ಪುತ್ತೂರು: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|ಗಣೇಶ್ ಭಟ್ ಕೋಂಬ್ರಾಜೆ ಮತ್ತು ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ|ಎ.ಪಿ.ರಾಧಾಕೃಷ್ಣ ರವರುಗಳನ್ನು ಮಂಗಳೂರು ಕಥೋಲಿಕ್ ಶಿಕ್ಷಣ ಮಂಡಳಿಯು ಕಾಲೇಜಿನ ನೂತನ ಉಪ ಪ್ರಾಂಶುಪಾಲರುಗಳಾಗಿ ನೇಮಕಗೊಳಿಸಿದೆ.
ಬೋಧನಾ ವೃತ್ತಿಯಲ್ಲಿ 34 ವರ್ಷಗಳ ಅನುಭವ ಹೊಂದಿರುವ ಪ್ರೊ|ಗಣೇಶ್ ಭಟ್ ಕೋಂಬ್ರಾಜೆರವರು ಮಂಗಳೂರು ವಿವಿಯಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂಫಿಲ್ ಪದವಿ ಪಡೆದಿದ್ದು, 1988ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ಗಣಿತ ಅಧ್ಯಾಪಕರಾಗಿ ನೇಮಕಗೊಂಡರು. ಪ್ರೊ|ಗಣೇಶ್ ಭಟ್‌ರವರು ಮಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಮಂಡಳಿ ಸದಸ್ಯರಾಗಿ, ಪರೀಕ್ಷಾ ಮಂಡಳಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ವಿವಿಯ ವ್ಯಾಪ್ತಿಗೆ ಸೇರಿದ ಸ್ವಾಯತ್ತ ಕಾಲೇಜುಗಳ ಅಧ್ಯಯನ ಮಂಡಳಿ ಹಾಗೂ ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಮಂಗಳೂರು ವಿವಿ ಗಣಿತಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ, ಕಾಲೇಜಿನ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ, ವಿಜ್ಞಾನ ಸಂಘದ ನಿರ್ದೇಶಕರಾಗಿ, ವಿದ್ಯಾರ್ಥಿ ಸಂಘದ ನಿರ್ದೇಶಕರಾಗಿ, ಕಾಲೇಜಿನ ಶಿಕ್ಷಕ ಸಂಘದ ಕಾರ್ಯದರ್ಶಿಯಾಗಿ, ರಕ್ಷಕ ಶಿಕ್ಷಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಪ್ರೊ|ಗಣೇಶ್ ಭಟ್‌ರವರು 2016ರಲ್ಲಿ ಕಾಲೇಜಿಗೆ ನ್ಯಾಕ್ ಸಮಿತಿಯ ಭೇಟಿಯ ಸಂದರ್ಭದಲ್ಲಿ ನ್ಯಾಕ್ ಸಂಯೋಜಕರಾಗಿದ್ದರು ಮಾತ್ರವಲ್ಲದೆ ಶಾಲೆ, ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿರುತ್ತಾರೆ.
ಬೋಧನಾ ವೃತ್ತಿಯಲ್ಲಿ 36 ವರ್ಷಗಳ ಅನುಭವ ಹೊಂದಿರುವ ಡಾ|ಎ.ಪಿ.ರಾಧಾಕೃಷ್ಣರವರು ತಮ್ಮ ಬಿಎಸ್ಸಿ ಪದವಿಯನ್ನು ಸಂತ ಫಿಲೋಮಿನಾ ಕಾಲೇಜು, ಎಂಎಸ್ಸಿ ಮತ್ತು ಪಿ.ಹೆಚ್.ಡಿ ಪದವಿಯನ್ನು ಮಂಗಳೂರು ವಿವಿಯಿಂದ ಪಡೆದಿದ್ದು, 1986ರಲ್ಲಿ ಫಿಲೋಮಿನಾ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿದರು. 2002-2010ರ ತನಕ ವಿವೇಕಾನಂದ ಕಾಲೇಜಿನಲ್ಲಿ ನಿಯೋಜನೆಯ ಮೇಲೆ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಇವರು 2014ರಿಂದ ಕಾಲೇಜಿನ ಆಂತರಿಕ ಶೈಕ್ಷಣಿಕ ಗುಣಮಟ್ಟಕೋಶದ(ಐಕ್ಯೂಎಸಿ) ನಿರ್ದೇಶಕರಾಗಿ, ಪ್ರಸ್ತುತ ಸುದ್ದಿ ಮತ್ತು ಪ್ರಸಾರ ವಿಭಾಗದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾಲೇಜಿನಲ್ಲಿ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿಜ್ಞಾನ ಸಂಕಿರಣ, ಕಾರ್ಯಾಗಾರಗಳನ್ನು ಸಂಯೋಜಿಸಿದ ಇವರಿಗೆ ವಿಜ್ಞಾನ ಬರವಣಿಗೆ ಮತ್ತು ಪ್ರಸಾರದಲ್ಲಿ ಹೆಚ್ಚಿನ ಆಸಕ್ತಿ. ಇವರ ವಿಜ್ಞಾನ ಲೇಖನಗಳು, ಅಂಕಣ ಬರಹಗಳು, ಪುಸ್ತಕಗಳು ಪ್ರಕಟವಾಗಿವೆ. ಪಿಲಿಕುಳ ವಿಜ್ಞಾನ ಕೇಂದ್ರದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿರುವ ಡಾ|ಎ.ಪಿ ರಾಧಾಕೃಷ್ಣರವರು ಕಾಲೇಜಿನಲ್ಲಿ ಹವ್ಯಾಸಿ ಖಗೋಳ ವೀಕ್ಷಕರ ಸಂಘವನ್ನು ಸ್ಥಾಪಿಸಿ, ಖಗೋಳ ವೀಕ್ಷಣೆಯ ಕಾರ್ಯಕ್ರಮಗಳನ್ನು ಸಂಘಟಿಸಿರುತ್ತಾರೆ. ಡಾ|ಎ.ಪಿ ರಾಧಾಕೃಷ್ಣರವರು ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಮತ್ತು ಪರೀಕ್ಷಾ ಮಂಡಳಿಯ ಸದಸ್ಯರಾಗಿ, ಮಂಗಳೂರು ವಿವಿ ಭೌತಶಾಸ್ತ್ರ ಶಿಕ್ಷಕರ ಸಂಘದ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆಗಾಗಿ ಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿಯಿಂದ ಅನುದಾನ ಪಡೆದಿರುತ್ತಾರೆ.
ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್, ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋ, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಉಪ ಪ್ರಾಂಶುಪಾಲರಾಗಿ ನೇಮಕಗೊಂಡ ಪ್ರೊ|ಗಣೇಶ್ ಭಟ್ ಕೋಂಬ್ರಾಜೆ ಮತ್ತು ಡಾ|ಎ.ಪಿ.ರಾಧಾಕೃಷ್ಣರವರನ್ನು ಅಭಿನಂದಿಸಿ, ಶುಭಹಾರೈಸಿರುತ್ತಾರೆ.