ಉಪ್ಪಿನಂಗಡಿ: ಕೃಷಿ ಬದುಕಿಗೆ ಪೂರಕವಾಗಿ ಜಾನುವಾರು, ಆಡು, ಹಂದಿ, ಕೋಳಿ ಸಾಕಾಣಿಕೆ ಮೊದಲಾದ ಉಪಕಸುಬುಗಳನ್ನು ರೈತಾಪಿ ವರ್ಗ ಮಾಡಿಕೊಂಡು ಬರುವುದು ಸಾಮಾನ್ಯ. ಸಾಕು ಪ್ರಾಣಿಗಳು ಕಾಯಿಲೆ ಬಿದ್ದರೆ ಅದರ ಚಿಕಿತ್ಸೆಗೆಂದು ಸರಕಾರ ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯಗಳನ್ನೂ ಸರಕಾರ ಕಟ್ಟಿಸುತ್ತದೆ. ಇಂತದ್ದೇ ಪಶು ಆಸ್ಪತ್ರೆಯೊಂದು ಪುತ್ತೂರು ತಾಲೂಕಿನ ಹೋಬಳಿ ಕೇಂದ್ರವಾದ ಉಪ್ಪಿನಂಗಡಿಯಲ್ಲಿದ್ದು, ಇದು ಮಾತ್ರ ಖಾಯಂ ವೈದ್ಯರು, ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ರೈತಾಪಿ ವರ್ಗಕ್ಕೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಮೊದಲಿಗೆ ಪಶು ಚಿಕಿತ್ಸಾಲಯವಾಗಿದ್ದ ಇದನ್ನು ಈಗ ಮೇಲ್ದರ್ಜೆಗೇರಿಸಲಾಗಿದ್ದು, ಇದೀಗ ಇದು ಪಶು ಆಸ್ಪತ್ರೆಯಾಗಿ ಬದಲಾಗಿದೆ. ಆರ್‌ಡಿಎಫ್‌ಐ ಯೋಜನೆಯಡಿ ಉತ್ತಮ ಕಟ್ಟಡ ನಿರ್ಮಾಣವೂ ಆಗಿ ೨೦೧೮ರ ನವೆಂಬರ್‌ನಲ್ಲಿ ಉದ್ಘಾಟನೆಗೊಂಡಿದೆ. ಈ ಆಸ್ಪತ್ರೆಯು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಇರುವ ಉಪ್ಪಿನಂಗಡಿ, ಬಜತ್ತೂರು ಹಾಗೂ ಹಿರೇಬಂಡಾಡಿ ಗ್ರಾಮ ವ್ಯಾಪ್ತಿಯನ್ನು ಇದು ಒಳಗೊಂಡಿದೆ. ಇಲ್ಲಿಗೆ ಒಂದು ಮುಖ್ಯ ಪಶು ವೈದ್ಯಾಧಿಕಾರಿ ಹುದ್ದೆಯಿದ್ದು, ಈ ಪಶು ಆಸ್ಪತ್ರೆಯ ಅಧೀನದಲ್ಲಿರುವ ನೆಲ್ಯಾಡಿ ಮತ್ತು ಶಿರಾಡಿ ಪಶು ಚಿಕಿತ್ಸಾಲಯಗಳೂ ಅವರ ಕಾರ್ಯವ್ಯಾಪ್ತಿಗೊಳಪಡುತ್ತಿವೆ. ಉಪ್ಪಿನಂಗಡಿಯ ಪಶು ಆಸ್ಪತ್ರೆಯಲ್ಲಿ ಒಂದು ಮುಖ್ಯ ಪಶು ವೈದ್ಯಾಕಾರಿ ಹುದ್ದೆ ಸೇರಿದಂತೆ ಒಂದು ಜಾನುವಾರು ಅಧಿಕಾರಿ ಹುದ್ದೆ, ೨ ಡಿ ದರ್ಜೆ ನೌಕರರ ಹುದ್ದೆ ಸರಕಾರದಿಂದ ಮಂಜೂರಾಗಿದೆ. ಆದರೆ ಇಲ್ಲಿರುವ ಎಲ್ಲಾ ಹುದ್ದೆಗಳು ಮಾತ್ರ ಸರಕಾರದ ನೇಮಕಾತಿ ನಡೆಯದೇ ಖಾಲಿ ಬಿದ್ದಿವೆ. ಇಲ್ಲಿ ಈಗ ಮುಖ್ಯ ಪಶು ವೈದ್ಯಾಕಾರಿಯೋರ್ವರು ಕರ್ತವ್ಯ ನಿರ್ವಹಿಸುತ್ತಿದ್ದಾರಾದರೂ, ಅವರು ಇಲ್ಲಿ ಖಾಯಂ ನೇಮಕಾತಿ ಆದವರಲ್ಲ. ಪ್ರಭಾರ ನೆಲೆಯಲ್ಲಿ ಇಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿರುವುದು. ಆದ್ದರಿಂದ ಅವರು ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಲಭ್ಯವಾಗುವುದು ಸೋಮವಾರ, ಶುಕ್ರವಾರ ಹೀಗೆ ವಾರದಲ್ಲಿ ಎರಡು ದಿನ ಮಾತ್ರ. ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರರ ವ್ಯಾಪ್ತಿ ಬರುವ ಇಲ್ಲಿನ ಆಸ್ಪತ್ರೆಯಲ್ಲಿ ಜಾನುವಾರು ಅಧಿಕಾರಿ ಹುದ್ದೆ ಖಾಲಿಯಿದೆ. ಇನ್ನು ಎರಡು ಡಿ ದರ್ಜೆ ನೌಕರರ ಹುದ್ದೆ ಇಲ್ಲಿದ್ದರೂ ಒಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಕೂಡಾ ಹೊರಗುತ್ತಿಗೆಯ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಮತ್ತೊಂದು ಹುದ್ದೆ ಖಾಲಿ ಇದೆ.
ಅಧೀನ ಚಿಕಿತ್ಸಾಲಯಗಳೂ ಖಾಲಿ!: ಉಪ್ಪಿನಂಗಡಿ ಪಶು ಆಸ್ಪತ್ರೆಯ ಅಧೀನಕ್ಕೆ ನೆಲ್ಯಾಡಿ ಮತ್ತು ಶಿರಾಡಿ ಪ್ರಾಥಮಿಕ ಪಶು ಚಿಕಿತ್ಸಾಲಯಗಳು ಬರುತ್ತಿದ್ದು, ಈ ಎರಡು ಪಶು ಚಿಕಿತ್ಸಾಲಯಗಳಲ್ಲಿ ತಲಾ ಒಬ್ಬರಂತೆ ಇಬ್ಬರು ಪಶು ವೈದ್ಯ ಪರೀಕ್ಷಕರು, ತಲಾ ಇಬ್ಬರಂತೆ ನಾಲ್ಕು ಮಂದಿ ಡಿ ದರ್ಜೆ ನೌಕರರ ಹುದ್ದೆ ಇದೆ. ಆದರೆ ಹುದ್ದೆ ಇದ್ದರೂ ಅದಕ್ಕೆ ನೇಮಕಾತಿ ನಡೆಯದೇ ಇಲ್ಲಿಯೂ ಎಲ್ಲಾ ಹುದ್ದೆಗಳು ಖಾಲಿಯಿವೆ. ಆದ್ದರಿಂದ ಈ ಭಾಗದಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಹೊಣೆಯಲ್ಲಿ ಇಲ್ಲಿರುವ ಪ್ರಭಾರ ವೈದ್ಯರೇ ಹೊರಿಸಿಕೊಳ್ಳಬೇಕಿದೆ. ಮೊದಲೇ ವಾರದಲ್ಲಿ ಎರಡು ದಿನ ಮಾತ್ರ ಇಲ್ಲಿಗೆ ಬರುವ ಅವರಿಗೆ ಎಲ್ಲವನ್ನೂ ಸಕಾಲದಲ್ಲಿ ನಿಭಾಯಿಸಲು ಕಷ್ಟಸಾಧ್ಯವಾಗಿದೆ. ಇದು ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಕೃಷಿ ಪ್ರಧಾನ ಕ್ಷೇತ್ರ: ಉಪ್ಪಿನಂಗಡಿ ಪಶು ಆಸ್ಪತ್ರೆಗೆ ಒಳಪಡುವ ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ ಗ್ರಾಮಗಳು ಕೃಷಿ ಪ್ರಧಾನ ಗ್ರಾಮಗಳಾಗಿವೆ. ಆರ್ಥಿಕ ಸ್ವಾವಲಂಬನೆಗಾಗಿ ರೈತರು ಜಾನುವಾರು ಸಾಕಣೆ, ಆಡು, ಹಂದಿ, ಕೋಳಿ ಸಾಕಾಣಿಕೆಯನ್ನು ಮಾಡುತ್ತಾರೆ. ೨೦೨೦ರ ಜಾನುವಾರು ಸರ್ವೇಯ ಪ್ರಕಾರ ೪,೫೬೦ ದನಗಳು ಹಾಗೂ ೨೪ ಎಮ್ಮೆಗಳು ಈ ಭಾಗದಲ್ಲಿವೆ. ಆದರೆ ತಮ್ಮ ಸಾಕು ಪ್ರಾಣಿಗಳಿಗೆ ಕಾಯಿಲೆ ಬಂದರೆ ಸಿಬ್ಬಂದಿ ಕೊರತೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಮಾತ್ರ ಲಭ್ಯವಾಗದ ಸ್ಥಿತಿ ಇಲ್ಲಿದೆ. ಆದ್ದರಿಂದ ರೈತರು ಸಾಕು ಪ್ರಾಣಿಗಳ ಚಿಕಿತ್ಸೆಗಾಗಿ ಖಾಸಗಿ ಜಾನುವಾರು ವೈದ್ಯರ ಬಳಿ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಲಸಿಕೆ ನೀಡುವುದೇ ಕಷ್ಟದ ಕೆಲಸ! : ಸರಕಾರದ ವತಿಯಿಂದ ಉಚಿತವಾಗಿ ಜಾನುವಾರುಗಳಿಗೆ ವರ್ಷದಲ್ಲಿ ಎರಡು ಬಾರಿ ಕಾಲು ಬಾಯಿ ಜ್ವರಕ್ಕೆ ಲಸಿಕೆ ನೀಡಬೇಕು. ಜಾನುವಾರು ಇರುವ ರೈತರ ಮನೆಗೆ ತೆರಳಿ ಜಾನುವಾರುಗಳಿಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಆದರೆ ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದ ಮೂರು ಗ್ರಾಮದಲ್ಲಿ ಈ ಲಸಿಕೆ ನೀಡಿ ಮುಗಿಸುವಾಗ ಹೈರಾಣಾಗುವ ಸರದಿ ಪಶು ವೈದ್ಯರದ್ದಾಗಿರುತ್ತದೆ. ಸಿಬ್ಬಂದಿಯ ಕೊರತೆಯಿಂದಾಗಿ ಇಲ್ಲಿ ಲಸಿಕೆ ನೀಡಲು ಕೆಎಂಎಫ್ ಸೇರಿದಂತೆ ಇತರ ಸಂಸ್ಥೆಗಳ ಕೃತಕ ಗರ್ಭಧಾರಣಾ ಕಾರ್ಯಕರ್ತರ ಮೊರೆ ಹೋಗಬೇಕಾಗುತ್ತದೆ. ಇನ್ನು ಜಾನುವಾರುಗಳು ಬೆದೆಗೆ ಬಂದಾಗ ಕೆಲವೊಮ್ಮೆ ಸಕಾಲದಲ್ಲಿ ಅದಕ್ಕೆ ಕೃತಕ ಗರ್ಭಧಾರಣೆ ನಡೆಸಲು ಸಿಬ್ಬಂದಿ ಕೊರತೆಯಿಂದಾಗಿ ಆಗುತ್ತಿಲ್ಲ. ಜಾನುವಾರು, ಆಡು ಸಾಕಣೆಗೆ ಸರಕಾರದ ಸಹಾಯಧನ ಪಡೆಯಲು ರೈತರಿಗೆ ಮುಖ್ಯ ಪಶು ವೈದ್ಯಾಕಾರಿಯವರ ಸಹಿ ಬೇಕು. ಜಾನುವಾರುಗಳು ಕಾಯಿಲೆ ಬಿದ್ದಾಗ ವೈದ್ಯರ ಸೂಕ್ತ ಸಲಹೆ ಸೂಚನೆಗಳು ಬೇಕು. ಆದರೆ ಇಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯವರು ವಾರದಲ್ಲಿ ಎರಡು ದಿನ ಮಾತ್ರ ಇಲ್ಲಿರುವುದರಿಂದ ಉಳಿದ ದಿನಗಳಲ್ಲಿ ರೈತರು ಸಮಸ್ಯೆಯನ್ನೆದುರಿಸಬೇಕಾಗುತ್ತದೆ. ಒಟ್ಟಿನಲ್ಲಿ ಇಲ್ಲಿರುವ ಪಶು ಆಸ್ಪತ್ರೆಯ ಸಿಬ್ಬಂದಿ ಕೊರತೆಯಿಂದ ಹೈನುಗಾರರ ಪಾಲಿಗೆ ಇಲ್ಲಿನ ಪಶು ವೈದ್ಯಕೀಯ ಆಸ್ಪತ್ರೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಆದ್ದರಿಂದ ಇಲ್ಲಿ ಖಾಯಂ ವೈದ್ಯಾಧಿಕಾರಿ ಸೇರಿದಂತೆ ಖಾಯಂ ಸಿಬ್ಬಂದಿಯನ್ನು ನೇಮಕಾತಿ ಮಾಡಬೇಕು. ಈ ಮೂಲಕ ಹೈನುಗಾರರ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದೇ ಇಲ್ಲಿನ ರೈತಾಪಿ ವರ್ಗದ ಪ್ರಮುಖ ಬೇಡಿಕೆಯಾಗಿದೆ.
