ಸರ್ವಧರ್ಮೀಯರ ಸಮನ್ವಯತೆಗೆ ಸಾಕ್ಷಿಯಾದ ಆಧ್ಯಾತ್ಮ ಕಾರ್ಯಕ್ರಮ
ಪುತ್ತೂರು: ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿರುವ ಪ್ರತಿಷ್ಠಿತ ಕಜೆ ಕುಟುಂಬದ ‘ಕೇದಾರ’ ನಿವಾಸದಲ್ಲಿ ಪುತ್ತೂರು ಶ್ರೀ ಸತ್ಯಸಾಯಿ ಸಮಿತಿಯ ಆಶ್ರಯದೊಂದಿಗೆ 55ನೇ ವರ್ಷದ ಸಾಯಿ ಭಜನೆ ಡಿ. ೬ರಂದು ರಾತ್ರಿ ನಡೆಯಿತು.

ಸಂಭ್ರಮ, ಸಡಗರದೊಂದಿಗೆ ಭಕ್ತಿಪೂರ್ವಕವಾಗಿ ನಡೆದ ಈ ಆಧ್ಯಾತ್ಮಿಕ ಕಾರ್ಯಕ್ರಮ ಸರ್ವಧರ್ಮೀಯರ ಸಮನ್ವಯತೆಗೆ ಸಾಕ್ಷಿಯಾಯಿತು.
ಹಿರಿಯ ಸಾಹಿತಿ ದಿ.ಕಜೆ ಈಶ್ವರ ಭಟ್ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ಅವರ ಪುತ್ರರಾದ ಡಾ. ಗೋವಿಂದ ಪ್ರಸಾದ್ ಕಜೆ ಮತ್ತು ಖ್ಯಾತ ವಕೀಲ ಮಹೇಶ್ ಕಜೆ ಸಾರಥ್ಯದಲ್ಲಿ ನಡೆದ ಈ ಮಾದರಿ ಕಾರ್ಯಕ್ರಮದಲ್ಲಿ ವೈದ್ಯರು, ವಕೀಲರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕಾರ್ಮಿಕರು ಸೇರಿದಂತೆ ಸುಮಾರು ಐನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಪುಟ್ಟಪರ್ತಿಯ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ನೂರನೇ ಹುಟ್ಟು ಹಬ್ಬದ ಪ್ರಯುಕ್ತ ಶಕ ಪುರುಷನ ಶತಾಬ್ದಿ ವರ್ಷದ ಸಂಭ್ರಮ ಎಂಬ ಹೆಸರಿನಲ್ಲಿ ಈ ವರ್ಷ ನಡೆದ ಕಾರ್ಯಕ್ರಮ ಎಂದಿನಂತೆ ಶಿಸ್ತು, ಸಮಯ ಪಾಲನೆಯಿಂದ ಗಮನ ಸೆಳೆಯಿತು.
ಕಾರ್ಯಕ್ರಮದ ವೇಳಾಪಟ್ಟಿಯಂತೆ ಸಂಜೆ 6 ಗಂಟೆಗೆ ಸರಿಯಾಗಿ ಭಜನೆ ಪ್ರಾರಂಭಗೊಂಡಿತು. 7.45ರಿಂದ ಪುತ್ತೂರು ಅಂಬಿಕಾ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಆಧ್ಯಾತ್ಮಿಕ ಉಪನ್ಯಾಸ ನೀಡಿದರು. ಮನುಷ್ಯನು ವಿಶ್ವಾಸದಿಂದ ದೇವರಲ್ಲಿ ಪ್ರಾರ್ಥಿಸಿದರೆ ಅವನಿಗೆ ಖಂಡಿತವಾಗಿಯೂ ದೇವರು ಒಲಿಯುತ್ತಾನೆ ಎಂದು ನಿದರ್ಶನಗಳ ಸಹಿತ ವಿವರಿಸಿದ ಆದರ್ಶ ಗೋಖಲೆ ಅವರು ಭಕ್ತಿಯಿಂದ ಬೇಡಿದರೆ ದೇವರು ಹಾಜರಾಗುತ್ತಾರೆ ಎಂಬುದು ಶ್ರದ್ಧೆ, ನಂಬಿಕೆ ಮತ್ತು ನಿಸ್ವಾರ್ಥ ಭಾವನೆಯ ಮಹತ್ವವನ್ನು ತೋರಿಸುವ ಸಂದೇಶವಾಗಿದೆ. ಹೃದಯದಿಂದ, ಶುದ್ಧ ಉದ್ದೇಶದಿಂದ ಮಾಡಿದ ಪ್ರಾರ್ಥನೆ ದೇವರೆಡೆಗೆ ನೇರವಾಗಿ ತಲುಪುತ್ತದೆ ಎಂದು ಭಕ್ತರು ನಂಬುತ್ತಾರೆ. ಭಕ್ತಿಯ ತೀವ್ರತೆಯು ಆತ್ಮವನ್ನು ಶಾಂತಿಗೊಳಿಸಿ ದೇವರ ಸಾನ್ನಿಧ್ಯವನ್ನು ಅನುಭವಿಸುವಂತೆ ಮಾಡುತ್ತದೆ. ದೇವರನ್ನು ಕೇವಲ ಕಣ್ಣುಗಳಿಂದ ನೋಡುವುದಲ್ಲ. ಅವರ ಪ್ರೇರಣೆ, ಕರುಣೆ ಮತ್ತು ಮಾರ್ಗದರ್ಶನವನ್ನು ಮನಸ್ಸಿನಲ್ಲಿ ಅನುಭವಿಸುವುದೂ ಆಗಿದೆ. ನಿಜವಾದ ಭಕ್ತಿ ಇದ್ದರೆ ದೇವರು ದೂರದಲ್ಲಿಲ್ಲ. ಅವರು ನಮ್ಮೊಳಗೇ, ನಮ್ಮ ಪ್ರತಿಯೊಂದು ನಂಬಿಕೆಯ ಕ್ಷಣದಲ್ಲೂ ಇದ್ದಾರೆ ಎಂದರು.
8.15ಕ್ಕೆ ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಿತು.ಆಗಮಿಸಿದ ಭಕ್ತರನ್ನು ‘ಕೇದಾರ’ ಮನೆಯವರಾದ ಡಾ. ಗೋವಿಂದ ಪ್ರಸಾದ ಕಜೆ, ಮಹೇಶ್ ಕಜೆ, ವೀಣಾ ಗೋವಿಂದ ಪ್ರಸಾದ್, ದೀಪಿಕಾ ಭಟ್ ಕಜೆ, ಆರ್.ಡಿ.ಶಾಸ್ತ್ರಿ, ವೀಣಾ ಶಾಸ್ತ್ರಿ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು. ಪುಟ್ಟಪರ್ತಿ ಶ್ರೀ ಸತ್ಯಸಾಯಿ ಬಾಬಾ ಅವರೊಂದಿಗೆ ಅವಿನಾವಭಾವ ಸಂಬಂಧ ಹೊಂದಿರುವ ‘ಕೇದಾರ’ ಮನೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಆಸ್ತಿಕ ಬಂಧುಗಳು ಸಾಕ್ಷಿಯಾದರು. ಸಹಭೋಜನದಲ್ಲಿ ಸರ್ವಧರ್ಮಿಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.