ವಿಟ್ಲ: ಕೃಷಿಕರ ಬಾಳಿಗೆ ಕೊಳ್ಳಿ ಇಡುವ ಯೋಜನೆಗಳನ್ನು ಸರಕಾರ ಜಾರಿಗೆ ತಂದಿರುವುದು ಆಕ್ಷೇಪಾರ್ಹವಾಗಿದೆ. ಹೊರ ರಾಜ್ಯ, ದೇಶಗಳಿಗೆ ವಿದ್ಯುತ್ ವಿತರಣೆ ಮಾಡಲು ಹೋಗಿ ಕರ್ನಾಟಕದ ಕೃಷಿಕರ ಕೃಷಿ ಭೂಮಿಯನ್ನು ಹಾಳು ಮಾಡಲಾಗುತ್ತಿದೆ. ಜನರು ಈ ಬಗ್ಗೆ ಜಾಗೃತಿಯಾಗಿ ವಿರೋಧ ವ್ಯಕ್ತಪಡಿಸುವ ಅನಿವಾರ್ಯತೆ ಬಂದೊದಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತುರವರು ಹೇಳಿದರು. ಅವರು ಕೊಲ್ಲಪದವಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ- ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ವಿಟ್ಲದ ನೇತೃತ್ವದಲ್ಲಿ ನಡೆದ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ವಿಟ್ಲದ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ವಿದ್ಯುತ್ ಮಾರ್ಗ ವಿರೋಧಿಸಿ ಕಳೆದ ಹದಿನೈದು ತಿಂಗಳಿಂದ ವಿವಿಧ ಹೋರಾಟಗಳನ್ನು ನಡೆಸಲಾಗಿದೆ. ಬದುಕುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿರುವುದು ಸರಿಯಲ್ಲ. ಬಲಾತ್ಕಾರವಾಗಿ ರೈತರ ಭೂಮಿ ಕಸಿಯಲು ಮುಂದಾಗುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಕಾರ್ಯ ಪ್ರತಿಯೊಬ್ಬ ರೈತನೂ ಮಾಡಬೇಕಾಗಿದೆ ಎಂದರು.
ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಸಂತ್ರಸ್ತ ರೈತರಾದ ಲಕ್ಷ್ಮಣ ನೆಕ್ಕಿಲಾರು, ಚಿತ್ತರಂಜನ್ ಎನ್.ಎಸ್.ಡಿ., ಸುಂದರ ಗೌಡ, ಭಾಸ್ಕರ ಮಂಜಲಾಡಿ, ಶ್ರೀಧರ ಬೋಳಿಗಡೆ, ಶಿವರಾಮ ಬೋಳಿಗಡೆ, ರೋಹಿತಾಶ್ವ ಬಂಗ, ಲಕ್ಷ್ಮೀನಾರಾಯಣ ಮಂಜನಾಡಿ, ಸ್ಟ್ಯಾನಿ ಮಂಜಲಾಡಿ, ರೋಬರ್ಟ್ ಬೇಜಾತಿಮಾರು, ಪದ್ಮನಾಭ ಕೊಚೋಡಿ, ವಾಸು ಕೊಚೋಡಿ, ಅನಿಲ್ ರೇಗೊ ಕಲ್ಲಕಟ್ಟ, ಹರೀಶ್ ಕೇಪು, ವಿಷು ಮಂಜಲಾಡಿ, ಸಂಜೀವ ಮಂಜಲಾಡಿ, ರಾಮಣ್ಣ ಬಸವನಗುಡಿ, ಭಾಸ್ಕರ ಉಪಾಧ್ಯಾಯ, ಮೋಹನ್ ಭಂಡಾರಿ, ಮೋಹನ್ ಶೆಟ್ಟಿ, ಪ್ರದೀಪ್ ಭಂಡಾರಿ, ಬಂಟಪ್ಪ ಶೆಟ್ಟಿ, ನಾರಾಯಣ ಭಂಡಾರಿ, ಮಹಾಬಲ ಶೆಟ್ಟಿ ಮೂಡಂಬೈಲು, ಮೊಹಮ್ಮದ್ ಅಲಿ ಮಾದುಮೂಲೆ ಮೊದಲಾದವರು ಉಪಸ್ಥಿತರಿದ್ದರು.
ಕೊಲ್ಲಪದವು, ಕೇಪು, ವಿಟ್ಲ, ಮಂಗಿಲಪದವು, ಬಾಳ್ತಿಲ ಭಾಗದಲ್ಲಿ ಜನರ ಭೇಟಿ ಕಾರ್ಯ ಮಾಡಿ ವಿದ್ಯುತ್ ಮಾರ್ಗದಿಂದಾಗುವ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ನಿಡ್ಡೋಡಿಯಲ್ಲಿ ಇತ್ತೀಚೆಗೆ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ವಿಟ್ಲ ಹೋರಾಟ ಸಮಿತಿಯ ತಂಡ ಅಲ್ಲಿಗೆ ಬೇಟಿ ನೀಡಿತು. ಅಲ್ಲಿನ ಸಂತ್ರಸ್ತ ರೈತರ ಬೇಟಿ ಮಾಡಿ ಮಾಹಿತಿಯನ್ನು ಪಡೆದುಕೊಳ್ಳುವ ಕಾರ್ಯ ಮಾಡಲಾಯಿತು.