ನಾನು ಪಾಣಾಜೆ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿದ್ದು, ಕೊಳ್ತಿಗೆ, ನರಿಮೊಗರು ಹಾಗೂ ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಪ್ರಭಾರ ನೆಲೆಯಲ್ಲಿ ಬಂದು ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದರ ನಡುವೆ ಇಲಾಖಾ ಮೀಟಿಂಗ್, ಕೆಡಿಪಿ ಸಭೆಗಳಿಗೂ ತೆರಳಬೇಕಾಗುತ್ತದೆ. ಆದ ಕಾರಣ ಉಪ್ಪಿನಂಗಡಿಯಲ್ಲಿ ನಾನು ವಾರದಲ್ಲಿ ಎರಡು ದಿನ ಮಾತ್ರ ಲಭ್ಯವಿರುತ್ತೇನೆ. ಇಲ್ಲಿ ಗುತ್ತಿಗೆ ಆಧಾರದಲ್ಲಿ ಓರ್ವ ಡಿ ದರ್ಜೆ ನೌಕರ ಬಿಟ್ಟರೆ ಉಳಿದೆಲ್ಲಾ ಹುದ್ದೆಗಳು ಖಾಲಿಯಾಗಿವೆ. ಮೇಕೆ, ಕೋಳಿ ಮುಂತಾದ ಸಣ್ಣ ಸಾಕು ಪ್ರಾಣಿಗಳನ್ನು ಚಿಕಿತ್ಸೆಗಾಗಿ ರೈತರು ಇಲ್ಲಿಗೆ ತಂದರೆ ದನ, ಎಮ್ಮೆಯಂತಹ ದೊಡ್ಡ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ನಾವು ಅಲ್ಲಿಗೆ ತೆರಳಬೇಕಾಗುತ್ತದೆ. ಇಲ್ಲಿ ಸಿಬ್ಬಂದಿ ಕೊರತೆಯಿದ್ದರೂ ನಮ್ಮಿಂದಾಗುವಷ್ಟರ ಮಟ್ಟಿಗೆ ನಾವು ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ– ಡಾ. ಪ್ರಕಾಶ್, ಮುಖ್ಯ ಪಶುವೈದ್ಯಾಧಿಕಾರಿ (ಪ್ರಭಾರ)
ಸಿಬ್ಬಂದಿ ರಜೆಯಾದ್ರೆ ಆಸ್ಪತ್ರೆಗೆ ಬಾಗಿಲು!
ಉಪ್ಪಿನಂಗಡಿಯಲ್ಲಿ ಪ್ರಭಾರ ನೆಲೆಯಲ್ಲಿ ಮುಖ್ಯ ಪಶುವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಪ್ರಕಾಶ್ ಅವರು ಉಪ್ಪಿನಂಗಡಿಯಲ್ಲದೇ, ಕೊಳ್ತಿಗೆ, ನರಿಮೊಗರು, ಪಾಣಾಜೆ ಹೀಗೆ ಒಟ್ಟು ನಾಲ್ಕು ಕಡೆಗಳಲ್ಲಿರುವ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ನಾಲ್ಕು ಕಡೆಗಳಲ್ಲಿನ ಪಶು ಚಿಕಿತ್ಸಾಲಯಗಳ ವ್ಯಾಪ್ತಿಗೆ ಹಲವು ಗ್ರಾಮಗಳು ಬರುತ್ತವೆ. ಇದರೊಂದಿಗೆ ಇಲಾಖಾ ಮೀಟಿಂಗ್, ಕೆಡಿಪಿ ಸಭೆಗಳಿಗೂ ಹಾಜರಾಗಬೇಕಿದೆ. ಇಷ್ಟು ಆಸ್ಪತ್ರೆಗಳಲ್ಲಿ ಅವರು ಕರ್ತವ್ಯ ನಿರ್ವಹಿಸಬೇಕಾಗಿರುವುದರಿಂದ ಉಪ್ಪಿನಂಗಡಿಯಲ್ಲಿ ಅವರು ಲಭ್ಯವಾಗೋದು ವಾರದಲ್ಲಿ ಸೋಮವಾರ ಮತ್ತು