರವರಿಗೆ ಸ್ವಾಮೀಜಿಯವರು ಒಡಿಯೂರು ಶ್ರೀ ಕಲಾಸಿರಿ ಪ್ರಶಸ್ತಿ ಪ್ರಧಾನ ಮಾಡಿದರು. ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಸುರೇಶ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಹಶಿಕ್ಷಕಿಯರಾದ ವೇದಾವತಿ, ಪೂರ್ಣಿಮಾ, ಗಂಗಾ ಹಾವೇರಿ, ಸವಿತಾ ಎಂ., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕಿ ಲೀಲಾ ಪಾದೆಕಲ್ಲು, ಒಡಿಯೂರು ಜೈ ಗುರುದೇವ ಕಲಾಕೇಂದ್ರದ ಅಧ್ಯಕ್ಷರಾದ ಸುಬ್ರಹ್ಮಣ್ಯ ಕೆ.ಟಿ.ರವರು ಸನ್ಮಾನ ಪತ್ರ ವಾಚಿಸಿದರು. ಇದೇ ಸಂದರ್ಭದಲ್ಲಿ ಐದು ವರುಷ ಪೂರ್ತಿಗೊಳಿಸಿದ
ಪುತ್ತೂರು ತಾಲೂಕಿನಲ್ಲಿ ಒಂಬತ್ತು ಸ್ವಸಹಾಯ ಸಂಘಕ್ಕೆ ಲಾಭಾಂಶ ವಿತರಣೆ ಮಾಡಲಾಯಿತು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ ಪ್ರಾರ್ಥಿಸಿದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಸಂತೋಷ್ ಬಂಡಾರಿ ವಂದಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಸಂಸ್ಥಾನದಲ್ಲಿ ಗಣಪತಿ ಹವನ ನಡೆದು ಬಳಿಕ ಚಂಡಿಕಾಯಾಗ ಆರಂಭಗೊಂಡಿತು. ಮಧ್ಯಾಹ್ನ ಚಂಡಿಕಾಯಾಗದ ಪೂರ್ಣಾಹೂತಿ, ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ ೨.೩೦ರಿಂದ ಯಕ್ಷಪ್ರತಿಭೆ ಮಂಗಳೂರು ಇವರಿಂದ ಬೇಡರಕಣ್ಣಪ್ಪ ಯಕ್ಷಗಾನ ಬಯಲಾಟ ನಡೆಯಿತು.