ಮದರಸ ಧಾರ್ಮಿಕ, ನೈತಿಕ ಪ್ರಜ್ಞೆ ಮೂಡಿಸುವ ಕೇಂದ್ರ-ಕಡಲುಂಡಿ ತಂಙಳ್
ಪುತ್ತೂರು: ಮುಹಿಯುದ್ಧೀನ್ ಜುಮಾ ಮಸೀದಿ ಹಾಗೂ ಖಿದ್ಮತುಲ್ ಇಸ್ಲಾಂ ಜಮಾಅತ್ ಕಮಿಟಿ ನೇತೃತ್ವದಲ್ಲಿ ನಿರ್ಮಾಣಗೊಂಡ ಚೆನ್ನಾವರ ಸಿರಾಜುಲ್ ಉಲೂಂ ನೂತನ ಮದ್ರಸ ಕಟ್ಟಡ ಉದ್ಘಾಟನೆ ಅ.27ರಂದು ಬೆಳಿಗ್ಗೆ ನಡೆಯಿತು. ಸಯ್ಯಿದ್ ಬದರ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಅಲ್-ಬುಖಾರಿ ತಂಙಳ್ ಕಡಲುಂಡಿಯವರು ಮದ್ರಸ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮದರಸ ಎಂಬುವುದು ಧಾರ್ಮಿಕ, ನೈತಿಕ ಪ್ರಜ್ಞೆಯನ್ನು ಬೋಧಿಸುವ ಶಿಕ್ಷಣ ಕೇಂದ್ರವಾಗಿದ್ದು ಮದ್ರಸಗಳಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುತ್ತಾರೆ ಎಂದು ಹೇಳಿದರು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಚೆನ್ನಾವರ ಮುದರ್ರಿಸ್ ಸಯ್ಯಿದ್ ಅಬ್ದುಲ್ ಲತೀಫ್ ಬಾಅಲವಿ ತಂಙಳ್ ಅಹ್ಸನಿ ಅಲ್-ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸಿ ದುವಾ ನಿರ್ವಹಿಸಿದರು. ಸಯ್ಯಿದ್ ಹಾಮಿದ್ ತಂಙಳ್ ಮಹಿಮ್ಮಾತ್ ಸಭೆ ಉದ್ಘಾಟಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ ಒಬ್ಬ ವ್ಯಕ್ತಿ ಉತ್ತಮ ಮನುಷ್ಯನಾಗಬೇಕಾದರೆ ಆತನಿಗೆ ಮದರಸ ಶಿಕ್ಷಣ ಅತೀ ಅಗತ್ಯ. ಮದರಸಗಳ ಬಗ್ಗೆ ತಪ್ಪು ಭಾವನೆ ಯಾವತ್ತೂ ಸರಿಯಲ್ಲ ಎಂದರು. ಇಲ್ಲಿನ ಮದರಸ ಮೇಲ್ಛಾವಣಿ ನಿರ್ಮಾಣಕ್ಕೆ ನನ್ನಿಂದಾಗುವ ಸಹಕಾರ ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ದ.ಕ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ ಮದರಸ ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವವಿದ್ದು ವಿದ್ಯಾಭ್ಯಾಸಕ್ಕೆ ನಾವು ಹೆಚ್ಚು ಆದ್ಯತೆ ನೀಡಬೇಕಾಗಿದೆ. ವಕ್ಫ್ ಬೋರ್ಡ್ನಿಂದ ಸಿಗುವ ಸವಲತ್ತುಗಳನ್ನು ಇಲ್ಲಿಗೆ ನೀಡಲು ನಾವು ಸಿದ್ದರಿದ್ದೇವೆ ಎಂದು ಅವರು ಹೇಳಿದರು.
ಸುಳ್ಯ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಜನತಾ ಮಾತನಾಡಿ ಮದರಸ ಶಿಕ್ಷಣ ಅತೀ ಅಗತ್ಯವಾಗಿದ್ದು ಶಿಕ್ಷಣದ ಗುಣಮಟ್ಟದಲ್ಲಿ ಬದಲಾವಣೆ ಆಗಬೇಕಾಗಿದೆ ಎಂದು ಹೇಳಿದರು.
ಕೊಡಗು ವಕ್ಫ್ ಬೋರ್ಡ್ ಮಾಜಿ ಚೇರ್ಮೆನ್ ಹಮೀದ್ ಮಡಿಕೇರಿ ಮಾತನಾಡಿ ಮದರಸದಲ್ಲಿ ನೈತಿಕತೆಯುಳ್ಳ ಧಾರ್ಮಿಕ ಶಿಕ್ಷಣ ಬೋಧಿಸಲಾಗುತ್ತಿದ್ದು ಮದರಸದಲ್ಲಿ ಕಲಿತವರು ಎಂದಿಗೂ ಸಮಾಜದಲ್ಲಿ ಕೆಟ್ಟ ಕೆಲಸ ಮಾಡಲಾರರು ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಗಫೂರ್ ಸಾಹೇಬ್ ಪಾಲ್ತಾಡ್ರವರು ಇಂದು ನಮಗೆಲ್ಲಾ ಸಂತಸದ ದಿನವಾಗಿದ್ದು ಎಲ್ಲರ ಪರಿಶ್ರಮದ ಫಲವಾಗಿ ಸುಮದರವಾದ ಮದ್ರಸ ಚೆನ್ನಾರ್ನಲ್ಲಿ ನಿರ್ಮಾಣವಾಗಿದೆ ಎಂದರು.
