ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಕಾಲೇಜಿನ ಪ್ರಾಂಶುಪಾಲ ವಂ|ಡಾ| ಆಂಟನಿ ಪ್ರಕಾಶ್ ಮೊಂತೇರೊರವರ ಮಾರ್ಗದರ್ಶನದಲ್ಲಿ, ಕಾಲೇಜು ಕ್ಯಾಂಪಸ್ ನಿರ್ದೇಶಕ ಸ್ಟ್ಯಾನಿ ಪಿಂಟೋರವರ ಸಹಕಾರದಲ್ಲಿ ಅ.22 ರಂದು ಪ್ರಜಾಸತ್ತಾತ್ಮಕ ರೀತಿಯಲ್ಲಿ ಹಾಗೂ ಕಾನೂನು ನೀತಿ ಸಂಹಿತೆಯಾಗಿ ನಡೆಯಿತು.
ಅಧ್ಯಕ್ಷರಾಗಿ ಅಂತಿಮ ಬಿ.ಕಾಂ ವಿಭಾಗದ ಮೊಹಮದ್ ಆಶಿಕ್, ಕಾರ್ಯದರ್ಶಿಯಾಗಿ ಅಂತಿಮ ಬಿಸಿಎ ವಿಭಾಗದ ಅನುಶ್ರೀ, ಜೊತೆ ಕಾರ್ಯದರ್ಶಿಯಾಗಿ ಅಂತಿಮ ಬಿ.ಕಾಂ ವಿಭಾಗದ ಶಿವಾನಿ ಎಂ.ರವರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಬಿಸಿಎ ವಿಭಾಗದ ಜೋನ್ವಿಸ್ಟನ್ ಟೈಟಸ್ ಡಾಯಸ್, ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಎಸ್ಸಿ ವಿಭಾಗದ ರಕ್ಷಾ ಅಂಚನ್, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಎಸ್ಸಿ ವಿಭಾಗದ ನಯನಾರವರು ಸ್ಪರ್ಧಿಸಿದ್ದರು.
ವಿಜೇತ ಆಭ್ಯರ್ಥಿಗಳ ಘೋಷಣೆಯ ಬಳಿಕ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು, ಚುನಾಯಿತ ಪದಾಧಿಕಾರಿಗಳು ಕಾಲೇಜಿನ ಧ್ಯೇಯೋದ್ಧೇಶಗಳನ್ನು ಅರಿತು ಅವನ್ನು ಪಾಲನೆ ಮಾಡುವ ಮೂಲಕ ಸಹಕರಿಸುವಂತಾಗಬೇಕು. ಕಾಲೇಜಿನ ಪ್ರಾಧ್ಯಾಪಕರೊಂದಿಗೆ ಹಾಗೂ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸಕರಾತ್ಮಕವಾಗಿ ಸ್ಪಂದಿಸುತ್ತಾ ಕಾಲೇಜಿನ ಅಭಿವೃದ್ಧಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿ ವಿಜೇತ ಆಭ್ಯರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ|ಚಂದ್ರಶೇಖರ್ ಮತ್ತು ಭಾರತಿ ಎಸ್ ರೈಯವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಉಪಪ್ರಾಂಶುಪಾಲರುಗಳಾದ ಡಾ|ಎ.ಪಿ ರಾಧಾಕೃಷ್ಣ ಹಾಗೂ ಪ್ರೊ|ಗಣೇಶ್ ಭಟ್ ರವರ ಉಪಸ್ಥಿತಿಯಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳಾದ ಡಾ|ವಿಜಯ ಕುಮಾರ್ ಮೊಳೆಯಾರ್, ವಿನಯಚಂದ್ರ, ಡಾ•ರಾಧಾಕೃಷ್ಣ ಗೌಡ, ಪ್ರೊ|ವಾಸುದೇವ ಎನ್ ಮತ್ತು ಪ್ರಾಧ್ಯಾಪಕ ವರ್ಗ ಹಾಗೂ ಆಡಳಿತ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಚುನಾವಣಾ ಪ್ರಕ್ರಿಯೆಗೆ ಅಂತಿಮ ಮುದ್ರೆ ನೀಡಲಾಯಿತು.