ಶುಕ್ರವಾರ ಮಾತ್ರ. ಉಳಿದ ದಿನ ಇಲ್ಲಿರೋದು `ಡಿ’ ದರ್ಜೆ ನೌಕರೋರ್ವರು ಮಾತ್ರ. ರಜಾದಿನಗಳಲ್ಲಿಯೂ ಕೂಡಾ ಬೆಳಗ್ಗೆ ೯ರಿಂದ ಮಧ್ಯಾಹ್ನ ೧ರವರೆಗೆ ಮೇಲ್ದರ್ಜೆಗೇರಿದ ಉಪ್ಪಿನಂಗಡಿ ಪಶು ಆಸ್ಪತ್ರೆಯಲ್ಲಿ ಸೇವೆ ಲಭಿಸುತ್ತದೆ ಎಂದು ನಾಮಫಲಕದಲ್ಲೇನೂ ಇದೆ. ಆದರೆ ವೈದ್ಯಾಧಿಕಾರಿ ಇಲ್ಲದ ದಿನದಲ್ಲಿ ಇಲ್ಲಿರುವ ಓರ್ವ ಸಿಬ್ಬಂದಿ ರಜೆಯಾದರೆ ಸರಕಾರಿ ರಜೆ ಇಲ್ಲದ ದಿನವೂ ಆಸ್ಪತ್ರೆಗೆ ಬಾಗಿಲು ಹಾಕುವ ಪರಿಸ್ಥಿತಿ ಎದುರಾಗಿದೆ. ಅ.೨೨ರ ಶನಿವಾರವೂ ಸಿಬ್ಬಂದಿಯ ರಜೆಯಿಂದಾಗಿ ಇಲ್ಲಿನ ಪಶು ಆಸ್ಪತ್ರೆಗೆ ಬಾಗಿಲು ಹಾಕುವಂತಹ ಪ್ರಸಂಗ ಎದುರಾಗಿದೆ.
ಸರಕಾರಿ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆಯು ಉಪ್ಪಿನಂಗಡಿಯಲ್ಲಿ ಮಾತ್ರ ಅಲ್ಲ. ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಐವರು ವೈದ್ಯರ ಕೊರತೆ ಇದೆ. ಇದಕ್ಕೆ ಮೂಲ ಕಾರಣ ಮೊದಲಿದ್ದ ವೈದ್ಯರೆಲ್ಲಾ ಮುಂಬಡ್ತಿ ಹೊಂದಿ ಬೇರೆ ಬೇರೆ ಕಡೆ ತೆರಳಿದ್ದಾರೆ. ಇನ್ನು ಕೆಲವರು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ. ಇನ್ನೇನಿದ್ದರೂ ವೈದ್ಯರ ಹೊಸ ನೇಮಕಾತಿ ಆಗಬೇಕಷ್ಟೇ. ಈ ಸಮಸ್ಯೆಯನ್ನು ಮನಗಂಡ ನಾನು ಈಗಾಗಲೇ ಪಶು ಸಂಗೋಪನಾ ಇಲಾಖೆಯ ಸಚಿವರಾದ ಪ್ರಭು ಬಿ. ಚೌಹ್ಹಾಣ್ ಅವರನ್ನು ಖುದ್ದು ಭೇಟಿ ಮಾಡಿ ಅವರ ಗಮನಕ್ಕೆ ತಂದಿದ್ದೇನೆ. ಇಲ್ಲಿನ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿದ್ದೇನೆ. ಅಧಿವೇಶನದಲ್ಲೂ ಈ ಬಗ್ಗೆ ಮಾತನಾಡಿದ್ದೇನೆ. ಸಿಬ್ಬಂದಿ ಕೊರತೆಯನ್ನು ನೀಗಿಸುವ ಮೊದಲು ವೈದ್ಯರ ಕೊರತೆ ನೀಗಿಸಲು ಆದ್ಯತೆ ನೀಡಿ ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಸಚಿವರು ಸಕರಾತ್ಮಕ ಸ್ಪಂದನೆ ನೀಡಿದ್ದು, ವೈದ್ಯರ ಹೊಸ ನೇಮಕಾತಿ ಮಾಡುವುದಾಗಿಯೂ ತಿಳಿಸಿದ್ದಾರೆ– ಸಂಜೀವ ಮಠಂದೂರುಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