ಬೆಳಿಗ್ಗೆ ಹಾಗೂ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಕುಂಞಕೋಯ ತಂಙಳ್ ಸಅದಿ ಸುಳ್ಯ, ಇಸ್ಮಾಯಿಲ್ ತಂಙಳ್ ಮಾಡಾವು, ಚೆನ್ನಾರ್ ಮಸೀದಿಯ ಮಾಜಿ ಅಧ್ಯಕ್ಷ ಪಿ.ಎ ಉಸ್ಮಾನ್ ಹಾಜಿ, ಉದ್ಯಮಿಗಳಾದ ಅಬೂಬಕ್ಕರ್ ಹಾಜಿ ಮಂಗಳ, ಯೂಸುಫ್ ಗೌಸಿಯಾ ಸಾಜ, ಯೂಸುಫ್ ಹಾಜಿ ಕೈಕಾರ, ಖಾದರ್ ಹಾಜಿ ಬಾಯಂಬಾಡಿ, ಹಾಜಿ ಅಬ್ದುಲ್ ಖಾದರ್ ಮೇರ್ಲ, ಇಸಾಕ್ ಹಾಜಿ ಪಾಜಪಳ್ಳ, ಮಮ್ಮಾಲಿ ಹಾಜಿ ಬೆಳ್ಳಾರೆ, ಕೆ.ಎಂ ಹನೀಫ್ ಮಾಡಾವು, ಬಶೀರ್ ವಿಟ್ಲ, ಬಶೀರ್ ಇಂದ್ರಾಜೆ, ಚೆನ್ನಾರ್ ಮಸೀದಿಯ ಮಾಜಿ ಅಧ್ಯಕ್ಷ ಸಾಬು ಸಾಹೇಬ್ ಪಾಲ್ತಾಡ್, ಶಾಕಿರ್ ಹಾಜಿ ಮಿತ್ತೂರು, ಪಾಲ್ತಾಡ್ ಮಸೀದಿ ಅಧ್ಯಕ್ಷ ಹಾಜಿ ಮೊಯ್ದೀನ್ ಕುಂಞಿ, ಚೆನ್ನಾರ್ ಸದರ್ ಮುಅಲ್ಲಿಂ ಮಹಮ್ಮದ್ ಅಲಿ ಸಖಾಫಿ, ಚೆನ್ನಾರ್ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಮಹಮ್ಮದ್ ಶಾಫಿ ಚೆನ್ನಾರ್, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಹಸೈನಾರ್ ಓಟಚಾರಿ, ಕಾರ್ಯದರ್ಶಿ ಅಬ್ಬಾಸ್ ಪೆರ್ಜಿ, ಇಬ್ರಾಹಿಂ ಕುಂಬಮೂಲೆ, ಆಹಾರ ನಿರೀಕ್ಷಕ ಮಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ಗುರು ಶಿಷ್ಯ ಸಂಗಮ ಕಾರ್ಯಕ್ರಮ ನಡೆಯಿತು. ಚೆನ್ನಾರ್ ಮಸೀದಿ ಆಡಳಿತ ಕಮಿಟಿ ಪದಾಧಿಕಾರಿಗಳಾದ ಇಸ್ಮಾಯಿಲ್ ಕಾನಾವು, ಹನೀಫ್ ಕುಂಡಡ್ಕ, ಜಮಾಲ್ ಸಿ.ವೈ, ಶರೀಫ್ ಕುಂಡಡ್ಕ, ಅಬ್ದುರ್ರಹ್ಮಾನ್ ಪಾಲ್ತಾಡ್ ಹಾಗೂ ಜಮಾಅತರು ಸಹಕರಿಸಿದರು. ದ.ಕ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮೊಗರ್ಪಣೆ ಸ್ವಾಗತಿಸಿದರು. ಇಕ್ಬಾಲ್ ಪಾಲ್ತಾಡ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗೌರವಾರ್ಪಣೆ:
ಕೆಪಿಸಿಸಿ ಪ್ರ.ಕಾರ್ಯದರ್ಶಿ ಇನಾಯತ್ ಅಲಿ, ವಕ್ಫ್ ಜಿಲ್ಲಾಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಪೆರುವಾಜೆ ಗ್ರಾ.ಪಂ ಸದಸ್ಯ ಸಚಿನ್ರಾಜ್ ಶೆಟ್ಟಿ, ಇಂಜಿನಿಯರ್ ಶಮೀರ್ ಬಯಂಬಾಡಿ, ಮಹಮ್ಮದ್ ಗಟ್ಟಮನೆ ಮೊದಲಾದವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಧಾರ್ಮಿಕ ಪ್ರಭಾಷಣ:
ಹಾರಿಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ದುವಾಶೀರ್ವಚನ ನೀಡಿದರು. ಆಶಿಕ್ ದಾರಿಮಿ ಆಲಪ್ಪುಝ ಹಾಗೂ ಪೇರೋಡ್ ಮುಹಮ್ಮದ್ ಅಝ್ಹರಿ ಮುಖ್ಯ ಪ್ರಭಾಷಣ ನಡೆಸಿದರು.