ಪುತ್ತೂರು: ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಹಿಂದೂ ಧರ್ಮದ ಸಂಸ್ಕೃತಿ, ಸಂಸ್ಕಾರ, ಸದ್ವಿಚಾರಗಳನ್ನು ಕಲಿಸಿಕೊಡಬೇಕು. ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಈ ನಿಟ್ಟಿನಲ್ಲಿ ಪುತ್ತೂರು ದಸರಾ ಮಹೋತ್ಸವದಂತಹ ಕಾರ್ಯಕ್ರಮಗಳು ಹಿಂದು ಸಮಾಜದ ಉಳಿವಿಗೆ ಅಗತ್ಯ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಅವರು ಹೇಳಿದರು.
ನವದುರ್ಗಾರಾಧಾನಾ ಸಮಿತಿಯಿಂದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಅ.4ರಂದು ಸಂಜೆ ನಡೆದ ಪುತ್ತೂರು ದಸರಾ ಮಹೊತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜೀವನ ಮೌಲ್ಯಗಳ ಒಟ್ಟು ಸಾರವೇ ಧರ್ಮ ವಾಗಿದೆ. ಉದಾತ್ತ ಧರ್ಮ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ಜಗತ್ತಿನ ಏಕೈಕ ದೇಶ ಭಾರತವಾಗಿದೆ. ಇಂತಹ ಧರ್ಮ ಹಿಂದೂ ಧರ್ಮ ವಾಗಿದ್ದರೆ ಇಂತಹ ದೇಶ ಹಿಂದೂಸ್ಥಾನ ಅಥವಾ ಭಾರತ ದೇಶವಾಗಿದೆ ಹಾಗೂ ಇದನ್ನು ಹೇಳಿಕೊಳ್ಳಲು ಹಿಂದೂಗಳು ಹೆಮ್ಮೆ ಪಡಬೇಕಾಗಿದೆ. ಹಿಂದೂಗಳಾಗಿ ಹುಟ್ಟಿದ್ದಕ್ಕೆ ಹಾಗೂ ಇಂದು ಹಿಂದೂ ಸಂಸ್ಕೃತಿಯ ಪ್ರತಿನಿಧಿಗಳಾಗಿ ನಾವು ಬದುಕುತ್ತಿರುವುದು ಭಗವಂತನ ದಯೆಯಿಂದಲೇ ಸಾಧ್ಯವಾಗಿದೆ ಎಂದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅಧ್ಯಕ್ಷತೆ ವಹಿಸಿದ್ದರು. ಜಯಂತ ಶೆಟ್ಟಿ ಕಂಬಳತ್ತಡ್ಕ ಸ್ವಾಗತಿಸಿದರು. ರಾಜೇಶ್ ಬನ್ನೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.