ಕೃಷಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಆರಂಭವಾದ ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ: ಸಂಜೀವ ಮಠಂದೂರು
ಪುತ್ತೂರು: ಪುತ್ತೂರಿನಲ್ಲಿ ಕ್ಯಾಂಪ್ಕೋವನ್ನು ಬಿಟ್ಟರೆ ಅಂತರಾಜ್ಯದಲ್ಲಿ ವ್ಯವಹರಿಸುವ ಸಂಸ್ಥೆ ಇದಾಗಿದೆ. ಕೇರಳ – ಕರ್ನಾಟಕ ರಾಜ್ಯದಲ್ಲಿ ಕೃಷಿಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಆರಂಭವಾದ ಈ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.
ಅವರು ಅ.10ರಂದು ಬೊಳುವಾರಿನಲ್ಲಿರುವ ಇನ್ ಲ್ಯಾಂಡ್ ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್ ನ ದ್ವಿತೀಯ ಮಹಡಿಯಲ್ಲಿ ಆರಂಭವಾದ ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ – ಆಪರೇಟಿವ್ ಸೋಸೈಟಿ ಲಿಮಿಟೆಡ್ ನ ಪುತ್ತೂರು ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಜಿಲ್ಲೆ ಸಹಕಾರಿಯ ಕಾಶಿಯಾಗಿದೆ. ಸಹಕಾರಿ ಸಂಘಗಳು ಕರ್ನಾಟಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಕಡಿಮೆ ಇಲ್ಲ ಎನ್ನುವ ಮಟ್ಟದಲ್ಲಿ ಸಹಕಾರಿ ಸಂಘಗಳು ಬೆಳೆದು ನಿಂತಿದೆ. ಅದರಲ್ಲೂ ಪುತ್ತೂರು ಸಹಕಾರಿ ಸಂಘಕ್ಕೆ ಬಹಳಷ್ಟು ದೊಡ್ಡ ಮಟ್ಟದಲ್ಲಿ ಕೊಡುಗೆಯನ್ನು ನೀಡಿದೆ. ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ-ಆಪರೇಟೀವ್ ಸೊಸೈಟಿ ಲಿಮಿಟೆಡ್ ಕೇರಳದಲ್ಲಿ ಆರಂಭಗೊಂಡು ಕರ್ನಾಟಕಕ್ಕೂ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಬಹಳ ಕಡಿಮೆ ಅವಧಿಯಲ್ಲಿ ಸಂಸ್ಥೆ ಇಷ್ಟೊಂದು ಬೆಳೆದಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಸಹಕಾರಿ ಬೆಳೆಯುವಲ್ಲಿ ಇದರ ಅಧ್ಯಕ್ಷರಾದ ರಾಹುಲ್ ಚಕ್ರಪಾಣಿ ಹಾಗೂ ಅವರ ತಂಡದ ಪರಿಶ್ರಮ ಮೆಚ್ಚುವಂತದ್ದು. ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದವರು ಹಾರೈಸಿದರು.
ನಗರಸಭಾ ಅಧ್ಯಕ್ಷರಾದ ಜೀವಂದಾರ್ ಜೈನ್, ವರ್ತಕ ಸಂಘದ ಅಧ್ಯಕ್ಷರಾದ ಜಾನ್ ಕುಟಿನ್ಹಾ ಕೃಷಿಕರೂ, ಉದ್ಯಮಿಯಾಗಿರುವ ಬಂಗಾರಡ್ಕ ರಾಮ್ ಭಟ್, ರೋಯಲ್ ಟ್ರಾವೆಂಕೂರ್ ಫ್ರಾರ್ಮರ್ ಪ್ರೋಡ್ಯೂಸರ್ ಕಂಪೆನಿ ದೀಪು ಮೋನ್ ಜೋಸೆಫ್,ಏರಿಯಾ ಮ್ಯಾನೇಜರ್ ಜಯಕುಮಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸನ್ನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕೃಷಿಕರ ಏಳಿಗೆಗಾಗಿ ಹುಟ್ಟು ಹಾಕಲಾದ ಸಂಸ್ಥೆ
ನಮ್ಮ ಈ ಸಹಕಾರಿಯ ಹುಟ್ಟು ಕೃಷಿಕರ ಏಳಿಗೆಯಾಗಿದೆ. ಮಣ್ಣಿನ ಮಕ್ಕಳ ರಕ್ಷಣೆ ನಮ್ಮ ಮೂಲ ಉದ್ದೇಶವಾಗಿದೆ. ಸರಕಾರದ ಸಹಕಾರದಿಂದ ಕೃಷಿಕರಿಗೆ ಉತ್ತಮ ಸೇವೆ ನೀಡಿರುವ ಸಂತೃಪ್ತಿ ನಮಗಿದೆ. ದಕ್ಷಿಣ ಕನ್ನಡ ಒಂದು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಆದ್ದರಿಂದ ಈ ಭಾಗದ ಜನರಿಗೆ ಉಪಕಾರಿಯಾಗಲೆಂದು ಪುತ್ತೂರಿನಲ್ಲಿ ಸಂಸ್ಥೆಯನ್ನು ತೆರೆಯಲಾಗಿದೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಒಂದು ಏಜೆನ್ಸಿ ಯಾಗಿ ನಮ್ಮ ಸಹಕಾರಿ ಕಾರ್ಯನಿರ್ವಹಿಸಲಿದೆ. ನಮ್ಮಲ್ಲಿ ಇಡುವ ಫಿಕ್ಸೆಡ್ ಡಿಪೋಸಿಟ್ ಗಳು ೧೦೦% ಸೆಕ್ಯೂರ್ ಡ್ ಆಗಿದೆ. ಕೇರಳದ ಕಣ್ಣೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ನಮ್ಮ ಈ ಸಹಕಾರಿ ಇದೀಗ ಪುತ್ತೂರಿನಲ್ಲಿ ೩೫ನೇ ಶಾಖೆಯನ್ನು ಪ್ರಾರಂಭಿಸಿದೆ. ಇದಕ್ಕೆ ಈ ಭಾಗದ ಜನರ ಎಲ್ಲಾ ಸಹಕಾರ ನಮಗೆ ಬೇಕಾಗಿದೆ.
ರಾಹುಲ್ ಚಕ್ರಪಾಣಿ
ಅಧ್ಯಕ್ಷರು
ಮಲಬಾರ್ ಮಲ್ಟಿ ಸ್ಟೇಟ್ ಆಗ್ರೋ ಕೋ – ಆಪರೇಟಿವ್ ಸೋಸೈಟಿ ಲಿಮಿಟೆಡ್ ಕಣ್ಣೂರು